Kannada NewsKarnataka NewsLatestNational

*ಚುನಾವಣಾ ಆಯೋಗದ ಬೆಂಬಲಕ್ಕೆ ನಿಂತ 42 ಮಾಜಿ ನ್ಯಾಯಮೂರ್ತಿಗಳು*: *ಬಹಿರಂಗ ಪತ್ರ ಬರೆದು ವಿಪಕ್ಷಗಳಿಗೆ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಈ ಬೆನ್ನಲ್ಲೇ 42 ಮಾಜಿ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಹಿರಿಯ ಅಧಿಕಾರಿಗಳು ಸಾಂವಿಧಾನಿಕ ಸಂಸ್ಥೆಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ತಂಡ, ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಟೀಕೆಗಳ ಸ್ವರೂಪದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ (INDIA) ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳ ಆರೋಪ ಮಾಡಿವೆ. ಈ ರಾಜಕೀಯ ಸಂಘರ್ಷದ ನಡುವೆಯೇ ಮಾಜಿ ನ್ಯಾಯಮೂರ್ತಿಗಳ ಪತ್ರ ಚರ್ಚೆಗೆ ಬಂದಿದೆ.

ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ಟೀಕಿಸುವುದು ನಾಗರಿಕರ ಹಕ್ಕು ಎಂದು ಪತ್ರದಲ್ಲಿ ಒಪ್ಪಿಕೊಳ್ಳಲಾಗಿದೆ. ಆದರೆ, ಸಂಸ್ಥೆಗಳನ್ನು ‘ಕಳ್ಳರು’, ‘ಕೈಗೊಂಬೆಗಳು’ ಮತ್ತು ‘ರಾಜಿ ಮಾಡಿಕೊಂಡ ಸಂಸ್ಥೆಗಳು’ ಎಂದು ಕರೆಯುವ ಮೂಲಕ ನಿಂದಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಪಕ್ಷಗಳು ಮಾಡುತ್ತಿರುವ ‘ಮತಗಳ ಕಳ್ಳತನ’ದ ಆರೋಪಗಳ ಕುರಿತು ಪತ್ರದಲ್ಲಿ ಪ್ರಶ್ನೆ ಎತ್ತಲಾಗಿದೆ. ಇಂತಹ ಗಂಭೀರ ಆರೋಪಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡುವ ಬದಲು, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಚುನಾವಣಾ ಆಯೋಗ ಅಥವಾ ನ್ಯಾಯಾಲಯಗಳ ಮುಂದೆ ಮಂಡಿಸಬೇಕು ಎಂದು ಹೇಳಿದ್ದಾರೆ.

ಚುನಾವಣಾ ಆಯೋಗವು ಆರೋಪಗಳಿಗೆ ಸಂಬಂಧಿಸಿದಂತೆ ಪ್ರಮಾಣೀಕೃತ ಘೋಷಣೆ ಹಾಗೂ ಸಾಕ್ಷ್ಯಗಳನ್ನು ಕೇಳಿದಾಗ ರಾಜಕೀಯ ಪಕ್ಷಗಳು ಸಮರ್ಪಕವಾಗಿ ಮುಂದೆ ಬಂದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇವಿಎಂ ಯಂತ್ರಗಳ ಮೂಲಕ ಚುನಾವಣೆ ನಡೆದು ಗೆಲುವು ಸಾಧಿಸಿದಾಗ ಆಕ್ಷೇಪ ವ್ಯಕ್ತಪಡಿಸದೆ, ಸೋತಾಗ ಮಾತ್ರ ಇವಿಎಂಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಜನಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 21(3) ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರವಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಅರ್ಹವಲ್ಲದ ಹೆಸರುಗಳನ್ನು ಗುರುತಿಸಿ ಮತದಾರರ ಪಟ್ಟಿಯನ್ನು ನವೀಕರಿಸುವುದು ಈ ಪ್ರಕ್ರಿಯೆಯ ಉದ್ದೇಶ. ಈ ಕ್ರಮದ ಕಾನೂನುಬದ್ಧತೆಯ ಕುರಿತು ಸುಪ್ರೀಂ ಕೋರ್ಟ್‌ನ ನಿಲುವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ನಂಬಿಕೆಯೇ ಪ್ರಜಾಪ್ರಭುತ್ವದ ಕರೆನ್ಸಿ”. ಮತದಾನ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ನಿರಂತರವಾಗಿ ಅನುಮಾನ ಮೂಡಿಸುವುದರಿಂದ ಜನರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಆಕ್ಷೇಪಣೆಗಳನ್ನು ಕಾನೂನುಬದ್ಧ ಮಾರ್ಗಗಳಲ್ಲಿ ಮುಂದಿಡಬೇಕು ಎಂದು ಪತ್ರದಲ್ಲಿ ಕರೆ ನೀಡಲಾಗಿದೆ. ಚುನಾವಣಾ ಆಯೋಗ ಅಥವಾ ನ್ಯಾಯಾಲಯಗಳ ಮುಂದೆ ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸುವಂತೆ ಸಲಹೆ ನೀಡಲಾಗಿದೆ.

ಮಾಧ್ಯಮಗಳಿಗೂ ಮನವಿ ಮಾಡಿರುವ ಮಾಜಿ ನ್ಯಾಯಮೂರ್ತಿಗಳು, ಕೇವಲ ಸುದ್ದಿಯ ಶೀರ್ಷಿಕೆಗಳಿಗಾಗಿ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸದೆ ವರದಿ ಮಾಡಬಾರದು ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button