ಪ್ರಗತಿವಾಹಿನಿ ಸುದ್ದಿ; ಮೈಸೂರು: ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಾಕ್ಸಮರ ತಾರಕಕ್ಕೇರಿದ್ದು, ನನ್ನ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವನ್ನು ಇಂದ್ರಜಿತ್ ಸಂಜೆಯೊಳಗೆ ಬಿಡುಗಡೆಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್, ಇಂದ್ರಜಿತ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ಇಂದ್ರಜಿತ್ ನನ್ನನ್ನು ಅನ್ ಎಜುಕೇಟೆಡ್, ಗಾ… ಎಂದು ಪದಪ್ರಯೋಗ ಮಾಡಿದ್ದಾರೆ. ನಾನು ಹತ್ತನೇ ಕ್ಲಾಸ್ ಪಾಸ್, ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಅದಕ್ಕೆ ಬೇಕಾದ ಶಿಕ್ಷಣಗಳನ್ನು ಪಡೆದಿದ್ದೇನೆ. ಇಂದ್ರಜಿತ್ ಲಂಕೇಶ್ ಗಂಡಸಾಗಿದ್ದರೆ ಸಂಜೆಯೊಳಗೆ ನನ್ನ ಆಡಿಯೋ ಬಿಡುಗಡೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಅಷ್ಟೇ ಅಲ್ಲ, ನಾನು ಇಲ್ಲಿಯವರೆಗೆ ಸುಮ್ಮನಿದ್ದೆ, ಅನಗತ್ಯವಾಗಿ ನನ್ನನ್ನು ಪ್ರಚೋದಿಸಲು ಯತ್ನಿಸಲಾಗುತ್ತಿದೆ. ನಾನು ಮೆಜೆಸ್ಟಿಕ್ ಮಾಡಲು ಸಿದ್ಧ, ಕುರುಕ್ಷೇತ್ರಕ್ಕೂ ಸಿದ್ಧ. ಗಾಡಿ ಓಡಿಸಲು ಸಿದ್ಧ ದನಗಳನ್ನು ಕಟ್ಟಿ ಹಾಲು ಕರೆಯಲು ಸಿದ್ಧ. ನಾನು ಎಲ್ಲದಕ್ಕೂ ಸಿದ್ಧ, ಇಂದ್ರಜಿತ್ ಗೆ ಯೋಗ್ಯತೆ ಇದ್ದರೆ ಒಂದೇ ಒಂದು ಸಿನಿಮಾವನ್ನು ನಿರ್ದೇಶನ ಮಾಡಿ ತೋರಿಸಲಿ. ನನ್ನ ಎಜುಕೇಶನ್ ಬಗ್ಗೆ ಮಾತನಾಡುವ ಇಂದ್ರಜಿತ್ ಪತ್ರಿಕೋದ್ಯಮಿಯಾಗಿ, ಓರ್ವ ಪತ್ರಕರ್ತನಾಗಿ ಲಾಯರ್ ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸುತ್ತಿರುವುದೇಕೆ? ಡ್ರಗ್ಸ್ ಕೇಸ್ ಎಲ್ಲಿಗೆ ಬಂತು? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ನಿರ್ಮಾಪಕ ಉಮಾಪತಿ ವಿರುದ್ಧವೂ ಕಿಡಿಕಾರಿರುವ ದರ್ಶನ್, 25 ಕೋಟಿ ವಂಚನೆಗೆ ಯತ್ನ ಕೇಸ್ ನ್ನು ಉಮಾಪತಿ ಡೈವರ್ಟ್ ಮಾಡಲು ಹೊರಟಿದ್ದಾರೆ. ಮೊದಲು ಪ್ರಕರಣದ ಬಗ್ಗೆ ತನಿಖೆ ಮುಗಿಯಲಿ. ವಂಚನೆಗೆ ಯತ್ನ ಕೇಸ್ ನಿಂದ ಆರಂಭವಾದ ವಿಷಯ ಹೋಟೆಲ್ ಸಿಬ್ಬಂದಿಗೆ ಹಲ್ಲೆ, ಇಂದು ದೊಡ್ಮನೆ ಆಸ್ತಿ ವಿಚಾರ ಪುನೀತ್ ರಾಜ್ ಕುಮಾರ್, ರಾಘಣ್ಣ ಪ್ರಾಪರ್ಟಿ ವಿಷಯಗಳವರೆಗೆ ಬಂದು ನಿಂತಿದೆ. ಅನಗತ್ಯವಾಗಿ ದೊಡ್ಮನೆ ವಿಚಾರ ಎಳೆದು ತರಲು ಉಮಾಪತಿ ಹೊರಟಿದ್ದಾರೆ. ಇಲ್ಲಿನ ವಿಷಗಳಿಗೂ ದೊಡ್ಮನೆ ವಿಷಗಳಿಗೂ ಯಾವುದೇ ಸಂಬಂಧವಿಲ್ಲ, ನಾನೂ ಕೂಡ ದೊಡ್ಮನೆ ಊಟ ತಿಂದು ಬೆಳೆದವನು, ಅಲ್ಲಿಂದಲೇ ನನ್ನ ಕರಿಯರ್ ಆರಂಭಿಸಿದ್ದು. ಎಲ್ಲಿಂದಲೋ ಆರಂಭವಾದ ಪ್ರಕರಣ ಇನ್ನೆಲ್ಲಿಗೋ ಹೋಗುತ್ತಿದೆ. ವಿಷಯಗಳನ್ನು ಅನಗತ್ಯವಾಗಿ ಡೈವರ್ಟ್ ಮಾಡುವುದು ಬೇಡ ಎಂದು ಗುಡುಗಿದ್ದಾರೆ.
ನಟ ದರ್ಶನ್ ಗೆ ಇಂದ್ರಜಿತ್ ಲಂಕೇಶ್ ತಿರುಗೇಟು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ