
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಜಾರಿ ನಿರ್ದೇಶನಾಲಯ (ಇಡಿ) ದ 6 ಜನ ಅಧಿಕಾರಿಗಳಿಗೆ ಸೋಂಕು ದೃಢಪಟ್ಟಿದ್ದು, ಇಡಿ ಕೇಂದ್ರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.
6 ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದ್ದು, 6 ಅಧಿಕಾರಿಗಳ ಸಂಪರ್ಕದಲ್ಲಿದ್ದ 10 ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತೀಚೆಗೆ ಇಡಿ ಕೇಂದ್ರ ಕಚೇರಿಯ ಸ್ಥಾಪನ ಶಾಖೆಯ ಕಿರಿಯ ದರ್ಜೆಯ ಅಧಿಕಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಇವರು ಕೇಂದ್ರ ಅರೆ ಸೈನ್ಯ ಪಡೆಯಿಂದ ಇಡಿ ನಿಯೋಗದಲ್ಲಿದ್ದರು. ಅಧಿಕಾರಿಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಇಡಿ ಕಚೇರಿ ಸೀಲ್ ಡೌನ್ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಕುರಿತ ಅಪರಾಧಗಳ ಕುರಿತು ತನಿಖೆ ನಡೆಸುವ ಕೇಂದ್ರ ಸಂಸ್ಥೆ ಇಡಿ, ಕೊರೊನಾ ಕುರಿತು ಕಟ್ಟೆಚ್ಚರ ವಹಿಸಿತ್ತು. ಕೇಂದ್ರ ಕಚೇರಿಯನ್ನು ವಾರದಲ್ಲಿ ಎರಡು ಬಾರಿ ಸ್ಯಾನಿಟೈಸ್ ಮಾಡುತ್ತಿತ್ತು. ಅಲ್ಲದೆ ನಿರ್ದಿಷ್ಟ ದಿನದ ಕೆಲಸಕ್ಕೆ ಅಗತ್ಯವಿರುವ ನೌಕರರನ್ನು ಮಾತ್ರ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಇದೀಗ 6 ಅಧಿಕಾರಿಗಳಿಗೆ ಸೋಂಕು ತಗುಲಿರುವುದು ಆತಂಕ ಹೆಚ್ಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ