*ಕಫ ಎಂದು ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ಕತ್ತರಿಸಿದ ನರ್ಸ್*

ಪ್ರಗತಿವಾಹಿನಿ ಸುದ್ದಿ: ಕಫ ಎಂದು ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ನರ್ಸ್ ಕತ್ತರಿಸಿರುವ ಅಮಾನವೀಯ ಘಟನೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಗಳೂರಿನ ಇಂದಿರಾ ನಗರದಲ್ಲಿ ಈ ಘಟನೆ ನಡೆದಿದೆ. ಜ್ವರ ಮತ್ತು ಕಫದ ಹಿನ್ನೆಲೆ ಚಿನ್ಮಯ್ ಮಿಷನ್ ಆಸ್ಪತ್ರೆಗೆ 6 ತಿಂಗಳ ಕಂದಮ್ಮನನ್ನು ಪೋಷಕರು ಫೇಬ್ರವರಿ 19ರಂದು ದಾಖಲಿಸಿದ್ದರು. ಅಲ್ಲಿಂದ ಫೆ.24ರ ವರೆಗೆ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಡ್ರಿಪ್ಸ್ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆಯುವ ಸಂದರ್ಭದಲ್ಲಿ ನರ್ಸ್ ನಿರ್ಲಕ್ಷದಿಂದ ಮಗುವಿನ ಎಡಗೈ ಕಿರುಬೆರೆಳಿನ ಅರ್ಧ ಬಾಗವನ್ನೇ ಕತ್ತರಿಸಿದ್ದಾರೆ. ಗಂಭೀರ ಗಾಯದಿಂದ ಎಳೆಯ ಕಂದಮ್ಮ ನರಳಾಡುತ್ತಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಘಟನೆ ಬಳಿಕ ತುರ್ತು ಚಿಕಿತ್ಸಾ ಘಟಕಕ್ಕೆ ಮಗುವನ್ನು ಕರೆದುಕೊಂಡು ಹೋಗಲಾಗಿದ್ದು, ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಹೀಗಿದ್ದರೂ ಯಾವುದೇ ದೊಡ್ಡ ಗಾಯವಾಗಿಲ್ಲ. ಮಗು ಚಿಕ್ಕದಾಗಿರುವ ಕಾರಣ ಗಾಯ ಅದಾಗೇ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಮಗುವಿನ ಅರ್ಧ ಬೆರಳು ಕಟ್ ಆಗಿದೆ ಎಂದು ವಿಜಯ್ ಕುಮಾರ್ ದೂರಿದ್ದಾರೆ.
ಈ ಬಗ್ಗೆ ಮಗುವಿನ ತಂದೆ ವಿಜಯ್ ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.



