Kannada NewsKarnataka NewsLatest

ಬೈಲಹೊಂಗಲ ಸ್ವಯಂ ಲಾಕ್ ಡೌನ್; 6 ತಾಲೂಕು ಲಾಕ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ:೧೪.೦೭.೨೦೨೦ರ ರಾತ್ರಿ ೮ ಗಂಟೆಯಿಂದ ೨೨.೦೭.೨೦೨೦ರ ಬೆಳಿಗ್ಗೆ ೫  ಗಂಟೆಯವರೆಗೆ ೭ ದಿನಗಳ ಅವಧಿಯವರೆಗೆ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿದ್ದಾರೆ.

ಆದರೆ, ಬೈಲಹೊಂಗಲ ತಾಲೂಕು ಸ್ವಯಂ ಲಾಕ್ ಡೌನ್ ಗೆ ನಿರ್ಧರಿಸಲಾಗಿದೆ.
ಜಿಲ್ಲಾಡಳಿತದ ಲೆಕ್ಕದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಈ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ ೨ ವಾರಗಳಂದೀಚೆಗೆ ಕೋವಿಡ್-೧೯ ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಮರಣ ಪ್ರಮಾಣವು ಕೂಡಾ ಹೆಚ್ಚಳವಾಗಿರುತ್ತದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಜ್ಞರೊಂದಿಗೆ ಈ ವಿಷಯದ ಕುರಿತು ಚರ್ಚಿಸಿ ಹಾಗೂ ವಿವರವಾಗಿ ಪರಿಶೀಲಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ -೧೯ ಸೋಂಕಿನ ಹರಡುವಿಕೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಹತೋಟಿಗೆ ತರಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ ಎಂದು ಕಂಡುಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ, ತಜ್ಞರ ಸಲಹೆ ಮೇರೆಗೆ ವಿಪತ್ತು ನಿರ್ವಹಣೆ ಕಾಯ್ದೆ, ೨೦೦೫ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್ ಡೌನ್ ಘೋಷಿಸಿದ್ದಾರೆ.
ಮುಖ್ಯಮಂತ್ರಿಗಳು ಇತ್ತೀಚೆಗೆ ಜರುಗಿದ ವಿಡಿಯೋ ಸಂವಾದದಲ್ಲಿ ಜಿಲ್ಲೆಯಲ್ಲಿನ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಡಳಿತ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳು ಲಾಕ್‌ಡೌನ ಕುರಿತು ಸ್ಥಳೀಯ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅನುಮತಿ ನೀಡಿರುತ್ತಾರೆ.
ಆ ಪ್ರಕಾರ ಐದು ತಾಲ್ಲೂಕುಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಉಳಿದಂತೆ ರಾಜ್ಯ ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ ೧೫೮ ಟಿಎನ್‌ಆರ್ ೨೦೨೦, ದಿನಾಂಕ:೩೦.೦೬.೨೦೨೦ರಲ್ಲಿ ಕೋವಿಡ್-೧೯ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಬಗ್ಗೆ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ನಿಷೇಧಿತ ಕಾರ್ಯ ಚಟುವಟಿಕೆಗಳನ್ನು ಕ್ರಮೇಣವಾಗಿ ಪುನರ್ ಪ್ರಾರಂಭಿಸಲು ತೆರವು-೨ರ ಮಾರ್ಗಸೂಚಿಗಳನ್ನು ಹಾಗೂ ಕಂಟೈನ್‌ಮೆಂಟ್ ವಲಯಗಳ ಪ್ರದೇಶಗಳಲ್ಲಿ ಲಾಕ್‌ಡೌನ್ ಅನ್ನು ರಾಜ್ಯಾದಾದ್ಯಂತ ವಿಸ್ತರಿಸಿ ಆದೇಶಿಸಿದೆ.
ಇವುಗಳು ದಿನಾಂಕ:೩೧.೦೭.೨೦೨೦ರವರೆಗೆ ಜಾರಿಯಲ್ಲಿರುತ್ತವೆ. ಈ ಮಾರ್ಗಸೂಚಿಗಳು ರಾಜ್ಯಾದ್ಯಂತ ಮುಂದುವರೆಯಲಿವೆ. ಲಾಕ್‌ಡೌನ್‌ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು/ತಹಶೀಲ್ದಾರರು/ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲೂಕ ಪಂಚಾಯತ/ಪೌರಾಯುಕ್ತರು/ಮುಖ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬೈಲಹೊಂಗಲ 16ರಿಂದ 25ರ ವರೆಗೆ ಲಾಕ್

ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಖಾಯಿಲೆಯ ನಿಯಂತ್ರಣ ಮಾಡಲು ದಿ. 16 ರಿಂದ 25 ರ ವರೆಗೆ ಬೈಲಹೊಂಗಲ ತಾಲೂಕು ಲಾಕಡೌನ ಮಾಡಲಾಗಿದ್ದು, ಬೆಳಿಗ್ಗೆ 7 ರಿಂದ  ಮಧ್ಯಾಹ್ನ 12 ರವರೆಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಅವರು ವ್ಯಾಪಾರಸ್ಥರ ಸಭೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕಾಯಿಲೆಯು‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರಣ ಲಾಕಡೌನ ಅತೀ ಅವಶ್ಯಕವಿರುವದರಿಂದ ಈ ಕ್ರಮ ಜರುಗಿಸಲಾಗಿದ್ದು ಲಾಕಡೌನ ಸಮಯದಲ್ಲಿ 12 ರಿಂದ ಬೆಳಗಿನ 7 ಘಂಟೆ ಅವಧಿಯಲ್ಲಿ 144 ಕಲಂ ಜಾರಿಯಲ್ಲಿರುತ್ತದೆ. ಕಾರಣ ಯಾವುದೇ ವ್ಯಕ್ತಿ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮತ್ತು ಲಾಕಡೌನ ನೆಪದಲ್ಲಿ ವ್ಯಾಪಾರಸ್ಥರು ದಿನಸಿ ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಾಸ ಮಾಡಿದರೆ ಅಂತಹವರ ಮೇಲೆ  ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಶಾಸಕ ಮಹಾಂತೇಶ ಕೌಜಲಗಿ, ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ, ವೈದ್ಯಾಧಿಕಾರಿ ಡಾ. ಸಂಜಯ ಸಿದ್ದನ್ನವರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button