Kannada NewsKarnataka NewsNationalPolitics

*ತಮಿಳುನಾಡಿಗೆ 30 ಟಿಎಂಸಿ ನೀರು ಹರಿಸಲಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಬಿಳಿಗುಂಡ್ಲುವಿನಲ್ಲಿ ದಾಖಲಾದಂತೆ ಇದುವರೆಗೂ ತಮಿಳುನಾಡಿಗೆ 30 ಟಿಎಂಸಿ ನೀರನ್ನು ಹರಿಸಲಾಗಿದೆ. 10 ಟಿಎಂಸಿ ನೀರನ್ನು ಹರಿಸಿದರೆ ಸಾಮಾನ್ಯ ವರ್ಷದಲ್ಲಿ 40 ಟಿಎಂಸಿ ನೀರು ಹರಿಸಿದಂತಾಗುತ್ತದೆ. ನಿತ್ಯ 51 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ಜಲಾನಯನ ಪ್ರದೇಶದಿಂದ ಹರಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೆಆರ್ ಎಸ್ ಅಣೆಕಟ್ಟು ವೀಕ್ಷಣೆ ನಂತರ ಅಣೆಕಟ್ಟೆ ಬಳಿ ಮತ್ತು ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಡಿಸಿಎಂ ಅವರು, “ಕಾವೇರಿ ಜಲಾನಯನ ಪ್ರದೇಶಗಳಲ್ಲಿ 1,657 ಕೆರೆಗಳಿವೆ. ಮುಂಜಾಗ್ರತ ಕ್ರಮವಾಗಿ ಎಲ್ಲಾ ಕೆರೆಗಳನ್ನು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಸಚಿವರ ನೇತೃತ್ವದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. 5.90 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ, 27 ಲಕ್ಷ ಟನ್ ರಸಗೊಬ್ಬರ ಸಂಗ್ರಹ, 30 ಲಕ್ಷ ರೈತರಿಗೆ ಸಹಕಾರಿ ಸಂಘಗಳಿಂದ ತಲಾ 25 ಸಾವಿರ ಕೋಟಿ ರೂ. ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ನಮ್ಮ ಸರ್ಕಾರ ರೈತರ ಬದುಕಿಗೆ ಪೂರಕವಾಗಿದೆ. ರೈತರ ಹಿತ ಕಾಯಲು ಬದ್ದತೆ ಹೊಂದಿದ್ದೇವೆ. ನಮ್ಮದು ಬೂಟಾಟಿಕೆಯ ಮಾತಲ್ಲ. ಪ್ರಚಾರಕ್ಕೆ ಮಾಡುವುದಲ್ಲ, ನಮ್ಮ ವಿಚಾರ, ಆಚಾರ ಎಲ್ಲವೂ ರೈತರ ಪರ.  ಕಾವೇರಿ ನೀರು ನಿರ್ವಹಣಾ ಸಮಿತಿಯು ಜುಲೈ 11 ರಿಂದ 30 ರ ತನಕ 20 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಆದರೆ ನಾವು ನೀರನ್ನು ಹರಿಸಲಿಲ್ಲ. ನಮ್ಮ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿತ್ತು” ಎಂದರು.

“ವರುಣನ ಕೃಪೆ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಕಾವೇರಿ ತಾಯಿಗೆ ಬಾಗಿನ ಅರ್ಪಿಸುವ ಅವಕಾಶ ದೊರೆತಿದೆ. ಕಳೆದ ವರ್ಷ ಮಳೆ ಕೊರತೆ ಕಾಲದಲ್ಲೂ ರೈತರನ್ನು ಕಾಪಾಡಿದ್ದೆವು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮುಖಂಡತ್ವದಲ್ಲಿ ಅವರ ಬೆಳೆಗಳಿಗೆ ನೀರು ಹರಿಸಿದ್ದೆವು. 200 ಕ್ಕೂ ಹೆಚ್ಚು ತಾಲ್ಲೂಕುಗಳು ಬರಗಾಲ ಎದುರಿಸಿದ್ದವು.  ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು.

ಕಾವೇರಿ ಆರತಿ ಆರಂಭಿಸಲು ಚಿಂತನೆ

“ವಾರಣಾಸಿಯಲ್ಲಿ ಗಂಗಾ ಆರತಿ ನಡೆಸಿದಂತೆ, ಕಾವೇರಿ ಆರತಿ ಕಾರ್ಯಕ್ರಮ ಪ್ರಾರಂಭಿಸುವ ಆಲೋಚನೆ ಇದೆ. ಕೊಡಗು, ಮೈಸೂರು ಹಾಗೂ ಕಾವೇರಿ ಪ್ರದೇಶದ ಶಾಸಕರು ಹಾಗು ಅಧಿಕಾರಿಗಳು ಸೇರಿದ 20 ಜನರ ಸಮಿತಿಯನ್ನು ರಚನೆ ಮಾಡಿ, ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಲ್ಲಿಂದ ಒಂದು ತಂಡವನ್ನು ಕರೆದುಕೊಂಡು ಬಂದು ಯಾವ ಜಾಗದಲ್ಲಿ ಕಾವೇರಿ ಆರತಿ ನಡೆಸಬಹುದು ಎಂದು ಜಾಗ ಗುರುತಿಸಲಾಗುವುದು. ಒಂದು ತಿಂಗಳ ಒಳಗಾಗಿ ಈ ಕಾರ್ಯಕ್ರಮ ಮಾಡಲಾಗುವುದು. ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಇತರೇ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸುತ್ತವೆ” ಎಂದು ಹೇಳಿದರು.

ಪಿಪಿಪಿ ಮಾದರಿಯಲ್ಲಿ ಬೃಂದಾವನಕ್ಕೆ ಹೊಸ ರೂಪ

“ಕಾವೇರಿ ಬೃಂದಾವನ ಅಮ್ಯೂಸ್ ಮೆಂಟ್ ಉದ್ಯಾನಕ್ಕೆ ಹೊಸ ರೂಪ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದರ ಅಭಿವೃದ್ದಿ ಮಾಡಲಾಗುವುದು. ಈ ವಿಚಾರ ಇನ್ನೆರಡು ದಿನಗಳಲ್ಲಿ ಕ್ಯಾಬಿನೆಟ್ ಮುಂದೆ ಚರ್ಚೆಗೆ ಬರುತ್ತದೆ. ಈ ಯೋಜನೆಯಿಂದ ಈ ಭಾಗದ 8-10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ಕಳೆದ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ದಿನಕ್ಕೆ ಬರುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಪ್ರವಾಸಕ್ಕೆ ಬಂದವರು ಒಂದೆರಡು ದಿನ ಇಲ್ಲಿ ಉಳಿದುಕೊಂಡು ಹೋಗುವಂತಹ ವ್ಯವಸ್ಥೆ ಮಾಡಬೇಕು. ಬೆಂಗಳೂರಿನಿಂದ ಒಂದೂವರೆ ತಾಸಿನಲ್ಲಿ ಬರಬಹುದು. ಇಲ್ಲಿಂದ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬಹುದು” ಎಂದು ತಿಳಿಸಿದರು.

ಬೃಂದಾವನದಲ್ಲಿ ಹೊಸ ಯೋಜನೆ ಇರುತ್ತದೆಯೇ? ಅಥವಾ ಹೊಸ ಮಾದರಿ ಇರಲಿದೆಯೇ ಮತ್ತು ಈಗ ಇರುವ ಅವಲಂಭಿತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದಾಗ “ಯೋಜನೆಯ ಸಂಪೂರ್ಣ ವರದಿ ಬಂದಾಗ ಈ ಎಲ್ಲದರ ಬಗ್ಗೆ ಪರಿಶೀಲಿಸಲಾಗುವುದು. ಸ್ಥಳೀಯರು ಯಾವುದೇ ಆತಂಕ ಪಡಬೇಕಾಗಿಲ್ಲ. 10 ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡರೆ ದೊಡ್ಡ ಯೋಜನೆ ಸಾಕಾರವಾಗುವುದಿಲ್ಲ. ಹೂವಿನ ಹಾರ ಹಾಕುವವರು, ಕಲ್ಲು ಹೊಡೆಯುವವರು ಎಲ್ಲರೂ ಇದ್ದೇ ಇರುತ್ತಾರೆ. ಗುಂಡೂರಾವ್ ಅವರ ಕಾಲದಲ್ಲಿ ಕಾರಂಜಿಗಳನ್ನು ಮಾಡಲಾಯಿತು. ಈಗ ಹೊಸ ರೀತಿಯಲ್ಲಿ ವಿನ್ಯಾಸ ಮಾಡಲಾಗುವುದು. ಕಾವೇರಿ, ಬೃಂದಾವನ ಹೆಸರನ್ನು ಬಿಡುವ ಪ್ರಮೇಯವೇ ಇಲ್ಲ. ಇವು ನಮ್ಮ ಬ್ರಾಂಡ್” ಎಂದರು.

ಗ್ರಾಮಗಳನ್ನು ಒಕ್ಕಲೆಬ್ಬಿಸಲಾಗುತ್ತದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಯಾರನ್ನೂ ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗ ಇರುವ ಜಮೀನಿನಲ್ಲೆ ಯೋಜನೆ ಮಾಡಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಮಧ್ಯದಲ್ಲಿ ಯಾವುದಾದರೂ ಭೂಮಿ ಇದ್ದರೆ ಅದನ್ನು ಪಡೆಯಲಾಗುವುದು. ತಾಂತ್ರಿಕ ಸಮಿತಿ ವರದಿಯ ನಂತರ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.

ಅಂದಾಜು ವೆಚ್ಚದ ಬಗ್ಗೆ ಕೇಳಿದಾಗ, “ಪಿಪಿಪಿ ಮಾದರಿಯಲ್ಲಿ ಬರುವವರು ಎಷ್ಟು ಬಂಡವಾಳ ಹಾಕುತ್ತಾರೆ ಎನ್ನುವುದು ಯಾರಿಗೆ ತಿಳಿದಿದೆ? ನಾನು ಇನೋವ ಕಾರಿನಲ್ಲಿ ಬಂದೆ ಮದ್ದೂರು ಶಾಸಕ ಬೆಂನ್ಜ್ ಕಾರಿನಲ್ಲಿ ಬಂದರು. ರೈತ ಸಂಘದ ಶಾಸಕರು ಸಾಮಾನ್ಯ ಕಾರಿನಲ್ಲಿ ಬಂದರು. ಅವರ ಅನುಕೂಲಕ್ಕೆ ತಕ್ಕಂತೆ ಆಗುತ್ತದೆ” ಎಂದು ಹೇಳಿದರು.

ಅಣೆಕಟ್ಟು ಸುರಕ್ಷತೆಯ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್ ನಿಲ್ಲಿಸುವ ಬಗ್ಗೆ ಕೇಳಿದಾಗ “ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಮಗೆ ಎಲ್ಲಿ ಬೇಕಾದರೂ ಕಲ್ಲು ಸಿಗುತ್ತದೆ. ಡ್ಯಾಂ ಮತ್ತೆ ಸಿಗುವುದಿಲ್ಲ. ಜಿಲ್ಲಾ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ  ಅನೇಕ ವಿಚಾರಗಳನ್ನು ತಂದಿದ್ದಾರೆ” ಎಂದರು.

ಸರ್ವಪಕ್ಷ ಸಭೆ ಕರೆಯವುದಕ್ಕೂ ಮುನ್ನ ನೀರು ಬಿಡಲಾಗಿದೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ಯಾರೊ ಮಾತನಾಡುತ್ತಾರೆ ಎಂದು ಉತ್ತರ ಕೊಡುವ ಅಗತ್ಯವಿಲ್ಲ. ಅವರಿಗೆ ಪ್ರಚಾರ ಬೇಕು, ಅದಕ್ಕೆ ಮಾತನಾಡುತ್ತಾರೆ. ನನಗೆ ಪ್ರಚಾರದ ಗೀಳಾಗಲಿ, ಅವರ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು, ನನ್ನ ಕೆಲಸ, ರಾಜ್ಯದ ರೈತರ ಹಿತ ಅಷ್ಟೇ ಸಾಕು. ನನ್ನ ನೆನೆಸಿಕೊಳ್ಳದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ” ಎಂದರು.

ಮೇಕೆದಾಟು ವಿಚಾರವನ್ನು ಮುಂದುವರೆಸುತ್ತೀರಾ ಎಂದು ಕೇಳಿದಾಗ “ಸದ್ಯಕ್ಕೆ ಈ ಬಗ್ಗೆ ಉತ್ತರ ನೀಡುವುದಿಲ್ಲ. ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ. ನಾವು ಸಲ್ಲಿಸಿರುವ ದಾಖಲೆಗಳು ಈ ಯೋಜನೆಗೆ ಭದ್ರ ಅಡಿಪಾಯ ಹಾಕಿದ್ದು, ನ್ಯಾಯಾಲಯವೇ ಈ ವಿಚಾರವಾಗಿ ತೀರ್ಮಾನ ಮಾಡಲಿದೆ” ಎಂದರು.

ಬಾಗಿನ ಯಾವಾಗ ಅರ್ಪಣೆ ಮಾಡಲಾಗುತ್ತೆ ಎಂದು ಕೇಳಿದಾಗ “ಶುಭ ಮುಹೂರ್ತ, ಶುಭ ಗಳಿಗೆ ನೋಡಿ, ವಿಧಾನಸಭೆ ಮುಗಿದ ನಂತರ ದಿನಾಂಕ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

ಐಟಿ ನೌಕರರ ಕೆಲಸದ ವೇಳೆ ಹೆಚ್ಚಿಸುವ ಕುರಿತು ಕೇಳಿದಾಗ, “ನಾನು ಮತ್ತು ನೀವು ವಿರೋಧಿಸಬಹುದು. ಆದರೆ ಅಂತರರಾಷ್ಟೀಯ ಮಟ್ಟದಲ್ಲಿ ಬೇರ, ಬೇರೆ ಕೆಲಸದ ಸಮಯವಿದೆ. ಈ ಕಾರಣಕ್ಕೆ ಒಂದು ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button