ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ಬಿಜೆಪಿ ಸರಕಾರದ 40 % ಕಮಿಷನ್ ಭ್ರಷ್ಟಾಚಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬೆಳಗಾವಿ ಗ್ರಾಮೀಣ ಜಿಲ್ಲೆ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಎಚ್.ಕೆ.ಪಾಟೀಲ, ರಮೇಶಕುಮಾರ, ಪ್ರಿಯಾಂಕ್ ಖರ್ಗೆ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ನೂತನ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.
*ಬೆಳಗಾವಿಯಲ್ಲಿ ಪ್ರತಿಭಟನೆಗೆ ಮೊದಲು ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*
ಇಂದು ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧಕ್ಕೆ ವಾಹನಗಳಲ್ಲಿ ತೆರಳುತ್ತಿದ್ದೇವೆ. ಎಲ್ಲ ಶಾಸಕರುಗಳು ಒಗ್ಗಟ್ಟಾಗಿ ಹೋಗುತ್ತಿದ್ದೇವೆ.
ಈ ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ. ಪ್ರತಿ ಹಂತದಲ್ಲೂ ಈ ಸರ್ಕಾರದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಯಾವುದೇ ದಾಖಲೆ ಇಲ್ಲದೇ ನಮ್ಮ ಸರ್ಕಾರವನ್ನು 10 % ಸರ್ಕಾರ ಎಂದು ಹೇಳಿದ್ದರು. ಆದರೆ ಈಗ ಅವರ ಸರ್ಕಾರದ ವಿರುದ್ಧ ದಾಖಲೆಗಳೇ ಇವೆ. ಈ ವಿಚಾರವಾಗಿ ತನಿಖೆ ನಡೆಸಿ, ನಾವು ತಪ್ಪು ಮಾಡಿದ್ದರೆ ನಮ್ಮ ಅವಧಿಯಲ್ಲಿನ ಕಾಮಗಾರಿಗಳನ್ನು ಸೇರಿಸಿ ತನಿಖೆ ಮಾಡಿ ಎಂದು ಹೇಳುತ್ತಿದ್ದೇವೆ.
40 % ಕಮಿಷನ್ ಸೇರಿದಂತೆ ಹಲವು ವಿಚಾರಗಳಿಂದ ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದೆ. ನಾನು ಐದಾರು ವಿಷಯಗಳನ್ನು ಇಟ್ಟುಕೊಂಡಿದ್ದೇನೆ. ಈ ಭಾಗದ ರೈತರ ಬೆಳೆಹಾನಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಕೇಂದ್ರದ ಅನುದಾನ ಕಾಯದೆ ಅವರಿಗೆ ಪರಿಹಾರ ನೀಡಿ, ಮನೆ ಕಟ್ಟಿಕೊಡಿ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಅವರಿಗೆ ನಾವು ಧ್ವನಿ ಸೇರಿಸುತ್ತೇವೆ. ಇದುವರೆಗೂ ಒಬ್ಬರಿಗೂ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ.
ಕೋವಿಡ್ ನಿಂದ ನಷ್ಟ ಅನುಭವಿಸಿದವರಲ್ಲಿ ಯಾರಿಗೆ ಪರಿಹಾರ ಕೊಟ್ಟಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಲಿ. ಸತ್ತವರಿಗೆ ಕೊಟ್ಟಿದ್ದಾರಾ? ಇಲ್ಲ. ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬಂದಾಗ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸುಮಾರು 50 ಮಂದಿ ನೋವು ತೋಡಿಕೊಂಡಿದ್ದರು. ಈ ರೀತಿ ಎಲ್ಲ ಕ್ಷೇತ್ರದಲ್ಲೂ ಸರ್ಕಾರ ವಿಫಲವಾಗಿದೆ. ಈ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿದೆ ಎಂದು ಹೇಳಬೇಕಲ್ಲವೇ? ಹೀಗಾಗಿ ನಾವು ಒಂದು ದಿನ ರೈತರ ವಿಚಾರವಾಗಿ, ಮತ್ತೊಂದು ದಿನ ನೆರೆ ವಿಚಾರವಾಗಿ, ಈಗ ಭ್ರಷ್ಟಾಚಾರ ಹಾಗೂ 40 % ಕಮಿಷನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ.
ಇದು ಕೇವಲ ಬಿಜೆಪಿ ಸರ್ಕಾರವಲ್ಲ, ಸಂಯುಕ್ತ ಸರ್ಕಾರ .ಇದಕ್ಕೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಜನರನ್ನು ಕರೆದುಕೊಂಡು ಹೋಗಬೇಕಾಗಿಲ್ಲ. ಜನ ಮತ ಹಾಕುವ ಮೂಲಕ ನಮಗೆ ಬೆಂಬಲ ನೀಡಿದ್ದಾರೆ.
*ಯಡಿಯೂರಪ್ಪ ಅಭಿಮತಕ್ಕೆ ಸಹಮತ*
ನೆರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈಗಾಗಲೇ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಗೆ ನಾನು ಧ್ವನಿಗೂಡಿಸಿದ್ದೇನೆ, ಅವರ ಅಭಿಮತಕ್ಕೆ ನಮ್ಮ ಸಹಮತ ಇದೆ ’ ಎಂದರು.
ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಇದೆ. ಹೀಗಾಗಿ ಈಗ ಈ ಕಾಯ್ದೆ ಯಾಕೆ ಬೇಕು? ಬಿಜೆಪಿಯವರಿಗೆ ಮೇಲಿಂದ ಮೇಲೆ ಚುನಾವಣೆ ಸೋಲನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಈ ಸರ್ಕಾರದ ವಿರುದ್ಧ ಜನ ಬೇಸತ್ತು ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಏನೇನೋ ಆಟ ಆಡುತ್ತಿದ್ದಾರೆ. ಅದೆಲ್ಲ ಕಾನೂನಿನಲ್ಲಿ ಮಾಡಲು ಸಾಧ್ಯವಿಲ್ಲ. ಅವರಲ್ಲೇ ಸಾಕಷ್ಟು ಸಮಸ್ಯೆ ಇದೆ. ಜೈನ, ಬೌದ್ಧ, ಕ್ರೈಸ್ತ, ಹಿಂದೂಗಳಲ್ಲಿ ಮತಾಂತರವಿದೆ. ಈಗ 10 ವರ್ಷ ಜೈಲು ಎಂದು ಮಾಡಲು ಹೊರಟಿದ್ದಾರೆ ಎಂದು ಮಾಧ್ಯಮದಲ್ಲಿ ನೋಡಿದೆ. ರಾಜ್ಯದ ನೆಮ್ಮದಿಗೆ ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ.
*ಭಾವನಾತ್ಮಕವಾಗಿ ದಾರಿ ತಪ್ಪಿಸುವ ಹುನ್ನಾರ*
ಬಿಜೆಪಿ ಸರ್ಕಾರ ಜನರನ್ನು ಭಾವನಾತ್ಮಕವಾಗಿ ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ ಅವರು ಹೇಳಿರುವಂತೆ ನಾವೆಲ್ಲಾ ಹಿಂದೂಗಳು. ಗಾಂಧಿ ಹಿಂದೂ, ರಾಮ ಹಿಂದೂ. ಆದರೆ ಬಿಜೆಪಿ ಅವರದ್ದು ಹಿಂದುತ್ವ. ರಾಮಾಯಣದಲ್ಲಿ ಬಹಳ ಪಾವಿತ್ರತೆ ಇರುವ ಸೀತೆಯ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಸೀತಾರಾಮ, ಜೈರಾಮ್ ಎನ್ನುವ ನಾವು ಹಿಂದೂಗಳಲ್ಲವೇ?
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕರನ್ನು ಅಮಾನತು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ’15 ಶಾಸಕರನ್ನು ಕಲಾಪದಿಂದ ಹೊರಗಿಡುವ ಮೂಲಕ ಇತಿಹಾಸ ಬರೆಯಲಾಗಿದೆ. ಒಬ್ಬ ಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದರೆ, ಅದರ ಬಗ್ಗೆ ನೋಟೀಸ್ ಕೊಟ್ಟು ಚರ್ಚೆ ಮಾಡಬೇಕು ಎಂದರೆ, ಆ ರೀತಿ ಮಾಡಿದರೆ ನಿಮ್ಮನ್ನು ಅಮಾನತು ಮಾಡುತ್ತೇವೆ ಎಂದು ಹೇಳಿದ್ದು ಎಲ್ಲಾದರೂ ಇಂಟೇ? ಇದು ಯಾವ ಸರ್ಕಾರ? ಇದು ಪ್ರಜಾಪ್ರಭುತ್ವದ ಸರ್ಕಾರವಾ? ಏನಿದು? ನನಗೆ ಆಶ್ಚರ್ಯ ಎಂದರೆ ಹೊರಟ್ಟಿ ಅವರು 7 ಬಾರಿ ಪರಿಷತ್ತಿನಲ್ಲಿ ಗೆದ್ದವರು. ಅವರು ಸಭಾಪತಿಗಳು. ಜನರ ಪರವಾಗಿ ಧ್ವನಿ ಎತ್ತಲು ನಾವು ಬಂದಿದ್ದೇವೆ. ಜನರ ಧ್ವನಿ, ಭಾವನೆ ಪರವಾಗಿ ನಾವು ಹೋರಾಡುತ್ತೇವೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಬೆಳಗಾವಿಯಲ್ಲಿ ಸಾವಿರಾರು ಜನ ಸುವರ್ಣಸೌಧದ ಬಳಿ ಧರಣಿ ಮಾಡುತ್ತಿದ್ದಾರೆ’ ಎಂದು ಹೇಳಿದರು.
ವಿಧಾನ ಮಂಡಳ ಅಧಿವೇಶನದ 3ನೇ ದಿನದ ಕಲಾಪಗಳ ಸಮಗ್ರ ಸುದ್ದಿ: ಇಂದು ಏನೇನಾಯ್ತು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ