ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಬಸವನಾಡು, ಸೂಫಿ-ಸಂತರ ಬೀಡು, ಐತಿಹಾಸಿಕ ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಇದೇ ಫೆಬ್ರುವರಿ 4 ಮತ್ತು 5 ರಂದು ನಡೆಯಲಿರುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಈಗ ಕ್ಷಣಗಣನೆ ಶುರುವಾಗಿದೆ.
ಗುಮ್ಮಟ ನಗರಿಯಲ್ಲಿ ಇದೇ ಪ್ರಥಮ ಬಾರಿ ಆಯೋಜಿಸಿದ ರಾಜ್ಯಮಟ್ಟದ ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಪತ್ರಕರ್ತರು ಹಾಗೂ ಪತ್ರಿಕಾ ವಿತರಕರ ಸಮಸ್ಯೆಗಳ ಕುರಿತು ಎರಡು ದಿನಗಳ ಕಾಲ ಚಿಂತನ-ಮಂಥನ ನಡೆಯಲಿದೆ.
ಇದೇ ಸಂದರ್ಭದಲ್ಲಿ ಸಾಧಕ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ, ಕೆಯುಡಬ್ಲ್ಯೂಜೆ ಹಾಲಿ- ಮಾಜಿ ಪದಾಧಿಕಾರಿಗಳಿಗೆ ಹೃದಯಸ್ಪರ್ಷಿ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ ಹಮ್ಮಿಕೊಂಡಿರುವುದು ಗಡಿನಾಡಿನಲ್ಲಿ ಹೊಸ ಸಂಚಲನ ಮೂಡಿಸಿದೆಯಲ್ಲದೆ, ಜಿಲ್ಲೆಯ ಜನತೆ ಹಾಗೂ ಪತ್ರಕರ್ತರಿಗೂ ತುಂಬ ಹರ್ಷ ತಂದಿದೆ.
ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸುವ ಸಂಕಲ್ಪ ಮಾಡಿದ್ದು, ಸಮ್ಮೇಳನಕ್ಕೆ ದೂರದ ಊರುಗಳಿಂದ ಆಗಮಿಸುವ ಪತ್ರಕರ್ತರಿಗೆ ಆದರಾತಿಥ್ಯ ನೀಡಲು ಜಿಲ್ಲೆಯ ಜನತೆ ಉತ್ಸುಕರಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾರೋಪ ಸಮಾರಂಭಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗಮಿಸಲಿದ್ದಾರೆ. ಅವರೊಂದಿಗೆ ಹಲವಾರು ಸಚಿವರು, ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳೂ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಇಲ್ಲಿನ ಜ್ಞಾನಯೋಗಾಶ್ರಮದ ಲಿಂ. ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಈ ಸಮ್ಮೇಳನ ನಡೆಯಬೇಕಾಗಿತ್ತು. ಶ್ರೀಗಳು ಸಾನಿಧ್ಯ ವಹಿಸಲು ಹರ್ಷದಿಂದ ಒಪ್ಪಿಕೊಂಡಿದ್ದರು. ಸಮ್ಮೇಳನದ ಲಾಂಛನವನ್ನು ಅವರೇ ಬಿಡುಗಡೆಗೊಳಿಸಿ ಸಮ್ಮೇಳನ ಯಶಸ್ವಿಯಾಗಲೆಂದು ಶುಭಹಾರೈಸಿದ್ದರು. ಏತನ್ಮಧ್ಯೆ ಶ್ರೀಗಳು ಲಿಂಗೈಕ್ಯರಾಗಿರುವುದು ಎಲ್ಲರಿಗೂ ತುಂಬ ಆಘಾತ, ನೋವುಂಟು ಮಾಡಿದೆ. ಅವರು ನಮ್ಮೆಲ್ಲರನ್ನು ಅಗಲಿದರೂ ಅವರ ಸ್ಮರಣೆಯೊಂದಿಗೆ ಈ ಸಮ್ಮೇಳನ ನಡೆಯಲಿದೆ.
ಈ ಸಮ್ಮೇಳನಕ್ಕೆ ರಾಜ್ಯದ ನಾನಾ ಭಾಗಗಳಿಂದ ಸುಮಾರು ಐದು ಸಾವಿರಕ್ಕೂ ಅಧಿಕ ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದ್ದು, ಇಲ್ಲಿ ಎರಡು ದಿನಗಳ ಕಾಲ ಪತ್ರಕರ್ತರ ಕಲರವ ಕೇಳಿ ಬರಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸಮ್ಮೇಳನದ ಮೆರಗು ಹೆಚ್ಚಿಸಲಿದೆ.
ಸಮ್ಮೇಳನಕ್ಕೆ ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸುವ ಪತ್ರಕರ್ತರು ಉತ್ತರ ಕರ್ನಾಟಕದ ವಿಶೇಷ ಖಾದ್ಯ ಶೇಂಗಾ ಹೋಳಿಗೆ, ಹುಗ್ಗಿ (ಪಾಯಸ), ಸಜ್ಜೆ ರೊಟ್ಟಿ, ಎಣ್ಣೆಗಾಯಿ, ಗಟ್ಟಿ ಮೊಸರು, ಶೇಂಗಾ ಹಿಂಡಿಯ ರುಚಿ ಸವಿಯುವ ಜೊತೆಗೆ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾದ ವಿಶ್ವವಿಖ್ಯಾತ ಗೋಳಗುಮ್ಮಟ, ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳು, ಶಿವಗಿರಿ, ಹನುಮಗಿರಿ, ಐತಿಹಾಸಿಕ ಭೂತನಾಳ ಕೆರೆ, ಬಸವನ ಬಾಗೇವಾಡಿಯಲ್ಲಿರುವ ಬಸವ ಸ್ಮಾರಕ, ಆಲಮಟ್ಟಿ ಡ್ಯಾಂ, ಹಾಗೂ ಕಣ್ಮನ ತಣಿಸುವ ಸುಂದರ ಉದ್ಯಾನವನಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ಸಮ್ಮೇಳನಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಅಂತಿಮ ಸಿದ್ಧತೆ ಚುರುಕುಗೊಂಡಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಈ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಿವೆ.
ಸಮ್ಮೇಳನದ ಯಶಸ್ವಿಗೆ ರಚಿಸಲಾದ ವಿವಿಧ ಸಮಿತಿಗಳ ಶ್ರಮ ಹಾಗೂ ಜಿಲ್ಲಾಡಳಿತದ ಸಂಪೂರ್ಣ ಸಹಕಾರದಿಂದ ಇದೊಂದು ಐತಿಹಾಸಿಕ ಸಮ್ಮೇಳನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಗಡಿಭಾಗದ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನ ಗುಣಮಟ್ಟದ ಮತ್ತು ಅರ್ಥಪೂರ್ಣವಾದ ಸಮ್ಮೇಳನ ಆಗಬೇಕೆನ್ನುವುದು ನಿರೀಕ್ಷೆ.
ವಿಜಯಪುರದಲ್ಲಿ ಫೆ.4 & 5 ರಂದು ನಡೆಯಲಿರುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಆಹ್ವಾನಿಸಿದರು.
*ಮಂತ್ರಿ ಮಾಡೋದು ಬೇಡ ಅಂತಾ ನಾನೇ ಹೇಳಿದ್ದೇನೆ ಎಂದ ಮಾಜಿ ಸಚಿವ*
https://pragati.taskdun.com/k-s-eshwarappacm-basavaraj-bommaimeetcabinet-expantion/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ