CrimeKannada NewsKarnataka News

*ಆರು ವಾನಹಗಳ ನಡುವೆ ಸರಣಿ ಅಪಘಾತ: ರಕ್ತಸಿಕ್ತ ಸ್ಥಿತಿಯಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು*

ಪ್ರಗತಿವಾಹಿನಿ ಸುದ್ದಿ: ಆರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಜನರು ರಕ್ತಸಿಕ್ತ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಧಾನಿ ಬೆಂಗಳೂರು ಹೊರವಲಯದ ಡಾಬಸ್‌ಪೇಟೆಯ ಅಂಚೆಮನೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. 

ಅತಿ ವೇಗವಾಗಿ ಬಂದ ವಾಹನವೊಂದು ನಿಯಂತ್ರಣ ತಪ್ಪಿ ಮುಂದಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದೇ ಈ ಅವಘಡಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ಸರಣಿ ಅಪಘಾತದ ತೀವ್ರತೆಗೆ ಒಂದು ಬೈಕ್, ಎರಡು ಕಾರುಗಳು, ಒಂದು ಲಾರಿ, ಸರ್ಕಾರಿ ಬಸ್ ಹಾಗೂ ಒಂದು ಬೊಲೆರೋ ಜೀಪ್ ಸಂಪೂರ್ಣ ಜರ್ಜರಿತವಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಸಂಚಾರಿ ಪೊಲೀಸರು, ಕ್ರೇನ್ ಮೂಲಕ ಜಖಂಗೊಂಡಿದ್ದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಸದ್ಯ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿದ್ದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ವೇಗದ ಚಾಲನೆಯೇ ಈ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Related Articles

Back to top button