*4 ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲಭೂತ ಸೌಕರ್ಯ: ಇಂಧನ ಸಚಿವ ಕೆ.ಜೆ.ಜಾರ್ಜ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ 4 ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗುರುವಾರ ವಿಧಾನ ಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನೊಂದಾಯಿಸಲ್ಪಟ್ಟ 500 ಮೀಟರ್ ವ್ಯಾಪ್ತಿಯೊಳಗಡೆ ಇರುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. 500 ಮೀಟರ್‍ಯಿಂದ ಆಚೆ ಇರುವ ಪಂಪ್ ಸೆಟ್‍ಗಳಿಗೆ ಕೇಂದ್ರ ಸರ್ಕಾರದ ಶೇ.30 ಹಾಗೂ ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡಿ, ಸೋಲಾರ್ ಪಂಪ್ ಸೆಟ್ ಅಳವಡಿಸಲು ಕ್ರಮವಹಿಸಲಾಗಿದೆ. ದಿನಾಂಕ 22.09.2023ರ ನಂತರ ನೊಂದಾಯಿಸಲ್ಪಡುವ ಐಪಿ ಸೆಟ್‍ಗಳಿಗೆ ಮೂಲಸೌಕರ್ಯಗಳನ್ನು ರೈತರು ಸ್ವಯಂ-ಕಾರ್ಯನಿರ್ವಹಣೆಯಡಿ ತಾವೇ ಮಾಡಿಕೊಳ್ಳಬೇಕು ಎಂಬ ನಿಯಮವಿತ್ತು. ಇದನ್ನು ಮಾರ್ಪಡಿಸಿ ಸರ್ಕಾರವೇ ಮೂಲ ಸೌಕರ್ಯ ಒದಗಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂದರು.
ರಾಜ್ಯದಲ್ಲಿ ಕೃಷಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆಯಿಂದಾಗಿ ಜಲಮೂಲದಿಂದ ಉತ್ಪತ್ತಿಯಾಗುತ್ತಿದ್ದ ವಿದ್ಯುತ್ ಪ್ರಮಾಣ ಕಡಿಮೆಯಾಗಿದೆ. ಇದರೊಂದಿಗೆ ರಾಜ್ಯದ ವಿದ್ಯುತ್ ಬೇಡಿಕೆ 8000 ಮೆಗಾ ವ್ಯಾಟ್ ನಿಂದ 16500 ಮೆಗಾ ವ್ಯಾಟ್‍ಗೆ ಏರಿಕೆಯಾಗಿ, ವಿದ್ಯುತ್ ಅಭಾವ ಉಂಟಾಗಿತ್ತು. ಹೊರ ರಾಜ್ಯಗಳಿಂದ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿಸಲಾಗಿದೆ. ಇದರೊಂದಿಗೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿಯೂ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಸದ್ಯ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರೆತೆ ಇಲ್ಲ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಲಭ್ಯವಿದೆ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.
2004ರಲ್ಲಿ ಹೆಚ್.ಡಿ.ರೇವಣ್ಣ ಅವರು ಇಂಧನ ಸಚಿವರಿದ್ದಾಗ 60 ಸಾವಿರ ಹಾಗೂ 2008ರಲ್ಲಿ ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಿದ್ದಾಗ 1.50 ಲಕ್ಷ ಕೃಷಿ ಪಂಪ್ ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ಕ್ರಮಬದ್ದಗೊಳಿಸಲು ತೀರ್ಮಾನಿಸಲಾಗಿತ್ತು. ಅಂದಿನಿಂದಲೂ ಸರ್ಕಾರಗಳು ಅನಧಿಕೃತ ಕೃಷಿ ಪಂಪ್ ಸೆಟ್‍ಗಳನ್ನು ಸಕ್ರಮಗೊಳಿಸುವುದನ್ನು ಮುಂದುವರಿಸುಕೊಂಡು ಬಂದಿವೆ. ರಾಜ್ಯದಲ್ಲಿ ವಿದ್ಯುತ್ ಪರಿವರ್ತಕಗಳ ಕೊರತೆ ಇಲ್ಲ. ಹಾನಿಯಾದ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಸಮಯದಲ್ಲಿ ಬದಲಾವಣೆ ಮಾಡಿಕೊಡಲಾಗುತ್ತಿದೆ. ಆದರೂ ಕೆಲವು ಕಡೆ ಪರಿವರ್ತಕದ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬೀಳುವುದರಿಂದ ಪದೇ ಪದೇ ಪರಿವರ್ತಕಗಳು ಹಾನಿಗೆ ಒಳಗಾಗುತ್ತಿವೆ ಎಂದರು.
ರೈತರು ತಮ್ಮ ಕೃಷಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ವಿದ್ಯುತ್ ಕಂಬ, ಪರಿವರ್ತಕ, ವಿದ್ಯುತ್ ತಂತಿ ಹಾಗೂ ಸೇವಾ ಶುಲ್ಕಗಳನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಬೇಕು. ಇದಕ್ಕೆ ಸುಮಾರು 2 ರಿಂದ 3 ಲಕ್ಷ ರೂಪಾಯಿಗಳು ಖರ್ಚಾಗುತ್ತವೆ. ಇದು ರೈತರಿಗೆ ಹೊರೆಯಾಗುವುದರಿಂದ ಸರ್ಕಾರಕವೇ ಈ ಎಲ್ಲಾ ವೆಚ್ಚಗಳನ್ನು ಭರಿಸಿ ವಿದ್ಯುತ್ ಸಂಪರ್ಕ ಕಲ್ಲಿಸಿಕೊಡಬೇಕು ಎಂದು ಕಾಗವಾಡ ಶಾಸಕ ಭರಮಗೌಡ ಅಲಗೌಡ ಕಾಗೆ ಇಂಧನ ಸಚಿವರಲ್ಲಿ ಕೋರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ