ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಕ್ಷರ ದಾಸೋಹ ಕೇಂದ್ರಕ್ಕೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುತ್ತಿರುವ ಅಕ್ಷರ ದಾಸೋಹ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಖುಷಿಯ ಸಂಗತಿ ಎಂದರು.
ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ “ಜಗದ್ಗುರು ರೇಣುಕಾಚಾರ್ಯ ಅಕ್ಷರ ದಾಸೋಹ ಕೇಂದ್ರ” ಮಾದರಿಯಾಗಿದೆ. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಉಪ ಕೇಂದ್ರಗಳನ್ನು ಒಳಗೊಂಡಿರುವ ಕೇಂದ್ರವೂ ಇದಾಗಿದೆ. 65 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯನ್ನು ನೀಡುತ್ತಿರುವ ಈ ಕೇಂದ್ರ ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಸಿಹಿ ಭೋಜನವನ್ನು ಕೂಡ ಮಾಡಿಸುತ್ತಿರುವುದು ಅಭಿಮಾನದ ಸಂಗತಿ. ಆಧುನಿಕ ಉಪಕರಣಗಳನ್ನು ಹೊಂದಿ ಯೋಜನೆಯನ್ನು ಸಮರ್ಪಕವಾಗಿ ನೀಡುತ್ತಿರುವುದು ಪ್ಸಂರಶಸಂಸನೀಯ ಸಂಗತಿ ಎಂದರು. ಸ್ವತಃ ಪ್ರತಿಯೊಂದು ಅಕ್ಷರ ದಾಸೋಹ ವಿಭಾಗಕ್ಕೆ ಹೋಗಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಎನ್ ಜಿ ದಾಸರ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಾಮಿಗಳು ಆಯುಕ್ತರನ್ನು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಡಯಟ್ ಪ್ರಾಚಾರ್ಯ ಮೋಹನ ಜಿರಿಗಿಹಾಳ ಉಪಸ್ಥಿತರಿದ್ದರು. ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅರಿಹಂತ ಬಿರಾದಾರ ಪಾಟೀಲ, ಬಿ.ಆರ್.ಸಿಯ ಎಸ್. ಡಿ. ನಾಯಿಕ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ