*ಪಿಎಸ್ಐ ಕುಟುಂಬಕ್ಕೆ ಪರಿಹಾರದ ಮೊತ್ತ ಘೋಷಿಸಿದ ಗೃಹ ಸಚಿವ ಪರಮೇಶ್ವರ*
ಪ್ರಗತಿವಾಹಿನಿ ಸುದ್ದಿ: ಯಾದಗಿರಿಯಲ್ಲಿ ನಿಗೂಡವಾಗಿ ಮೃತಪಟ್ಟ ಪಿಎಸ್ಐ ಪರಶುರಾಮ ಅವರ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬುಧವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರಲ್ಲದೇ, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಕಾರಟಗಿಯ ಸೋಮನಾಳ ಗ್ರಾಮದಲ್ಲಿರುವ ನಿವಾಸದಲ್ಲಿ ಒಂದು ತಾಸಿಗು ಹೆಚ್ಚು ಪರಶುರಾಮ ಅವರ ಕುಟುಂಬದವರೊಂದಿಗೆ ಚರ್ಚಿಸಿದರು. ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ನಿರೀಕ್ಷೆ ಮಾಡಲಾಗುತ್ತಿದೆ. ಎಫ್ಎಸ್ಎಲ್ನವರು ಪರಿಶೀಲನೆ ನಡೆಸಿ, ಸ್ಯಾಂಪಲ್ಸ್ ಸಂಗ್ರಹಿಸಿದ್ದಾರೆ. ಇಲಾಖೆಯ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಿದ್ದಕ್ಕೆ ನೋವಾಗುತ್ತಿದೆ ಎಂದು ಮರುಕ ವ್ಯಕ್ತಪಡಿಸಿದರು.
ಪರಶುರಾಮ ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದು ನಮ್ಮ ಧರ್ಮ, ಕರ್ತವ್ಯ. ಪರಶುರಾಮ ತನ್ನ ಕುಟುಂಬದವರಿಗೆ ಎಲ್ಲವೂ ಆಗಿದ್ದ. ಎಲ್ಲ ಜವಾಬ್ಧಾರಿಗಳನ್ನು ಹೊತ್ತು ನೋಡಿಕೊಳ್ಳುತ್ತಿದ್ದ ಎಂಬುದನ್ನು ಆತನ ಸಹೋದರ ಹನುಮಂತ ಅವರಿಂದ ತಿಳಿದುಕೊಂಡಿದ್ದೇನೆ. ಕುಟುಂಬ ಸಂಕಷ್ಟವಲ್ಲದೆ, ಬೀದಿಗೆ ತಳ್ಳಿದಂತಾಗಿದೆ. ಕಠಿಣ ಪರಿಶ್ರಮದಿಂದ ಎಂಟು ಪರೀಕ್ಷೆಗಳನ್ನು ಪಾಸ್ ಮಾಡಿ, ಪಿಎಸ್ಐ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದ. ಇಂತಹ ಅಧಿಕಾರಿಯನ್ನು ಕಳೆದುಕೊಂಡಿರುವುದು ನಮಗೂ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪರಶುರಾಮ ಅವರ ಪತ್ನಿ ಬಿಇ ವ್ಯಾಸಂಗ ಮಾಡಿದ್ದು, ಇಲಾಖೆಯಲ್ಲಿ ಸೂಕ್ತವಾದ ಉದ್ಯೋಗವನ್ನು ನೀಡುತ್ತೇವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವ್ಯಾಸಂಗಕ್ಕೆ ಸೂಕ್ತವಾದ ಉದ್ಯೋಗ ಕಲ್ಪಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬೇರೆ ಇಲಾಖೆಯಲ್ಲಿ ಉದ್ಯೋಗ ಕೋರಿರುವುದರಿಂದ ಮುಖ್ಯಮಂತ್ರಿಯವರು ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಚಾರವನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಪರಶುರಾಮ ಕೆಲಸಕ್ಕೆ ಸೇರಿದ ಏಳು ವರ್ಷದಲ್ಲಿಯೇ ಮೃತನಾಗಿದ್ದಾನೆ. ಡಿವೈಎಸ್ಪಿ ಹಂತದವರೆಗೆ ಹೋಗುತ್ತಿದ್ದ. ಸರ್ಕಾರದಿಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅಲ್ಲಿನ ಶಾಸಕ ಮತ್ತು ಪುತ್ರ ಪರಶುರಾಮ ಅವರ ಬಳಿ ಹಣಕ್ಕೆ ಒತ್ತಾಯಿಸಿದ್ದರು ಎಂದು ಕುಟುಂಬಸ್ಥರು ಆಪಾದನೆ ಮಾಡಿದ್ದಾರೆ. ಈ ಕುರಿತು ಘಟನೆಯಾದ ದಿನವೇ ಪ್ರಕರಣ ದಾಖಲಿಸಿ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆ ವೇಳೆ ಸ್ಥಳೀಯ ಪೊಲೀಸರ ಮೇಲೆ ಒತ್ತಡ ಬರಬಾರದು ಎಂಬ ಉದ್ದೇಶದಿಂದ. ನ್ಯಾಯ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಬಾರದು ಎಂಬ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇಲಾಖೆಯಲ್ಲಿ ಹಣ ಪಡೆದು ವರ್ಗಾವಣೆ ಮಾಡುವುದಿಲ್ಲ.ನಮ್ಮ ಹಂತದಲ್ಲಿ ಈ ರೀತಿ ನಡೆಯುವುದಿಲ್ಲ. ಈ ರೀತಿಯ ಆರೋಪಗಳಿರುವುದರಿಂದ ಪ್ರತಿ ವರ್ಷ ವರ್ಗಾವಣೆಯಾಗದಂತೆ ತಡೆಯಲು, ಪಿಎಸ್ಐ ಹುದ್ದೆಯಿಂದ ಎಸ್ಪಿ ಹುದ್ದೆವರೆಗು ವರ್ಗಾವಣೆ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕುಟುಂಬದವರು ಹೇಳಿರುವುದು ನಿಜ. ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ಈ ಬಗ್ಗೆ ಕುಟುಂಬಸ್ಥರಿಗೆ ಮನವರಿಕೆ ಮಾಡುತ್ತೇವೆ. ಮನೆಯವರು ಏನು ದೂರು ಕೊಟ್ಟಿದ್ದಾರೆ ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯ ಒದಗಿಸಿಕೊಡುತ್ತೇವೆ. ಪಿಎಸ್ಐ ವರ್ಗಾವಣೆ ಐಜಿ ಹಂತದಲ್ಲಿ ನಡೆಯುತ್ತದೆ. ಏಳು ತಿಂಗಳಲ್ಲಿ ಯಾಕೆ ವರ್ಗಾವಣೆಯಾಗಿದೆ ಎಂಬುದನ್ನು ಸಿಐಡಿ ತನಿಖೆಯಲ್ಲಿ ಹೊರ ಬರುತ್ತದೆ ಎಂದರು.
ಇಲಾಖೆಯಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ. ಆಪಾದನೆಗಳು ಬರಬಾರದು ಎಂಬ ನಿಟ್ಟಿನಲ್ಲಿ ಸಿಐಡಿಗೆ ವಹಿಸಲಾಗಿದೆ. ಜಾತಿ ಆಧಾರದ ಮೇಲೆ ಪೋಸ್ಟಿಂಗ್ಸ್ ನೀಡುವುದಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದರು
ವಿರೋಧ ಪಕ್ಷದವರಿಂದ ಪಾಠ ಕಲಿಯಬೇಕಿಲ್ಲ. ಛಲವಾದಿ ನಾರಾಯಣಸ್ವಾಮಿ ಈಗತಾನೇ ವಿಧಾನ ಪರಿಷತ್ನ ವಿಪಕ್ಷ ನಾಯಕರಾಗಿದ್ದಾರೆ. ಇನ್ನಷ್ಟು ಚೆನ್ನಾಗಿ ತಿಳಿದುಕೊಂಡ ನಂತರ ಮಾತನಾಡಲಿ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿಬಿಐಗೆ ಚೋರ್ ಬಚಾವೋ ಎಂದು ಆರೋಪಿಸಿದ್ದರು. ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದಾಗ ನಡೆದ ಪ್ರಕರಣಗಳನ್ನು ಸಿಬಿಐಗೆ ಏಕೆ ವಹಿಸಲಿಲ್ಲ ಎಂದು ಮರುಪ್ರಶ್ನಿಸಿದರು.
ಸಿಎಂಗೆ ನೋಟಿಸ್ ನೀಡಿದ್ದೆ ತಪ್ಪು
ರಾಜ್ಯಪಾಲರು ಸಿಎಂ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್ಗೆ ಯಾಕೆ ಅನುಮತಿ ಕೊಡಬಾರದು ಎಂದು ಕೇಳಿದ್ದಾರೆ. ಶೋಕಸ್ ನೋಟಿಸ್ ನೀಡಿರುವುದೇ ತಪ್ಪು. ಅದನ್ನು ವಾಪಸ್ ಪಡೆಯಬೇಕು. ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಡಿ ಎಂದು ಸಚಿವ ಸಂಪುಟದ ಸಲಹೆಯನ್ನು ತಿಳಿಸಿದೆ. ರಾಜ್ಯಪಾಲರು ನಮ್ಮ ಸಲಹೆಯನ್ನು ತೆಗೆದುಕೊಳ್ಳಬಹುದು ಅಥವಾ ಇಲ್ಲದೇ ಇರಬಹುದು. ರಾಜಿನಾಮೇ ತೆಗೆದುಕೊಡುವ ಅವಶ್ಯಕತೆ ಇಲ್ಲ. ಪ್ರಾಸಿಕ್ಯೂಷನ್ಗೆ ಅವಕಾಶ ನೀಡಿದರೆ ಎದುರಿಸುತ್ತೇವೆ. ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಪ್ರಸಾದ್ ಅಬ್ಬಯ್ಯ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ