Karnataka NewsLatestPolitics

*ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

78ನೇ ಸ್ವಾತಂತ್ರ್ಯ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ: ಉಡುಪಿಯ ಅಜ್ಜರಕಾಡುವಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕರಾವಳಿ ಕಾವಲು ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಭಾಷಣ

ವೇದಿಕೆ ಮೇಲಿರುವ ಎಲ್ಲಾ ಗಣ್ಯರೇ, ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳೇ, ಅಧಿಕಾರಿಗಳೇ, ನಾಗರಿಕ ಬಂಧುಗಳೇ, ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಮಾಧ್ಯಮದ ಸ್ನೇಹಿತರೇ,
ಮೊಟ್ಟ ಮೊದಲಿಗೆ ತಮಗೆಲ್ಲರಿಗೂ 78ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.

ಸ್ವಾತಂತ್ರ್ಯ ದಿನಾಚರಣೆ ನಮಗೆ ಪವಿತ್ರ ಸ್ಮರಣೆಯ ದಿನವಾಗಿದೆ. ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ದೇಶಭಕ್ತಿಯ ಉತ್ಸಾಹವನ್ನು ಪ್ರಚೋದಿಸುತ್ತದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆತಿದ್ದಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ, ತ್ಯಾಗದ ಮನೋಭಾವ, ಸ್ವ ಹಿತಾಸಕ್ತಿಗಳನ್ನು ಬಿಟ್ಟು, ಜೈಲು ವಾಸವನ್ನು ಅನುಭವಿಸಿ ಹಾಗೂ ತಮ್ಮ ಯವ್ವನದ ಜೀವನವನ್ನು ಜೈಲಿನಲ್ಲಿ ಕಳೆದು, ಪ್ರಾಣತ್ಯಾಗ ಮಾಡಿ, ಎಲ್ಲಾ ರೀತಿಯ ನೋವು ಹಾಗೂ ಸವಾಲುಗಳನ್ನು ಎದುರಿಸಿ, ಪ್ರಬಲ ಹೋರಾಟದಿಂದಾಗಿ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ.

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಮಹಾತ್ಮ ಗಾಂಧೀಜಿ ಉಡುಪಿಗೆ ಭೇಟಿ ನೀಡಿ, ಇದೇ ಅಜ್ಜರಕಾಡಿನಲ್ಲಿ ದೇಶಪ್ರೇಮಿಗಳನ್ನು ಹೋರಾಟದೆಡೆಗೆ ಹುರಿದುಂಬಿಸುವಂತೆ ಭಾಷಣದಲ್ಲಿ ಕರೆ ನೀಡಿರುವುದು ಒಂದು ಐತಿಹಾಸಿಕ ಘಟನೆ. ಇದೇ ಸಂದರ್ಭದಲ್ಲಿ ಸತ್ಯಾಗ್ರಹದ ಸ್ವಯಂಸೇವಕರಿಗೆ ಸತ್ಯಕ್ಕಾಗಿ ಜಾಗೃತರಾಗಿರಿ, ಅದಕ್ಕೆ ಯಾವ ಬೆಲೆಕೊಡಲೂ ಸಿದ್ಧರಾಗಿ, ಇದೇ ನಿಮಗೆ ನನ್ನ ಹಿತವಚನ ಎಂದಿದ್ದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಶಿವರಾಮ ಕಾರಂತ, ಎಂ ಅಬ್ದುಲ್ ಖಾದರ್, ಪಾಂಗಾಳ ಮಂಜುನಾಥ್ ನಾಯಕ್, ಪಾಂಗಾಳ ಲಕ್ಷ್ಮೀ ನಾರಾಯಣ, ಉಡುಪಿಯ ಗೋವಿಂದರಾವ್, ಚೇರ್ಕಾಡಿ ರಾಜಗೋಪಾಲ ಶೆಟ್ಟಿ, ರಾಮಕೃಷ್ಣ ಕಾರಂತ, ಸೂರಪ್ಪ ಶೆಟ್ಟಿ ಬಸ್ರೂರು, ಬಿ.ಶಂಭು ಶೆಟ್ಟಿ, ಉಮಾಬಾಯಿ ಕುಂದಾಪುರ, ನಿರೂಪಮಾ ನಾಯಕ್, ಅಂಬಾಬಾಯಿ ಪೈ ಮೊದಲಾದವರು ಭಾಗವಹಿಸಿದ್ದು, ಇವರನ್ನೆಲ್ಲಾ ನಾವು ಈ ದಿನ ಸ್ಮರಿಸಲೇಬೇಕು.
ಪರಸ್ಪರ ನಂಬಿಕೆ, ಸಹಕಾರ ಮತ್ತು ಸಹಬಾಳ್ವೆಯ ಬಲದ ಮೇಲೆ ಮಾತ್ರ ನಾವು ಭಾರತಕ್ಕೆ ಭರವಸೆಯ ಭವಿಷ್ಯವನ್ನು ನಿರ್ಮಿಸಬಹುದು. ಒಗ್ಗಟ್ಟಿನ ಬಲಿಷ್ಠ, ಸಮೃದ್ಧ ಮತ್ತು ಕಾಳಜಿಯುಳ್ಳ ಭಾರತವನ್ನು ನಿರ್ಮಿಸಲು ಇಂದು ನಾವು ಒಟ್ಟಾಗಿ ಸಂಕಲ್ಪ ಮಾಡೋಣ.
ಯುವ ಭಾರತೀಯರ ಕೈಯಲ್ಲಿ ನಮ್ಮ ದೇಶದ ಉಜ್ವಲ ಭವಿಷ್ಯವಿದೆ. ನಮ್ಮ ಯುವಕರಿಗೆ ವಿಜ್ಞಾನ, ತಂತ್ರಜ್ಞಾನ ಹಾಗೂ ಇತರ ಹೊಸ ವಿಭಾಗಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡಿ, ಎಲ್ಲಾ ರೀತಿಯಲ್ಲಿಯೂ ಪ್ರೋತ್ಸಾಹಿಸಬೇಕು.

ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಹ ಜೀವನದ ಸಂಬಂಧವನ್ನು ಸಂರಕ್ಷಿಸಬೇಕು. ಉಲ್ಲಂಘಿಸಿದಾಗ ಉದಾರ ಸ್ವಭಾವವು ವಿನಾಶಕಾರಿ ಶಕ್ತಿಯಾಗಿ ಬದಲಾಗಬಹುದು. ಇದು ವಿಪತ್ತುಗಳಿಗೆ ಕಾರಣವಾಗುತ್ತದೆ. ನಮ್ಮ ಹಾಗೂ ನೆರೆ ರಾಜ್ಯ ಕೇರಳ ಸೇರಿದಂತೆ, ದೇಶದ ಇತರೆ ಭಾಗಗಳಲ್ಲಿ ವಿಪತ್ತಿನಿಂದ ಅಪಾರ ಜೀವಹಾನಿ ಹಾಗೂ ಆಸ್ತಿ ನಷ್ಟವಾಗಿರುವುದು ನಾವು ಕಾಣುತ್ತಿದ್ದೇವೆ. ಪರಿಸರವನ್ನು ಸಂರಕ್ಷಿಸುವುದು ಮತ್ತು ಸುಧಾರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.

ನಮ್ಮ ರಾಷ್ಟ್ರದ ಜಿ.ಡಿ.ಪಿ ಯು 7.3 ಪ್ರತಿಶತದಷ್ಟು ಬೆಳೆದಿದೆ. ಆಹಾರ ಧಾನ್ಯಗಳ ಉತ್ಪಾದನೆ 32.96 ಮಿಲಿಯನ್‌ನಷ್ಟು ದಾಟಿ ದಾಸ್ತಾನು ಹೆಚ್ಚಿದೆ. ಇದಕ್ಕಾಗಿ ನಮ್ಮ ರೈತರಿಗೆ ಹೃತ್ಪೂರ್ವಕ ಧನ್ಯವಾದಗಳು. ಆಹಾರ ಮತ್ತು ಕೃಷಿ ವಿಜ್ಞಾನಿಗಳು ಪ್ರಶಂಸೆಗೆ ಅರ್ಹರು.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯ ನೀಡಲಾಗುತ್ತಿದೆ. ಸರ್ಕಾರವು ಸಾಧಕ ಕ್ರೀಡಾಪಟುಗಳಿಗೆ ಉದ್ಯೋಗವಕಾಶ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಎಲ್ಲ ಇಲಾಖೆಗಳಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ.

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ, ಅದೂ ನಮ್ಮ ಕರ್ನಾಟಕದಲ್ಲಿ ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ನಾನು ಸಚಿವೆಯಾಗಿರುವುದು ಹೆಮ್ಮೆ ಎನಿಸುತ್ತದೆ. ಬರುವ ವರ್ಷ ಸುವ್ರಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ನಮ್ಮ ಸರ್ಕಾರ ಅಂಗನವಾಡಿಯ ಚಿತ್ರಣವನ್ನೇ ಬದಲಾಯಿಸಲು ನಿರ್ಧರಿಸಿದೆ. ಅಂಗನವಾಡಿಗಳಲ್ಲಿ ಮಾಂಟೆಸ್ಸರಿ-ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ 250 ಅಂಗನವಾಡಿಗಳನ್ನು ಪ್ರಾಯೋಗಿಕವಾಗಿ ಮಾಂಟೆಸ್ಸರಿಗಳಾಗಿ ಪರಿವರ್ತಿಸಲಾಗಿದೆ. ಇದನ್ನು ಮೊದಲ ಹಂತದಲ್ಲಿ ರಾಜ್ಯದ 17,800 ಅಂಗನವಾಡಿಗಳಿಗೂ ವಿಸ್ತರಿಸಲಾಗುವುದು.

ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ವಿದೇಶಿ ಹೂಡಿಕೆ ಆಕರ್ಷಣೆ ಮಾಡುವಲ್ಲಿ ಇತರೆ ರಾಜ್ಯಗಳಿಗಿಂತ ಕರ್ನಾಟಕ ಮುಂದೆ ಇದೆ. ಉದ್ಯಮ ಬೆಳೆಸುವುದರ ಜೊತೆಗೆ ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ, ಹಸಿವು ನಿವಾರಣೆ, ಕೃಷಿ ಮತ್ತು ನೀರಾವರಿಗೆ ಪ್ರೋತ್ಸಾಹ, ಮೂಲಸೌಕರ್ಯ ಅಭಿವೃದ್ಧಿ ಮತ್ತಿತರ ವಲಯಗಳ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿ ಜಾರಿ ಮಾಡಲಾಗಿದ್ದು, 2025ರ ಫೆಬ್ರವರಿಯಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.

ಯೂನಿವರ್ಸಲ್ ಬೇಸಿಕ್ ಇನ್ ‌ಕಂ (ಸಾರ್ವತ್ರಿಕ ಮೂಲ ಆದಾಯ) ಎಂಬ ಪರಿಕಲ್ಪನೆಯನ್ನು ತರುವ ಮೂಲಕ ಜನರ ಕೈಗೆ ನೇರವಾಗಿ ಹಣ ಕೊಡುವ ಪ್ರಯತ್ನವನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಅನುಷ್ಠಾನ ಮಾಡಲಾಯಿತು. 1.30 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಠ 6 ಸಾವಿರ ರೂ. ಗಳನ್ನು ನೀಡುವ ಮೂಲಕ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಯ ಹೊಸ ಭಾಷ್ಯ ಬರೆಯಲಾಯಿತು.
ಮನೆಯ ಬಾಗಿಲಲ್ಲೇ ತಪಾಸಣೆ ನಡೆಸಿ, ಅಗತ್ಯ ಔಷಧಿಗಳನ್ನು ಒದಗಿಸುವ ಗೃಹ ಆರೋಗ್ಯ ಯೋಜನೆಯನ್ನು ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದೆ. ಈ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುವುದು.

ನಮ್ಮ ಸರ್ಕಾರ ಯಾವುದೇ ವರ್ಗದ ಜನರನ್ನೂ ಮರೆತಿಲ್ಲ. ಎಲ್ಲ ವರ್ಗದವರಿಗೂ ಒಂದಲ್ಲ ಒಂದು ಕೊಡುಗೆಯನ್ನು ನೀಡಿದೆ ಎಂಬುದಕ್ಕೆ ಗಿಗ್ ಕೆಲಸಗಾರರಿಗೆ 2 ಲಕ್ಷ ರೂ. ಗಳ ವರೆಗೆ ಆರೋಗ್ಯ ವಿಮೆ ಜಾರಿಗೆ ತಂದಿರುವುದೇ ಸಾಕ್ಷಿ. ಅದೇ ರೀತಿ ಚಳಿ, ಗಾಳಿ, ಮಳೆ ಎನ್ನದೇ ಮನೆಮನೆಗೆ ಪತ್ರಿಕೆ ಹಂಚುವವರಿಗೂ ಆರೋಗ್ಯ ವಿಮೆ ತಂದಿದೆ.

ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳನ್ನು ಮಾತ್ರ ಜಾರಿಮಾಡಲಿಲ್ಲ, ಬದಲಿಗೆ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪರ ಯೋಜನೆಗಳಲ್ಲಿ, ಕಳೆದ ಸರ್ಕಾರದ ಅವಧಿಯಲ್ಲಿ ನಿಂತಿದ್ದ ಇಂದಿರಾ ಕ್ಯಾಂಟೀನ್, ಎಸ್‌ಸಿಎಸ್‌ಪಿ, ಟಿಎಸ್‌ಪಿ ವಿದ್ಯಾರ್ಥಿ ವೇತನ, ಹಾಸ್ಟೆಲ್ ‌ಗಳ ಸಂಖ್ಯೆ ಹೆಚ್ಚಳ, ಪಿಹೆಚ್ ‌ಸಿಗಳಿಗೆ ಮರುಜೀವ ನೀಡುವ ಮೂಲಕ ನಮ್ಮದು ಜನಪರ ಸರ್ಕಾರ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.

ಇಂದಿರಾ ಕ್ಯಾಂಟೀನ್ ‌ಗಳ ಸಂಖ್ಯೆ ಹೆಚ್ಚಳ ಮಾತ್ರವಲ್ಲ, ಅಲ್ಲಿನ ಊಟ, ತಿಂಡಿಯಲ್ಲಿಯೂ ಸಾಕಷ್ಟು ಬದಲಾವಣೆ ತಂದಿರುವುದು ಸಾಧನೆಯೇ ಸರಿ. ಹಿಂದೆ ಸ್ಥಾಪನೆ ಮಾಡಿದ್ದ 197 ಇಂದಿರಾ ಕ್ಯಾಂಟೀನ್ ‌ಗಳ ಜೊತೆಗೆ ಹೊಸದಾಗಿ 118 ಕ್ಯಾಂಟೀನ್ ಸ್ಥಾಪನೆ ಮಾಡಲಾಗುತ್ತಿದೆ. ಪ್ರತಿ ನಿತ್ಯ ಪ್ರತಿ ವ್ಯಕ್ತಿಗೆ ಊಟ ಹಾಗೂ ತಿಂಡಿಗೆ 63 ರೂ. ವೆಚ್ಚ ಆಗುತ್ತಿದ್ದು, ಅದರಲ್ಲಿ ಸರ್ಕಾರ 37 ರೂ. ಭರಿಸುತ್ತಿದೆ. ಜನಪರ ಸರ್ಕಾರವೊಂದು ಮಾತ್ರ ಇಂತಹ ಯೋಚನೆ ಮಾಡಲು ಸಾಧ್ಯ.

ಸಾರ್ವಜನಿಕರು ಹೋದಲ್ಲೆಲ್ಲಾ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳುತ್ತಿದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನವರು ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸಲು ಜನರ ಬಳಿಗೆ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಇತಿಹಾಸವನ್ನು ನಿರ್ಮಿಸಿತು. ಜಿಲ್ಲಾ ಮಟ್ಟದಲ್ಲಿ 1051 ಅರ್ಜಿಗಳು ಬಂದಿದ್ದು, ಎಲ್ಲವನ್ನೂ ಇತ್ಯರ್ಥಪಡಿಸಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಶಿಕ್ಷಣ ನೀತಿ (ಎನ್‌ಇಪಿ) ಸಾಕಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ನೆಲ ಸಂಸ್ಕೃತಿಯಿಂದ ದೂರವಿತ್ತು. ಅದನ್ನು ಬದಲಾವಣೆ ಮಾಡುವುದರೊಂದಿಗೆ ರಾಜ್ಯದ್ದೇ ಪ್ರತ್ಯೇಕ ಕರ್ನಾಟಕ ಶಿಕ್ಷಣ ನೀತಿ ತರಲು ಸಮಿತಿ ರಚಿಸಿದೆ. ಸಮಿತಿಯ ಮಧ್ಯಂತರ ವರದಿಯ ಪ್ರಕಾರ ಈಗಾಗಲೇ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಹುಧರ್ಮ, ಬಹುಸಂಸ್ಕೃತಿ, ಬಹುಭಾಷೆ ಇರುವ ದೇಶಕ್ಕೆ ಏಕ ಸಂಸ್ಕೃತಿ ಯಾವುತ್ತೂ ಹೊಂದುವುದಿಲ್ಲ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ವಾಸ್ತವಾಂಶಗಳನ್ನು ಒಳಗೊಂಡ ಶಿಕ್ಷಣ ನೀತಿಯ ಅಗತ್ಯತೆ ಇದೆ. ಅದೇ ಪ್ರಯತ್ನವನ್ನೇ ನಮ್ಮ ಸರ್ಕಾರ ಮಾಡಲು ಮುಂದಾಗಿದೆ.

ರೈತರ ಪರಿಶ್ರಮದಿಂದಾಗಿ ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್ ತಿಂಗಳಲ್ಲಿ ದಿನಕ್ಕೆ 90 ಲಕ್ಷ ಲೀಟರ್ ಇದ್ದದ್ದು, ಪ್ರಸ್ತುತ ಒಂದು ಕೋಟಿ ಲೀಟರ್ ‌ಗೆ ತಲುಪಿ ಕೆಎಂಎಫ್ ಹೊಸ ದಾಖಲೆಯನ್ನು ನಿರ್ಮಿಸಿದೆ.

ಈ ದಿನಗಳಲ್ಲಿ ನಾವು ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯ ಜೊತೆಗೆ ಪ್ರವಾಹದ ಪ್ರಕರಣಗಳನ್ನು ಕಂಡಿದ್ದೇವೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಜನರೊಂದಿಗೆ ನಮ್ಮ ಸರ್ಕಾರ ಇದೆ. ಈ ಪ್ರಕೃತಿ ವಿಕೋಪದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರ ದುಃಖವನ್ನು ನಾನು ಹಂಚಿಕೊಳ್ಳುತ್ತೇನೆ.

ಕಳೆದ ವರ್ಷ ಗ್ಯಾರಂಟಿ ಯೋಜನೆಗಳಿಂದ 7 ಕೋಟಿ ಜನರಿಗೆ ಅನುಕೂಲವಾಗಿದೆ. 1.2 ಕೋಟಿ ಜನ ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ. ಇದುವರೆಗೂ ಬಜೆಟ್ ನಲ್ಲಿ ಶೇ. 4 ರಿಂದ 5 ರಷ್ಟು ಅನುದಾನ ಮಾತ್ರ ಬಡವರಿಗೆ ಹಂಚಿಕೆಯಾಗುತ್ತಿತ್ತು. ಈ ಬಾರಿ ಬಜೆಟ್ ‌ನಲ್ಲಿ ಶೇ. 15 ರಷ್ಟು ಅನುದಾನ ಬಡವರಿಗೆ ಹಂಚಿಕೆಯಾಗಿರುವುದು ವಿಶೇಷ. ಇದರಿಂದ ಬಡವರ ಬದುಕು ಸುಧಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾದ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಒಂದು ವರ್ಷ ತುಂಬಿದ ಸಂಭ್ರಮ. ಎಲ್ಲ ಟೀಕೆಗಳನ್ನು ಮೀರಿ ಅದು ಯಶಸ್ವಿಯಾಗಿದೆ. ರಾಜ್ಯದಲ್ಲಿ 261.57 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಂಡಿದ್ದು, ಇದಕ್ಕಾಗಿ ಒಟ್ಟು 6350.46 ಕೋಟಿ ರೂ.ಗಳ ಪ್ರಯಾಣದ ವೆಚ್ಚವನ್ನು ಸರಕಾರದಿಂದ ಭರಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಜುಲೈವರೆಗೆ 1.39 ಕೋಟಿ ಮಹಿಳಾ ಪ್ರಯಾಣಿಕರು ಪ್ರಯೋಜನ ಪಡೆದಿದ್ದು, ಇದಕ್ಕಾಗಿ ಒಟ್ಟು 52.12 ಕೋಟಿ ರೂ. ಗಳನ್ನು ಭರಿಸಲಾಗಿದೆ.

ಬಡವರು, ದುರ್ಬಲರು ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯು ಆಸರೆಯಾಗಿದೆ. ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ವಾಗ್ದಾನದಂತೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಸಕಾಲದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯವಾಗದ ಕಾರಣ ಹಾಗೂ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಪ್ರತಿ ಫಲಾನುಭವಿಗಳಿಗೆ ಪ್ರತಿ ಕೆ.ಜಿ ಗೆ 34 ರೂಪಾಯಿಯಂತೆ ಪ್ರತಿ ತಿಂಗಳು ಒಬ್ಬರಿಗೆ 170 ರೂಪಾಯಿಗಳನ್ನು ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 4.08 ಕೋಟಿ ಫಲಾನುಭವಿಗಳಿಗೆ ಈವರೆಗೆ ಒಟ್ಟು 7484.38 ಕೋಟಿ ರೂ. ನೇರ ನಗದು ವರ್ಗಾವಣೆಯಡಿ ಹಣ ಪಾವತಿಸಲಾಗಿದೆ. ಜಿಲ್ಲೆಯಲ್ಲಿ 7.75,830 ಅರ್ಹ ಫಲಾನುಭವಿಗಳಿಗೆ ಜೂನ್ ವರೆಗೆ ಒಟ್ಟು 137.12 ಕೋಟಿ ರೂ. ಅನುದಾನವನ್ನು ನೇರ ನಗದು ವರ್ಗಾವಣೆಯಡಿ ಪಾವತಿಸಲಾಗಿದೆ.

ದುರ್ಬಲ ವರ್ಗದವರಿಂದ ಹಿಡಿದು ಎಲ್ಲ ವರ್ಗದವರಿಗೂ ಗೃಹಜ್ಯೋತಿ ಯೋಜನೆಯಿಂದ ಹಣ ಉಳಿತಾಯವಾಗುತ್ತಿದೆ. ಇಂದು ನಿಗದಿತ ಯೂನಿಟ್ ‌ಗಳಷ್ಟು ಉಚಿತವಾಗಿ ವಿದ್ಯುತ್ ನೀಡುವುದರ ಮೂಲಕ ಫಲಾನುಭವಿಗಳಿಗೆ ಹಣಕಾಸಿನ ಉಳಿತಾಯವನ್ನು ಮಾಡಿಕೊಟ್ಟಿದೆ. ರಾಜ್ಯದಲ್ಲಿ 1.6 ಕೋಟಿ ಕುಟುಂಬಗಳು ವಿದ್ಯುತ್ ಬಿಲ್ ಹೊರೆಯಿಂದ ಮುಕ್ತರಾಗಿದ್ದಾರೆ. ಸರ್ಕಾರ ಮುಂಗಡವಾಗಿ ಪ್ರತಿ ತಿಂಗಳು ಸುಮಾರು 804 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡುತ್ತಿದೆ. ಜಿಲ್ಲೆಯಲ್ಲಿ 3 ಲಕ್ಷ 20 ಸಾವಿರ ಜನ ಈ ಸೌಲಭ್ಯ ಪಡೆಯುತ್ತಿದ್ದಾರೆ. ಈವರೆಗೆ 233.56 ಕೋಟಿ ರೂ. ರಿಯಾಯಿತಿ ನೀಡಲಾಗಿದೆ. ಫಲಾನುಭವಿಗಳು ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದೆ.

ಮಹಿಳೆಯರು ಹಣಕಾಸು ವಿಚಾರಗಳಲ್ಲಿ ಸ್ವಾವಲಂಭಿಗಳಾಗಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ರಾಜ್ಯದಲ್ಲಿ 1 ಕೋಟಿ 20 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಈ ಯೋಜನೆ ದೊರಕಿದೆ. ಜಿಲ್ಲೆಯಲ್ಲಿ 2.20 ಲಕ್ಷ ಕ್ಕೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಗೃಹಲಕ್ಷ್ಮೀ ಯೋಜನೆ ಕೆಲವು ತಾಂತ್ರಿಕ ದೋಷಗಳಿಂದ ಜೂನ್ ಹಾಗೂ ಜುಲೈ ತಿಂಗಳ ಹಣ ಸ್ವಲ್ಪ ವಿಳಂಬವಾಗಿದೆ. ಕಳೆದ ಗುರುವಾರದಿಂದ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಉದ್ಯೋಗ ಅವಕಾಶಗಳು ವಿರಳವಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯುವಕ, ಯುವತಿಯರು ಭ್ರಮನಿರಸರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಯುವನಿಧಿ ಯೋಜನೆಯು ಯುವ ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ರಾಜ್ಯದಲ್ಲಿ 1,26,604 ಯುವಜನರು ನಿರುದ್ಯೋಗ ಭತ್ಯೆ ಪಡೆದಿದ್ದಾರೆ. ಜಿಲ್ಲೆಯಲ್ಲಿ 2028 ಯುವ ಪದವೀಧರರು ಇದರ ಲಾಭ ಪಡೆದುಕೊಂಡಿದ್ದಾರೆ.
ಪ್ರಕೃತಿಯ ಏರುಪೇರುಗಳಿಂದಾಗಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆ ಕುಂಠಿತವಾಗಿ ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕುಗಳು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಜಿಲ್ಲಾಡಳಿತ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಿ, ಬೇಸಿಗೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮವಹಿಸಿತ್ತು. ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಶೇ. 41 ರಷ್ಟು ಹೆಚ್ಚು ಮಳೆಯಾಗಿ ಪ್ರವಾಹ ಉಂಟಾದ ಸಂದರ್ಭದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಲ್ಲಿ ಇಡೀ ಆಡಳಿತ ಯಂತ್ರ ಒಟ್ಟಾಗಿ ಶ್ರಮಿಸಿ, ಜನರ ಸಂಕಷ್ಟಕ್ಕೆ ಸ್ಪಂದಿಸಿ, ಅದ್ಭುತ ಕೆಲಸ ಮಾಡಲಾಗಿದೆ. ಪರಿಹಾರ ವಿತರಣೆಯನ್ನು ಚುರುಕಾಗಿ ನಿರ್ವಹಿಸುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಅಳವಡಿಕೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ರಾಜ್ಯ ಸರ್ಕಾರ, ಸೆಲ್ಕೋ ಇಂಡಿಯಾ ಫೌಂಡೇಶನ್, ಸೇವಾ ಸಂಸ್ಥೆಗಳ ಸಹಕಾರದಿಂದ 58 ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಉಪಕೇಂದ್ರ, ಆಯುರ್ವೇದಿಕ್ ಸೆಂಟರ್, ಮಲೇರಿಯಾ ಸೆಂಟರ್ ‌ಗಳಲ್ಲಿ ತಲಾ ಒಂದರಂತೆ ವಿದ್ಯುತ್ ಸಂಪರ್ಕ ಇಲ್ಲದೆಯೂ ಗ್ರಾಮೀಣ ಭಾಗದ ಜನರಿಗೆ ದಿನದ 24 ಗಂಟೆಯೂ ನಿರಂತರವಾಗಿ ಸೇವೆ ನೀಡಲು ನೆರವಾಗಲಿದೆ.

  ನಮ್ಮ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕೆ ವಿಶೇಷ ಗಮನ ನೀಡಿದೆ. ನಮ್ಮ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಸಾಕ್ಷರತೆಯನ್ನು ಸಾಧಿಸಿದ ಜಿಲ್ಲೆ ಎಂದು ಪರಿಗಣಿಸಲ್ಪಟ್ಟಿದೆ. ಅನಾದಿಕಾಲದಿಂದಲೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ, ಶಿಕ್ಷಣ ವ್ಯವಸ್ಥೆಗೆ ಉಡುಪಿ ಹೆಸರುವಾಸಿಯಾಗಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ಇದಕ್ಕೆ ನನ್ನ ಅಭಿನಂದನೆಗಳು. 

  ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 1,732, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 4,776, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 150 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6,658 ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಕಲ್ಪಿಸಲಾಗಿದೆ.  

ನಮ್ಮ ದೇಶವು ಮೀನುಗಾರಿಕಾ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮೂರನೇ ಸ್ಥಾನ ಪಡೆದಿದೆ. ಇದಕ್ಕೆ ಜಿಲ್ಲೆಯ ಮೀನುಗಾರರ ಕೊಡುಗೆಯು ಅಪಾರ. ಮಲ್ಪೆಯ ಸರ್ವಋತು ಮೀನುಗಾರಿಕೆ ಬಂದರನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ಆರಂಭಿಕ ಹಂತವಾಗಿ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಜಿಲ್ಲೆಯ ಕಾನೂನು ಹಾಗೂ ಸುವ್ಯವಸ್ಥೆಗೆ ಕ್ರಮವಹಿಸಿದ್ದು, ಕಾಲಕಾಲಕ್ಕೆ ಸೂಚನೆ, ಸಭೆ ನಡೆಸಿ, ವಿವಿಧ ಕ್ರಮಗಳನ್ನು ಕೈಗೊಂಡು ಅಪರಾಧಿ ಪ್ರಕರಣ ನಿಯಂತ್ರಣ ತಡೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅಪರಾಧಿಕ ಪ್ರಕರಣ ಕಡಿಮೆಯಾಗಿದೆ.

ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಪ್ರಮುಖ ವಲಯಗಳಲ್ಲಿ ಒಂದಾದ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರವಾಸೋದ್ಯಮ ನೀತಿ 2024 -29ರ ಮೂಲಕ ಪ್ರವಾಸೋದ್ಯಮ ವಲಯದಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸಲು ಪ್ರೋತ್ಸಾಹಕಗಳನ್ನು ಹಾಗೂ ಸಹಾಯಧನವನ್ನು ಒದಗಿಸುವುದರ ಮೂಲಕ ಹೂಡಿಕೆದಾರರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರವಾಸಿಗರ ಅನುಕೂಲಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು, ರಸ್ತೆ, ವಿದ್ಯುತ್ ಶಕ್ತಿ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಘಟಕಗಳು, ಜಲ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ‌ಗಳ 3,402 ಗ್ರಾಮಗಳ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಯೋಜನೆಯಡಿ 734.02 ಕೋಟಿ ರೂ. ಗಳಲ್ಲಿ 525 ಕಾಮಗಾರಿ ಕೈಗೊಂಡು ಪ್ರಸ್ತುತ 437 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 8 ಲಕ್ಷ ಮಾನವ ದಿನಗಳ ಗುರಿಯೊಂದಿಗೆ ಈವರೆಗೆ 4.09 ಲಕ್ಷ ಮಾನವ ದಿನಗಳನ್ನು ಸೃಜಿಸಿ, 51 ಕೋಟಿ 12 ಲಕ್ಷ ರೂ. ಮೊತ್ತ ವಿನಿಯೋಗಿಸಲಾಗಿದೆ. 5,041 ಶಾಶ್ವತ ಆಸ್ತಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸೃಜಿಸಲಾಗಿದೆ. ಕೂಲಿ ಕೆಲಸದ ಮಕ್ಕಳಿಗೆ ಅನುಕೂಲವಾಗಲು 14 ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಾದ್ಯಂತ 8.116 ಸ್ವ-ಸಹಾಯ ಗುಂಪುಗಳನ್ನು ರಚಿಸಿ, 89,872 ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸಂಜೀವಿನಿ ಯೋಜನೆಯಡಿ ತಂದು ಅವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಅನುಕೂಲ ಮಾಡಲು ಸೂಪರ್ ಮಾರ್ಕೆಟ್ ಪ್ರಾರಂಭಿಸಲಾಗಿದೆ.

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ ಕಾರ್ಯಕ್ರಮಗಳಿಗೆ 2024 ನೇ ಮಾರ್ಚ್ ಅಂತ್ಯಕ್ಕೆ 922.61 ಲಕ್ಷ, ಸಸ್ಯೋತ್ಪಾದನೆ, ಪ್ರದೇಶ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಗೆ 129.36 ಲಕ್ಷ, ವಿವಿಧ ಯಂತ್ರೋಪಕರಣಗಳ ಖರೀದಿಗೆ 72.78 ಲಕ್ಷ ರೂ. ಸಹಾಯಧನ ನೀಡಲಾಗಿದೆ.

ಜಿಲ್ಲೆಯಲ್ಲಿ ಸುಮಾರು 12 ಸಾವಿರ ಅತಿ ಸಣ್ಣ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳು, 45 ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹಾಗೂ 6 ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, 1.30 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಹೊಸ ಕೈಗಾರಿಕೆ ಪ್ರದೇಶದ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

   ಜಿಲ್ಲೆಯಲ್ಲಿ  32,418 ಮಂದಿಗೆ ವೃದ್ಧಾಪ್ಯ ವೇತನ, 34,912 ಮಹಿಳೆಯರಿಗೆ ವಿಧವಾ ವೇತನ,  13,465  ವಿಕಲಚೇತನರಿಗೆ ಅಂಗವಿಕಲರ ವೇತನ, 62,094 ಮಂದಿಗೆ ಸಂಧ್ಯಾ ಸುರಕ್ಷಾ, 3,965 ಜನರಿಗೆ ಮನಸ್ವಿನಿ ಯೋಜನೆಯಡಿ, 46 ಜನರಿಗೆ ಮೈತ್ರಿ ಯೋಜನೆಯಡಿ ಒಟ್ಟಾರೆ 1,46,900 ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡಲಾಗುತ್ತಿದೆ.

ಸ್ವಾತಂತ್ರ್ಯ ಎಂಬುದು ಒಂದು ಜವಾಬ್ದಾರಿ ಹಾಗೂ ಹೊಣೆಗಾರಿಕೆಯಾಗಿದ್ದು, ಇದು ಸ್ವಚ್ಛಂದ ಎಂದು ಭಾವಿಸದೇ ನಾಗರಿಕರು, ಯುವಜನತೆ, ಈ ಜವಾಬ್ದಾರಿಯನ್ನು ಅರಿತು ಇದನ್ನು ಉಳಿಸಿ, ಬೆಳೆಸಲು ಪಣತೊಟ್ಟು ಮುನ್ನಡೆಯೋಣ, ಎಲ್ಲರಿಗೂ ಮತ್ತೊಮ್ಮೆ 78 ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.

ಜೈ ಹಿಂದ್- ಜೈ ಕರ್ನಾಟಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button