*ಬೆಳಗಾವಿಯಲ್ಲಿ ಅತಿವೃಷ್ಟಿಗೆ 5 ಸಾವು* *ಶಾಸಕರೊಂದಿಗೆ ಸಭೆ ನಡೆಸಿ – ತಹಸಿಲ್ದಾರರಿಗೆ ಸಚಿವರ ಸೂಚನೆ*
ಅತೀವೃಷ್ಠಿ/ಪ್ರವಾಹ ಪರಿಸ್ಥಿತಿ ನಿರ್ವಹಣಾ ಸಭೆ
ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ: ಸಚಿವ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಉದ್ಭವಿಸಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಎಲ್ಲ ಇಲಾಖಾ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಜು.26) ಜರುಗಿದ ಅತೀವೃಷ್ಠಿ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತೀವೃಷ್ಠಿಯಿಂದಾಗಿ ಉಂಟಾಗುವ ಪ್ರವಾಹ ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಇದರ ಜೊತೆಗೆ ಕೂಡಲೇ ಸಂಬಂಧಿಸಿದ ಶಾಸಕರೊಂದಿಗೆ ತಹಶೀಲ್ದಾರರು ಸಭೆ ಜರುಗಿಸಲು ಸೂಚಿಸಿದರು.
ಮಹಾನಗರ ಪಾಲಿಕೆ, ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿ, ದಿನದ ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ಸ್ವೀಕರಿಸುವ ದೂರುಗಳಿಗೆ ಕೂಡಲೇ ಸ್ಪಂಧಿಸುವಂತೆ ಸೂಚನೆ ನೀಡಿದರು.
ಗುಣಮಟ್ಟದ ಕಾಳಜಿ ಕೇಂದ್ರ ನಿರ್ವಹಣೆ:
ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಊಟ ಹಾಗೂ ಉಪಹಾರ ಒದಗಿಸಬೇಕು. ಇದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಗಾವಹಿಸಿ ಅಗತ್ಯದ ಜೌಷಧಿಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು.
ಅತೀವೃಷ್ಠಿಯಿಂದಾಗಿ ಹಾನಿಗೊಳಗಾಗುವ ಮನೆಗಳ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಬೇಕು. ಸಮೀಕ್ಷಾ ಕಾರ್ಯದಲ್ಲಿ ಲೋಪಗಳಿಗೆ ಆಸ್ಪದ ನೀಡಬಾರದು. ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯವಾಗದಂತೆ ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು.
ಅಪಾಯಕಾರಿ ಸೇತುವೆಗಳ ಮೇಲೆ ಸಂಚಾರ ನಿರ್ಬಂಧ
ಜಿಲ್ಲೆಯಲ್ಲಿನ ಆಣೆಕಟ್ಟುಗಳ ನೀರಿನ ಒಳ ಹರಿವಿನ ಬಗ್ಗೆ ನಿರಂತರ ನಿಗಾವಹಿಸಬೇಕು. ಸೇತುವೆಗಳ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದ್ದರೆ ಅಂತಹ ಸೇತುವೆಗಳ ಮೇಲೆ ಸಂಚಾರವನ್ನು ನಿಷೇಧಿಸುವಂತೆ ತಿಳಿಸಿದರು.
ಅತೀವೃಷ್ಟಿಯಂತಹ ಈ ಸಂದಿಗ್ದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಕಾರ್ಯ ಪ್ರವೃತ್ತರಾಗಬೇಕು. ಈ ಕಾರ್ಯದಲ್ಲಿ ಅಜಾಗರೂಕತೆ, ಉದಾಸೀನತೆ ತೋರಿದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕೊಹೊಳಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಿಡಕಲ್ ಡ್ಯಾಂ 90%, ನವೀಲುತೀರ್ಥ 67.46% ಭರ್ತಿ ಆಗಿರುತ್ತದೆ. ಜಿಲ್ಲೆಯ ಪ್ರವಾಹಕ್ಕೆ ತುತ್ತಾಗುವ ಗ್ರಾಮ ಹಾಗೂ ತಾಲೂಕುಗಳಲ್ಲಿ ಟಾಸ್ಕ್ ಫೊರ್ಸಗಳನ್ನು ರಚಿಸಲಾಗಿರುತ್ತದೆ. 427 ಕಾಳಜಿ ಕೇಂದ್ರಗಳನ್ನು ಗುರುತಿಸಿ ಕಾಳಜಿ ಕೇಂದ್ರಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ.ಪ್ರವಾಹ ಸಂದರ್ಭದಲ್ಲಿ ಬಳಸಲು ಒಟ್ಟು 35 ಬೋಟುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಜೂನ್ 1 ರಿಂದ ಇಲ್ಲಿಯವರೆಗೆ ಒಟ್ಟು 5 ಮಾನವ ಜೀವ ಹಾನಿಯಾಗಿದ್ದು ಮಾರ್ಗಸೂಚಿಗಳನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ ಅವರು ಮಾತನಾಡಿ ನಿರಂತರ ಮಳೆಯಿಂದಾಗಿ ಬಾಣಂತಿಯರ ಮನೆಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ಅಂದಾಜು 6500 ಬಾಣಂತಿಯರ ಮನೆಗೆ ಪಡಿತರ ವಿತರಿಸಲಾಗಿದೆ. ಸಂಚಾರಿ ವಾಹನ ಘಟಕದ ಮೂಲಕ ಪಶುಗಳಿಗೆ ರೈತನಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 17 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸಭೆಯಲ್ಲಿ ಪೋಲಿಸ್ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ