ಕೆವಿಜಿ ಶಾಖೆಗಳಿಗೆ ಬೀಗ ಜಡಿದು ಸಂಪೂರ್ಣಸಾಲ ಮನ್ನಾ ಮಾಡುವವರೆಗೆ ಹೋರಾಟ
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 4 ವರ್ಷ ಮಳೆ ಇಲ್ಲದೆ ಹಾಗೂ ಕಳೆದ ಎರೆಡು ವರ್ಷ ಅತಿಯಾದ ಮಳೆಯಿಂದ ಹಾಗೂ ಈ ವರ್ಷ ಕೊವಿಡ್ ಹಾವಳಿಯಿಂದ ರೈತನ ಜೀವನ ಅತ್ಯಂತ ಕನಿಷ್ಠ ಮಟ್ಟಕ್ಕೆ ಹೋಗಿರುವುದರಿಂದ ರೈತರ ಸಾಲದ ಅಸಲಿನ ಮೊತ್ತದಲ್ಲಿ ಪ್ರತಿಶತ 50ರಷ್ಟು ಮನ್ನಾ ಮಾಡಿ ಸಾಲ ಮರುಪಾವತಿ ಮಾಡಬೇಕೆಂದು ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಕೆವಿಜಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದರು.
ಗುರುವಾರ ಧಾರವಾಡದ ಕೆವಿಜಿ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ರೈತರ ನಿಯೊಗದೊಂದಿಗೆ ಅಧ್ಯಕ್ಷರಿಗೆ ಮನವಿ ನೀಡಿ ಮಾತನಾಡಿ, ರೈತರು ಕೃಷಿ ಚಟುವಟಿಕೆಗಾಗಿ ತಮ್ಮ ಬ್ಯಾಂಕ್ ನಲ್ಲಿ ಸಾಲಪಡೆದು ಬರಗಾಲದಿಂದ ಮರಳಿ ತುಂಬದೆ ಕಟಬಾಕಿ ಸಾಲಗಾರರಾಗಿದ್ದಾರೆ. ಅಲ್ಲದೆ 2017ರಲ್ಲಿ ಸರ್ಕಾರದ ಸಾಲ ಮನ್ನಾ ಯೋಜನೆಯಿಂದ ರೈತರು ಸಾಲ ಮರುಪಾವತಿ ಮಾಡದೆ ಇದ್ದರಿಂದ ಬಡ್ಡಿಯೆ ಅಸಲಿಗಿಂತ ಹೆಚ್ಚಾಗಿದೆ. ಇದೆ ರೀತಿ ಬೇರೆ ಬ್ಯಾಂಕ್ ನಲ್ಲಿ ಸಾಲ ಪಡೆದ ಇತರ ರೈತರು ತಮ್ಮ ಸಾಲವನ್ನು ಓಟಿಎಸ್ ಮುಖಾಂತರ ಎಸ್ ಬಿ ಆಯ್ ಬ್ಯಾಂಕ್ ನಲ್ಲಿ ಅಸಲಿನಲ್ಲಿ 90% ಬಿಟ್ಟು ರೈತರ ಸಾಲ ಖಾತೆಗಳಿಗೆ ಮುಕ್ತಿ ನೀಡುತ್ತಿದ್ದಾರೆ.
ಅಲ್ಲದೆ ಇದೆ ಬ್ಯಾಂಕ್ ಗಳು ಹೊಸ ಸಾಲ ನೀಡುತ್ತಿವೆ. ಖಾಸಗಿ ಬ್ಯಾಂಕ್ ಗಳಾದ ಎಕ್ಸಿಸ್ , ICICI , IDBI ಹಾಗೂ ಬ್ಯಾಂಕ್ ಆಫ್ ಇಂಡಿಯಾ , ಕೆನರಾ ಬ್ಯಾಂಕ್ ಗಳಲ್ಲಿ ರೈತರ ದುಸ್ಥಿತಿಯನ್ನು ಕಂಡು ಅಸಲಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಭಾಗ ಬಿಟ್ಟು ಸಾಲ ತುಂಬಿಸಿಕೊಂಡಿವೆ. ಆದರೆ ಕೆವಿಜಿ ಬ್ಯಾಂಕ್ ರೈತರ ಬ್ಯಾಂಕ್ ಎಂದು ಹಳ್ಳಿಗಳಲ್ಲಿವೆ. ಏಕೆಂದರೆ ಹಳ್ಳಿಗಳಲ್ಲಿ ಮೊದಲು ಶಾಖೆ ಹೊಂದಿ ರೈತರಿಗೆ ಪ್ರಥಮ ಸಾಲ ನೀಡಿದ ಬ್ಯಾಂಕ್. ಆದರೆ ಇಂದು ನಮಗೆ ಕಬ್ಬಿಣದ ಕಡಲೆಯಾಗಿ ಕೆವಿಜಿ ಬ್ಯಾಂಕ್ ವರ್ತಿಸುತ್ತಿರುವುದು ಸರಿಯಲ್ಲ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ ಮಾತನಾಡಿ, ಬ್ಯಾಂಕ್ ಸಾಲಗಾರ ರೈತರಿಗೆ ಕೊರ್ಟ ನೋಟಿಸ್ ನೀಡುವದು, ಮನೆಗೆ ಸಿಬ್ಬಂದಿಗಳು ವಸೂಲಾತಿಗೆ ಅಲೆದಾಡಿ ರೈತರಲ್ಲಿ ಭಯ ಮೂಡುತ್ತಿದೆ. ಆದ್ದರಿಂದ ಕೆವಿಜಿ ಬ್ಯಾಂಕ್ ಸಹಿತ, ರಾಷ್ಟೀಕೃತ ಬ್ಯಾಂಕ್ ಗಳ ಓಟಿಎಸ್ ಪ್ರಕಾರ ಅಸಲಿನಲ್ಲಿ ಅರ್ಧ ಕಡಿತಗೊಳಿಸಿ ರೈತರಿಗೆ ಮರು ಸಾಲ ನೀಡುವ ವ್ಯವಸ್ಥೆ ತಮ್ಮಿಂದಾಗಬೇಕಾಗಿದೆ. ಹಾಗೂ ವಕೀಲರಿಂದ ಮತ್ತು ಕೊರ್ಟ ನೋಟಿಸ್ ನೀಡುವದನ್ನು ತಕ್ಷಣ ನಿಲ್ಲಿಸಬೇಕು.
ಈ ನಮ್ಮ ಬೇಡಿಕೆಗಳನ್ನು 15 ದಿನಗಳಲ್ಲಿ ಈಡೆರಿಸದಿದ್ದರೆ, ಕರ್ನಾಟದ ಹಳ್ಳಿಗಳಲ್ಲಿರುವ ಪ್ರತಿಯೊಂದು ಕೆವಿಜಿ ಶಾಖೆಗೆ ಬೀಗ ಜಡಿದು ಸಂಪೂರ್ಣಸಾಲ ಮನ್ನಾ ಮಾಡುವವರೆಗೆ ಹೋರಾಟ ಮಾಡಬೇಕಾದೀತು, ಕೆವಿಜಿ ಹಠಾವೋ ಚಳುವಳಿ ಹಮ್ಮಿಕೊಳ್ಳಲಾಗುವುದೆಂದು ತಮಗೆ ಎಚ್ಚರಿಕೆ ನೀಡುತ್ತವೆ ಎಂದರು. ಇದಕ್ಕೆ ಅವಕಾಶ ಕೊಡದೆ ಆದಷ್ಟು ಬೇಗನೆ ಕಟಬಾಕಿ ರೈತರ ಸಾಲವನ್ನು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳು ಅನುಸರಿಸುತ್ತಿರುವ ರೀತಿಯಲ್ಲಿ ತಮ್ಮ ಬ್ಯಾಂಕ್ ಅನುಸರಿಸಿ ನೊಂದ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದರು.
ಕೆವಿಜಿ ಬ್ಯಾಂಕ್ ಅಧ್ಯಕ್ಷ ಪಿ.ಎಲ್.ಗೋಪಿಕೃಷ್ಣ ಮನವಿ ಸ್ವೀಕರಿಸಿ ಮಾತನಾಡಿ, ಕೆವಿಜಿ ಬ್ಯಾಂಕ್ 650 ಶಾಖೆಗಳಿಂದ ರೈತರಿಗೆ ಯಾವುದೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ. ಕಟಬಾಕಿ ರೈತರಿಗೆ ಓಟಿಎಸ್ ಸ್ಕೀಂನಲ್ಲಿ ಇನಷ್ಟು ಕಡಿಮೆ ಮೊತ್ತಕ್ಕೆ ಪರಿಹಾರ ನೀಡಲು ಕ್ರಮ ತಗೆದುಕೊಳ್ಳುತ್ತೇನೆ. ಹೆಚ್ಚಿನ ಮೊತ್ತದ ಅವಕಾಶಕ್ಕೆ ನಬಾರ್ಡ ಹಾಗೂ ಎಸ್.ಎಲ್.ಬಿ.ಸಿಗೆ ಮನವಿ ಮಾಡಿಕೊಳ್ಳಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಈರಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ವಕ್ಕುಂದ, ಗೌಡಪ್ಪ ಹೊಸಮನಿ, ಮಲ್ಲಿಕಾರ್ಜುನ ಕರಡಿಗುದ್ದಿ, ಮಲ್ಲಣ್ಣ ಆಲೆಕರ, ದೇಮಪ್ಪ ಕಾಸಿ, ಪಾಂಡುರಂಗ ನಿರಲಕೇರಿ, ಅಶೋಕ ಬ್ಯಾಹಟ್ಟಿ, ಮಹಾಂತೇಶ ಅಬ್ಬಾಯಿ, ಸಚಿನ ಪಟಾತ, ಬಸಪ್ಪ ಬೆಳ್ಳಿಕಟ್ಟಿ ಹಾಗೂ ನೂರಾರು ರೈತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ