*RSS ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಗೆ ಸಂಕಷ್ಟ*: *ಸಚಿವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ದೂರುದಾರ*

ಪ್ರಗತಿವಾಹಿನಿ ಸುದ್ದಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪ ಕೇಳಿಬಂದಿದೆ, ಅಂತರರಾಜ್ಯ ಕಾರ್ಟ್ರಿಡ್ಜ್ ವಶ ಪ್ರಕರಣಕ್ಕೆ ಆರ್ಎಸ್ಎಸ್ ಹೆಸರು ತಳಕು ಹಾಕಿದ್ದೇ ಈ ವಿವಾದಕ್ಕೆ ಕಾರಣವಾಗಿದೆ.
ಬಿಹಾರ ಮತ್ತು ಹರಿಯಾಣದಲ್ಲಿ ಸುಮಾರು 44,250 ಜೀವಂತ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಹೆಸರನ್ನು ತಳಕು ಹಾಕಲು ಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸಚಿವರ ಹೇಳಿಕೆಗಳು ಆರ್ಎಸ್ಎಸ್ಗೆ ಅಪರಾಧ ಚಟುವಟಿಕೆಯೊಂದಿಗೆ ಸಂಪರ್ಕವಿದೆ ಎಂಬ ಭಾವನೆ ಮೂಡಿಸುವಂತಿವೆ. ಈ ಆರೋಪಗಳು ಸುಳ್ಳು ಎಂದು ತಿಳಿದಿದ್ದರೂ ಮಾಹಿತಿ ಹರಡಿದ್ದರೆ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಸಚಿವರ ಹೇಳಿಕೆಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರಲ್ಲಿ ದ್ವೇಷ ಮೂಡಿಸುವ ಉದ್ದೇಶ ಹೊಂದಿವೆ ಎಂಬ ಆರೋಪವೂ ದೂರಿನಲ್ಲಿದೆ. ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 192, 196 ಮತ್ತು 353ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ದೂರುದಾರರು ಮನವಿ ಮಾಡಿದ್ದಾರೆ.
ಗೃಹ ಸಚಿವರಾಗಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ವ್ಯಕ್ತಿಯೇ ಇಂತಹ ಮಾಹಿತಿ ಹರಡಿದರೆ ಅದು ಗಂಭೀರ ವಿಚಾರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿವ ಸ್ಥಾನವು ಕಾನೂನಿನಿಂದ ವಿನಾಯಿತಿ ನೀಡುವುದಿಲ್ಲ. ಸಾಮಾನ್ಯ ನಾಗರಿಕರಿಗೆ ಅನ್ವಯಿಸುವ ಕಾನೂನು ಮಾನದಂಡಗಳೇ ಸಚಿವರಿಗೂ ಅನ್ವಯಿಸಬೇಕು ಎಂಬುದು ದೂರುದಾರರ ವಾದವಾಗಿದೆ.
ಇದಲ್ಲದೆ, ದೂರಿನಲ್ಲಿರುವ ಅಂಶಗಳು ಮತ್ತು ಸಾಕ್ಷ್ಯಗಳು ಅಪರಾಧವನ್ನು ಸೂಚಿಸಿದರೆ ಸ್ವತಂತ್ರ ತನಿಖೆ ನಡೆಸಬೇಕು. ಸಂಬಂಧಿತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು ಎಂದು ಪೊಲೀಸರನ್ನು ಕೋರಲಾಗಿದೆ.
ಅಷ್ಟಕ್ಕೂ ಪ್ರಿಯಾಂಕ್ ಖರ್ಗೆ ಅವರ ಎಕ್ಸ್ ಪೋಸ್ಟ್ನಲ್ಲಿ ಏನಿತ್ತು? ಕಾರ್ಟ್ರಿಡ್ಜ್ ವಶ ಪ್ರಕರಣ ಅಂತರರಾಜ್ಯ ಮದ್ದುಗುಂಡು ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದಿದೆ ಎಂದು ಸಚಿವರು ಹೇಳಿದ್ದರು. ಪ್ರಕರಣದಲ್ಲಿ ಭಾಗಿಯಾದವರು ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ಬಗ್ಗೆ ವರದಿಗಳು ಮತ್ತು ಚಿತ್ರಗಳಿವೆ ಎಂದು ಉಲ್ಲೇಖಿಸಿ, ಆರ್ಎಸ್ಎಸ್ ಮತ್ತು ಬಿಜೆಪಿ ಉತ್ತರ ನೀಡಬೇಕು ಎಂದು ಐದು ಪ್ರಶ್ನೆಗಳನ್ನು ಎತ್ತಿದ್ದರು. ಆರ್ಎಸ್ಎಸ್ ನೋಂದಣಿಯಾಗಬೇಕು ಎಂಬ ತಮ್ಮ ಹಿಂದಿನ ಒತ್ತಾಯವನ್ನೂ ಪುನರುಚ್ಚರಿಸಿದ್ದರು.
ಇನ್ನು, ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ಪೊಲೀಸರು ಸುಮಾರು 19,250 ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದರೆ, ಹರಿಯಾಣದ ಝಜ್ಜರ್ನ ರೋಹಾಡ್ ಟೋಲ್ ಪ್ಲಾಜಾ ಬಳಿ ಎಸ್ಟಿಎಫ್ ಸುಮಾರು 25,000 ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದೆ. ಈ ಅಂತರರಾಜ್ಯ ಜಾಲದ ತನಿಖೆ ಮುಂದುವರಿದಿದ್ದು, ಯಾವುದೇ ಸಂಘಟನೆಯ ಪಾತ್ರ ಇನ್ನೂ ಸ್ಥಾಪಿತವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.



