Kannada NewsKarnataka NewsLatest
ಗ್ರಾಮೀಣ ಕ್ಷೇತ್ರದಲ್ಲಿ 3,800 ಜನ ಕ್ವಾರಂಟೈನ್ ನಲ್ಲಿ: ಕಟ್ಟುನಿಟ್ಟಿನ ನಿಗಾಕ್ಕೆ ಹೆಬ್ಬಾಳಕರ್ ಸೂಚನೆ
https://youtu.be/VIp8J-v_en0
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದಿಂದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಾಗಿರುವ ಪರಿಣಾಮ, ಕ್ಷೇತ್ರಕ್ಕೆ ಹೊರದೇಶಗಳಿಂದ ಬಂದಿರುವವರ ಮೇಲೆ ತೆಗೆದುಕೊಂಡಿರುವ ಕ್ರಮ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಎಚ್ಚರಿಕೆಗಳ ಕುರಿತು ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಚರ್ಚಿಸಿದರು.
ಬೆಳಗಾವಿ ತಾಲೂಕಾ ಪಂಚಾಯತ ಸಭಾಗೃಹದಲ್ಲಿ ಸಭೆ ಆಯೋಜಿಸಲಾಗಿತ್ತು. ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 3,800 ಜನರು ಬಂದಿದ್ದಾರೆ. ಈ 3800 ಜನರ ಮೇಲೆ ನಿಗಾ ಇಡಲು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿಗಳಿಂದ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.
ಇವರೆಲ್ಲರನ್ನೂ ಹೋಮ್ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಆದರೆ ಅವರು ಕ್ವಾರಂಟೈನ್ ನಲ್ಲಿ ಇದ್ದಾರೊ ಇಲ್ಲವೋ ಎಂಬುದರ ಕುರಿತು ತೀವ್ರ ನಿಗಾವಹಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಸೂಚಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಭಗವಂತನ ಆಶೀರ್ವಾದಿಂದ ಒಂದೂ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಇದು ಖುಷಿಯ ವಿಚಾರವಾಗಿದೆ. ಜನತೆ ಯಾವಾಗಲೂ ಸ್ವಚ್ಚತಾ ಮನೋಭಾವದಿಂದ ಸುರಕ್ಷಿತವಾಗಿರಬೇಕು. ಕೊರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಕುಟುಂಬ ಸೇರಿದಂತೆ ಯಾವುದೇ ಚಿಂತೆ ಮಾಡದೇ ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಹೆಬ್ಬಾಳಕರ್ ಪ್ರಶಂಸಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿ ಬಂದ್ ಆಗಿರುವುದರಿಂದ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದೆ. 10 ರೂಪಾಯಿಗೆ ಸಿಗುತ್ತಿದ್ದ ಪ್ಯಾಕೆಟ್ ಈಗ 30 ರೂಪಾಯಿಗೆ ಮಾರಾಟವಾಗುತ್ತಿದೆ. ಇಂತಹ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಮತ್ತು ಕಳ್ಳಭಟ್ಟಿ ಮಾರಾಟ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಾ ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ್, ಬೆಳಗಾವಿ ತಾಲೂಕಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಪ್ರೀತಂ ನಸಲಾಪುರೆ, ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ತಹಶೀಲ್ದಾರ್ ಆರ್ ಕೆ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸಾಮಾಜಿಕ ಅಂತರ ಕಾಯುವಂತೆ ಈ ಸಭೆ ಆಯೋಜಿಸುವ ಮೂಲಕ ಕೊರೋನಾ ಸೋಂಕಿನ ಕುರಿತು ಅತ್ಯಂತ ಎಚ್ಚರಿಕೆ ವಹಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ