ಗಾಂಧಿನಗರ-ಬಸವನಗರ ರಸ್ತೆ ನಿರ್ಮಾಣಕ್ಕೆ 75 ಲಕ್ಷ ರೂ.- ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ದೇಶದ ಪ್ರತಿ ಮನೆ ಮನೆಗೆ ನಳಗಳ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಕುಡಿಯುವ ನೀರಿನ ಯೋಜನೆಯನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿಕೊಂಡರು.
ಶನಿವಾರದಂದು ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಜರುಗಿದ ೧.೭೬ ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಳ್ಳೂರ ಗ್ರಾಮದ ಪ್ರತಿಯೊಂದು ಮನೆಗಳಿಗೆ ನಳಗಳ ಮೂಲಕ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಹೇಳಿದರು.
ಈ ಹಿಂದೆ ಕುಡಿಯುವ ನೀರಿಗಾಗಿ ಆಹಾಕಾರ ಉಂಟಾಗುತ್ತಿತ್ತು. ಅಷ್ಟೊಂದು ಸಂಕಷ್ಟದ ಪರಿಸ್ಥಿತಿಯಲ್ಲಿ ನಾಗರೀಕರಿದ್ದರು. ನೀರಿನ ಅಭಾವ ಯಾರಿಗೂ ಬರಬಾರದು ಎನ್ನುವ ಸದುದ್ಧೇಶದಿಂದ ಬಿಜೆಪಿ ಸರ್ಕಾರ ಜೆಜೆಎಂ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಅರಭಾವಿ ಕ್ಷೇತ್ರವೊಂದಕ್ಕೆ ಸುಮಾರು ೩೬ ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಹಳ್ಳೂರ ಗ್ರಾಮದ ಒಟ್ಟು ೬ ಸ್ಥಳಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಇದಕ್ಕಾಗಿಯೇ ೧.೭೬ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದಷ್ಟು ಶೀಘ್ರ ಈ ಕಾಮಗಾರಿಯನ್ನು ಕೈಗೊಂಡು ಜನರಿಗೆ ಕುಡಿಯುವ ನೀರಿನ ಯೋಜನೆಯನ್ನು ಮುಟ್ಟಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಮ್ಮ ಆಶೀರ್ವಾದವೇ ಶ್ರೀರಕ್ಷೆ : ೧೯೯೨ ರಿಂದ ಹಳ್ಳೂರ ಜನತೆ ಸದಾ ನನ್ನೊಂದಿಗೆ ಇದ್ದುಕೊಂಡು ಎಲ್ಲ ಕೆಲಸಗಳಿಗೆ ಬೆನ್ನೆಲಬಾಗಿ ನಿಂತಿದೆ. ೨೦೦೪ ರಿಂದ ಈ ಭಾಗದ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ರೈತರ ಜೀವನಾಡಿಯಾಗಿರುವ ಕೆಎಂಎಫ್ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ರಾಜಕೀಯ ಬೆಳವಣ ಗೆಯಲ್ಲಿ ಎಲ್ಲರ ಸಹಕಾರ ಹಾಗೂ ಬೆಂಬಲವೇ ಕಾರಣವಾಗಿದೆ ಎಂದು ಹೇಳಿದರು.
ಗಾಂಧೀ ನಗರ ರಸ್ತೆ ನಿರ್ಮಾಣ : ಗ್ರಾಮಸ್ಥರ ಬೇಡಿಕೆಯಾಗಿದ್ದ ಗಾಂಧಿ ನಗರದಿಂದ ಬಸವನಗರ ವರೆಗೆ ೩ ಕಿ.ಮೀ ರಸ್ತೆ ನಿರ್ಮಾಣಕ್ಕೆ ೭೫ ಲಕ್ಷ ರೂ.ಗಳನ್ನು ನೀಡಲಾಗುವುದು. ತಿಂಗಳೊಳಗೆ ಈ ಕಾಮಗಾರಿ ಮುಗಿಯಲಿದೆ. ಅಲ್ಲದೇ ಹಳ್ಳೂರ ಗ್ರಾಮದಿಂದ ಮುಗಳಖೋಡ ರಸ್ತೆಯವರೆಗೆ ೨.೫೦ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಷ್ಟರಲ್ಲಿಯೇ ವೈದ್ಯಾಧಿಕಾರಿಯನ್ನು ನಿಯೋಜನೆ ಮಾಡಲಾಗುವುದು. ಕೊರೋನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಎಲ್ಲ ಅನುದಾನವನ್ನು ಮುಖ್ಯಮಂತ್ರಿಗಳು ಕೊರೋನಾಗೆ ಬಳಸುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಸ್ವಲ್ಪ ಹಿನ್ನೆಡೆಯಾಗಿದೆ ಎಂದು ಹೇಳಿದರು.
ಮೈ ಮರೆಯಬೇಡಿ. ಹುಷಾರಾಗಿರಿ : ಕಳೆದ ೨ ವರ್ಷಗಳಿಂದ ಮಹಾಮಾರಿ ಕೊರೋನಾ ಎಲ್ಲರನ್ನು ಕಾಡುತ್ತಿದೆ. ಇಂತಹ ಸಾಂಕ್ರಾಮಿಕ ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಕೆಲವರು ಕೊರೋನಾ ಹೋಗಿದೆ ಎಂದು ಮೈ ಮರೆತು ಅಡ್ಡಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಪಾಲಿಸಿಕೊಂಡು ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಿ. ಮೈ ಮರೆತರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಮೂರನೇ ಅಲೆ ಬರುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ನೋವುಗಳನ್ನು ಅನುಭವಿಸಿರುವ ಜನರಿಗೆ ಮೂರನೇ ಅಲೆ ಮತ್ತಷ್ಟು ತೊಂದರೆ ನೀಡಬಹುದಾಗಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದಿರಿ. ಒಂದು ವೇಳೆ ಅಲೆ ಅಪ್ಪಳಿಸಿದರೂ ಸಹ ಅದನ್ನು ಸಮರ್ಥವಾಗಿ ಎದುರಿಸಲಿಕ್ಕೆ ಅಧಿಕಾರಿ ವರ್ಗ ಸಿದ್ಧವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಸಂತಿ, ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್ಮ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬಸಪ್ಪ ಸಂತಿ, ಗ್ರಾಪಂ ಉಪಾಧ್ಯಕ್ಷೆ ಬೌರವ್ವ ಹೊಸಟ್ಟಿ, ಮುಖಂಡರಾದ ಹನಮಂತ ತೇರದಾಳ, ಅಡಿವೆಪ್ಪ ಫಾಲಬಾಂವಿ, ಸುರೇಶ ಕತ್ತಿ, ಲಕ್ಷ್ಮಣ ಛಬ್ಬಿ, ಸುರೇಶ ಡಬ್ಬನವರ, ಕುಮಾರ ಲೋಕನ್ನವರ, ಸಿದ್ದಪ್ಪ ಕುಲಗೋಡ, ಮಲ್ಲಪ್ಪ ಛಬ್ಬಿ, ಮುಪ್ಪಯ್ಯಾ ಹಿರೇಮಠ, ದುಂಡಪ್ಪ ಕೊಂಗಾಲಿ, ನಾಗಪ್ಪ ಕುಳ್ಳೋಳಿ, ಶಂಕರ ಬೋಳನವರ, ಶ್ರೀಶೈಲ ಅಂಗಡಿ, ಶ್ರೀಕಾಂತ ಕೌಜಲಗಿ, ಎಇಇ ಆಯ್.ಎಂ. ದಫೇದಾರ, ಪಿಡಿಓ ಎಚ್.ವಾಯ್. ತಾಳಿಕೋಟಿ, ಗ್ರಾಪಂ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
https://pragati.taskdun.com/belagavi-news/mla-balachandra-jarakihioli-worship-for-mla-balachandra-jarakihioli-worship-for-road-works/
https://pragati.taskdun.com/latest/gurlapura-mudalagiroadbalachandra-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ