ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 60ನೇ ಸಭೆಯಲ್ಲಿ ಬರೋಬ್ಬರಿ 1,74,381.44 ಕೋಟಿ ರೂ. ಮೌಲ್ಯದ ಒಟ್ಟು 11 ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು.
ರಾಜ್ಯದಲ್ಲಿ ಇಷ್ಟು ಭಾರಿ ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ಇದೇ ಮೊದಲು.
ಗ್ರೀನ್ ಹೈಡ್ರೋಜನ್ ಉತ್ಪಾದಕ ಸಂಸ್ಥೆ ಆಕ್ಮೆ ಕ್ಲೀನ್ ಟೆಕ್ ಸೆಲ್ಯೂಷನ್ ಸೇರಿದಂತೆ 8 ಹೊಸ ಕೈಗಾರಿಕಾ ಪ್ರಸ್ತಾವನೆಗಳು ಹಾಗೂ 3 ಹೆಚ್ಚುವರಿ ಹೂಡಿಕೆ ಯೋಜನೆಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ 41,448 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಸಭೆಯಲ್ಲಿ ಯೋಜನೆಗಳಿಗೆ ಒಪ್ಪಿಗೆ ನೀಡಿದ ನಂತರ ಶನಿವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ” ಹಸಿರು ಇಂಧನವೇ ಭವಿಷ್ಯ. 2026ರಿಂದ ಗ್ರೀನ್ ಹೈಡ್ರೋಜನ್ ರಫ್ತು ಆರಂಭವಾಗಲಿದ್ದು, ದೇಶದ ಒಟ್ಟು ಗ್ರೀನ್ ಹೈಡ್ರೋಜಿನ್ ರಫ್ತಿನಲ್ಲಿ ರಾಜ್ಯದ ಪಾಲು ಅಧಿಕವಾಗಿರಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಮುಂದಾಗಿರುವ ಆಕ್ಮೆ ಕ್ಲೀನ್ ಟೆಕ್ ಸಲ್ಯೂಷನ್ ಪ್ರೈ. ಲಿ. ಜೆಎಸ್‌ಡಬ್ಲ್ಯು ಗ್ರೀನ್ ಹ್ರೈಡ್ರೋಜನ್ ಲಿ. ಅವದಾ ವೆಂಚರ್ಸ್ ಪ್ರೈ. ಲಿ. ಹಾಗೂ ರಿನ್ಯೂ ಇ-ಫ್ಯೂಯೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೊದಲೇ ಇಷ್ಟು ಭಾರಿ ಮೊತ್ತದ ಬಂಡವಾಳ ರಾಜ್ಯದಲ್ಲಿ ಹೂಡಿಕೆ ಆಗುತ್ತಿರುವುದು ವಿಶೇಷ. ಇದು ನಮ್ಮ ಉತ್ಸಾಹ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿದೆ,” ಎಂದರು.
“ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದೆ. ಕಬ್ಬು ಬೆಳೆಯುವ ರಾಜ್ಯಗಳ ಪೈಕಿ ದೇಶದಲ್ಲೇ 3ನೇ ಸ್ಥಾನದಲ್ಲಿರುವ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಪೂರಕವಾಗಿ ಇಂದಿನ ಸಭೆಯಲ್ಲಿ ಹಸಿರು ಇಂಧನ ಉತ್ಪಾದನಾ ವಲಯದ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿರುವುದು ಅತ್ಯಂತ ಸಂತಸದ ವಿಷಯ,”ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ಹೇಳಿದರು.
ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ ಪಾಟೀಲ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಸರಕಾರದ ಅಪರ ಮುಖ್ಯಕಾರ್ಯದಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ.ಇವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಆರ್. ಗಿರೀಶ್ ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅನುಮೋದನೆ ಪಡೆದ ಪ್ರಮುಖ ಯೋಜನೆಗಳು:
ಆಕ್ಮೆ ಕ್ಲೀನ್ ಟೆಕ್ ಸಲ್ಯೂಷನ್ ಪ್ರೈ. ಲಿ. ಹೂಡಿಕೆ: 51, 865 ಕೋಟಿ ರೂ.
ಅವದಾ ವೆಂಚರ್ಸ್ ಪ್ರೈ. ಲಿ. ಹೂಡಿಕೆ: 45000 ಕೋಟಿ ರೂ.
ಜೆಎಸ್‌ಡಬ್ಲ್ಯು ಗ್ರೀನ್ ಹ್ರೈಡ್ರೋಜನ್ ಲಿ. ಹೂಡಿಕೆ: 40148 ಕೋಟಿ ರೂ.
ರಿನ್ಯೂ ಇ-ಫ್ಯೂಯೆಲ್ಸ್ ಪ್ರೈವೇಟ್ ಲಿಮಿಟೆಡ್ , ಹೂಡಿಕೆ: 20,000 ಕೋಟಿ ರೂ.
ಏಟ್ರಿಯಾ ಪವರ್ ಹೋಲ್ಡಿಂಗ್ಸ್ ಹೂಡಿಕೆ: 9454 ಕೋಟಿ ರೂ.
ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಲಿ. ಹೂಡಿಕೆ: 3025 ಕೋಟಿ ರೂ.
ಜೆಎಸ್‌ಡಬ್ಲ್ಯು ನಿಯೋ ಎನರ್ಜಿ ಲಿ. ಹೂಡಿಕೆ: 2579 ಕೋಟಿ ರೂ.
ಕಾಂಟಿನೆಂಟಲ್ ಆಟೋಮೇಟಿವ್ ಕಾಂಪೊನೆಂಟ್ಸ್ ಹೂಡಿಕೆ: 920 ಕೋಟಿ ರೂ.
ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು:
ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈ ಲಿ. ಹೂಡಿಕೆ: 511 ಕೋಟಿ ರೂ.
ಜಿ.ಎಂ ಶುಗರ್ ಮತ್ತು ಎನರ್ಜಿ ಲಿ. ಹೂಡಿಕೆ: 49.44 ಕೋಟಿ ರೂ.
ರಿಸೋರ್ಸ್‌ಸ್ ಪೆಲ್ಲೆಟ್ಸ್ ಕಾನ್ಸನ್ಟ್ರೇಟ್ಸ್ ಪ್ರೈ. ಲಿ. ಹೂಡಿಕೆ: 830 ಕೋಟಿ ರೂ.
ಬಿರಿಯಾನಿ ತಿಂದು ಮಲಗಿದ್ರಾ; ಯೋಧರ ಬಗ್ಗೆ ಕೇವಲವಾಗಿ ಮತಾಡಿದ ಓವೈಸಿ
https://pragati.taskdun.com/latest/ovaisyquestions-are-bsf-jawanseating-biritaniand-sleepingat-the-borders/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ