ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಸಹಕಾರ ರಂಗ ಬೆಳೆಯುವ ನಿಟ್ಟಿನಲ್ಲಿ ಎಲ್ಲರ ಪ್ರೋತ್ಸಾಹ, ತೊಡಗಿಕೊಳ್ಳುವಿಕೆ ಮುಖ್ಯವಾಗಿದೆ. ಸರಕಾರದ ಯೋಜನೆಗಳು ರೈತರನ್ನು ತಲುಪುವಲ್ಲಿ ಸಹಕಾರ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಜಗದೀಶ ಶಿಂತ್ರೆ ಹೇಳಿದರು.
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬೆಳಗಾವಿ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ ಸಹಕಾರ ರಂಗ ಹರಡಿಕೊಂಡಿದೆ. ಸಹಕಾರದಿಂದ ಬೆಳೆದಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಕೈ ಜೊಡಿಸಿದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರದೇಶಕ ಬಸವರಾಜ ಎಸ್. ಸುಲ್ತಾನಪುರಿ, ಸಹಕಾರ ರಂಗದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಲು ಸಹಕಾರ ಸಪ್ತಾಹ ಸಹಕಾರಿಯಾಗಿದೆ. ಸಹಕಾರ ಸಂಘಗಳು ಸ್ವಂತ ಬಂಡವಾಳವನ್ನು ಹೆಚ್ಚಿಸಿಕೊಂಡರೆ ಮಾತ್ರ ಸಂಘಗಳ ಅಸ್ತಿತ್ವ ಸಾಧ್ಯ. ಖಾಸಗಿ ಸಂಸ್ಥೆಗಳ ಜೊತೆ ಸಹಕಾರ ಸಂಘಗಳು ಪೈಪೋಟಿ ಮಾಡಬೇಕಾಗಿದ್ದು ಅದು ವೃತ್ತಿ ಕೌಶಲ್ಯದಿಂದ ಮಾತ್ರ ಸಾಧ್ಯ. ಸಂಘಗಳ ನಿರ್ದೇಶಕರನ್ನೊಳಗೊಂಡಂತೆ ಸಿಬ್ಬಂದಿಯೂ ಸಹ ಸಂಘದ ಏಳ್ಗೆಗಾಗಿ ದುಡಿಯಬೇಕು ಎಂದರು.
ಅತಿಥಿಗಳಾಗಿದ್ದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಎಸ್.ಕೆ. ಮಹೇಶ್ವರಪ್ಪ, ಸಹಕಾರ ಕ್ಷೇತ್ರದಲ್ಲಿ ಉದ್ಭವಿಸುವ ಸಮಸ್ಯೆಗಳ ಪರಿಹಾರಕ್ಕೆ ಮೂಲ ವೇದಿಕೆ ಸಹಕಾರ ಸಪ್ತಾಹವಾಗಿದೆ. ಸಹಕಾರ ಕ್ಷೇತ್ರವನ್ನು ಯಾವ ರೀತಿ ಬೆಳೆಸಬೇಕು ಎಂಬುದನ್ನು ವಿಚಾರ ಮಾಡುವಂತಹ ಸುದಿನ ಎಂದರು.
ಸಕ್ಕರೆ ರಂಗದಲ್ಲಿ ಬೆಳಗಾವಿಯು ಅಭಿವೃದ್ದಿ ಸಾಧಿಸಿದೆ. ಅದೇ ರೀತಿ ಸಹಕಾರ ಆಸ್ಪತ್ರೆ, ಸಹಕಾರ ಕ್ರೀಡಾ ಶಾಲೆ, ಸಹಕಾರ ವಿದ್ಯುತ್ ವಿತರಣಾ ಸಂಘ ಇವುಗಳ ಮೂಲಕ ಸಹಕಾರ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆ ತನ್ನದೇ ಆದ ಬ್ರಾಂಡ್ ನಿರ್ಮಾಣ ಮಾಡಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಂಕರಗೌಡ ವಾಯ್. ಪಾಟೀಲ ಮಾತನಾಡಿ, ಅತ್ಯಂತ ಸೇವಾ ಮನೋಭಾವ ಹೊಂದಿದ ರಂಗವೇ ಸಹಕಾರ ರಂಗ. ಎಲ್ಲ ಸಹಕಾರ ಸಂಘಗಳು ರೈತರಿಗೆ ತ್ವರಿತ ಸೇವೆಯನ್ನು ಒದಗಿಸಬೇಕು. ಹಿರಿಯ ಸಹಕಾರಿಗಳ ಮಾರ್ಗದರ್ಶನದಂತೆ ನಡೆಯೋಣ ಎಂದರು.
ಕಾಸ್ಕರ್ಡ ಬ್ಯಾಂಕ್ ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ ಉಪ್ಪಿನ ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ ವಿಷಯವನ್ನು ಮಂಡಿಸಿದರು.
ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಬಸಗೌಡ ಡಿ. ಪಾಟೀಲ, ನಿದೇಶಕ ಬಿ.ಎನ್. ಉಳ್ಳಾಗಡ್ಡಿ, ಕಾಸ್ಕರ್ಡ ಬ್ಯಾಂಕ್ ಬೆಳಗಾವಿ ಶಾಖೆಯ ಜಿಲ್ಲಾ ವ್ಯವಸ್ಥಾಪಕಿ ಅಶ್ವಿನಿ ಗಾಮನಗಟ್ಟಿ ವೇದಿಕೆಯ ಮೇಲಿದ್ದರು. ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಸ್ವಾಗತಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ