ಪ್ರಗತಿವಾಹಿನಿ ಸುದ್ದಿ; ಹಾಸನ: 7ನೇ ವೇತನ ಆಯೋಗದ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರು ನಾಳೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತಗೊಳ್ಳಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗದ ವರದಿ ಜಾರಿ ಮಾಡಲಾಗುವುದು. ಇದು ಕಾಂಗ್ರೆಸ್ ಪಕ್ಷದ ಭರವಸೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಸನದ ಆಲೂರಿನ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದ ಜನರ ಸಂಕಷ್ಟ, ನೋವು ಅರಿತು ಅವುಗಳಿಗೆ ಪರಿಹಾರ ಕಲ್ಪಿಸಲು ಮಾಡುತ್ತಿರುವ ಯಾತ್ರೆಯೇ ಪ್ರಜಾಧ್ವನಿ ಯಾತ್ರೆ. ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಯಾತ್ರೆ ಮಾಡುತ್ತಿದ್ದರೆ, ನಾನು ದಕ್ಷಿಣದ ಜಿಲ್ಲೆಗಳಲ್ಲಿ ಯಾತ್ರೆ ಮಾಡುತ್ತಿದ್ದೇನೆ.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಭಾಗದಲ್ಲಿರುವ ಕಾಡಾನೆ ದಾಳಿ, ಎತ್ತಿನಹೊಳೆ ಪರಿಹಾರ ಮತ್ತಿತರ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಈ ಭಾಗದಲ್ಲಿ ಕಾಡಾನೆ ದಾಳಿಗೆ 78 ಜನ ಮೃತಪಟ್ಟಿರುವುದಾಗಿ ಸುರೇಶ್ ಅವರು ತಿಳಿಸಿದ್ದಾರೆ. ಈ ಮೃತರ ಕುಟುಂಬಕ್ಕೆ ಸರಿಯಾದ ಪರಿಹಾರ ಸಿಕ್ಕಿಲ್ಲ. ರಾಜ್ಯಸಭೆ ಸಂಸದರಾದ ಜಿ.ಸಿ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ನಿಮ್ಮ ರಕ್ಷಣೆ ಹಾಗೂ ಅರಣ್ಯ ಹದ್ದುಬಸ್ತಿಗೆ 650 ಕೋಟಿ ಮಂಜೂರು ಮಾಡಿಸಿದರೂ ಈವರೆಗೂ ಕೆಲಸ ಪ್ರಾರಂಭವಾಗಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾತನಾಡುವಾಗ ಎತ್ತಿನಹೊಳೆ ವಿಚಾರದಲ್ಲಿ ನಿಮಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಹಿಂದುಳಿದ ವರ್ಗದವರಿಗೆ ಶೈಕ್ಷಣಿಕವಾಗಿ ನ್ಯಾಯ ಸಿಕ್ಕಿಲ್ಲ, ಕೈಗಾರಿಕೆಗಳು ಇಲ್ಲದ ಕಾರಣ ಜನ ವಲಸೆ ಹೋಗುತ್ತಿದ್ದಾರೆ. ರಸ್ತೆಬದಿ ವ್ಯಾಪಾರಿಗಳ ಸಮಸ್ಯೆ ಗಮನಕ್ಕೆ ತಂದಿದ್ದಾರೆ.
ಕಾಂಗ್ರೆಸ್ ಪಕ್ಷ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರಿಗೆ ಜಮೀನು ನೀಡುವ ಕಾನೂನು ತಂದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅರಣ್ಯ ಪ್ರದೇಶದಲ್ಲಿ ಇರುವವರನ್ನು ಒಕ್ಕಲೆಬ್ಬಿಸದೇ ಅವರ ಉಳುಮೆಗೆ ಜಮೀನು ನೀಡಲಿದೆ. ಈ ಬಗ್ಗೆ ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ.
ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದೆ. ಪರಿಣಾಮ ಎಲ್ಲ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಬಿಜೆಪಿಯವರು ನಿಮ್ಮ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ವಿದೇಶದಿಂದ ಕಪ್ಪು ಹಣ ತಂದು 15 ಲಕ್ಷ ನೀಡುತ್ತೇವೆ ಎಂದರು. 15 ಲಕ್ಷ ನಿಮ್ಮ ಖಾತೆಗೆ ಬಂತಾ? ಬರಲಿಲ್ಲ. ಅಚ್ಛೇ ದಿನ ನೀಡುತ್ತೇವೆ ಎಂದರು, ಅಚ್ಛೇದಿನ ಬಂತಾ? ಯಾರಿಗೂ ಬರಲಿಲ್ಲ. ಈ ಸರ್ಕಾರದಿಂದ ಯಾರಿಗೂ ಅನುಕೂಲವಾಗಿಲ್ಲ. ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಪದೇ ಪದೆ ಬರುತ್ತಿದ್ದಾರೆ.
ಇವರು ಕೋವಿಡ್, ನೆರೆ ಬಂದಾಗ ಈ ಕಡೆ ತಿರುಗಿಯೂ ನೋಡಲಿಲ್ಲ. ಮನೆ ಬಿದ್ದು ಹೋದವು. ಕೊಡಗಿನಲ್ಲಿ ಸಾವಿರಾರು ಜನರಿಗೆ ಆಸ್ತಿ ನಷ್ಟವಾಯಿತು. ಅವರ ಸಮಸ್ಯೆಗೆ ಸ್ಪಂದಿಸಲು ಬರಲಿಲ್ಲ. ಆದರೆ ಈಗ ಚುನಾವಣೆ ಕಾರಣಕ್ಕೆ ಬಂದಿದ್ದಾರೆ.
ಪ್ರಧಾನಿ ನಿನ್ನೆ ಶಿವಮೊಗ್ಗಕ್ಕೆ ಬಂದು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಯಾಕೆ ಹಾಕಿಸಿದರು? ನಾನು ಅವರ ಆಂತರಿಕ ವಿಚಾರ ಚರ್ಚೆ ಮಾಡುವುದಿಲ್ಲ.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಬಿಜೆಪಿ 600 ಆಶ್ವಾಸನೆಗಳನ್ನು ನೀಡಿತ್ತು. ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ನಿಮ್ಮ ತಾಲೂಕಿನಲ್ಲಿ ಯಾರಿಗಾದರೂ ಉದ್ಯೋಗ ಸಿಕ್ಕಿತಾ? ಪಿಎಸ್ಐ ಹುದ್ದೆ ಸೇರಿದಂತೆ ರಾಜ್ಯದ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದು, ಲಂಚ ನೀಡಿದವರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ. ಪಿಎಸ್ಐ ಹುದ್ದೆಯ 50 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ಮೋಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಜೈಲಿಗೆ ಹೋಗಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಕಚೇರಿಯಿಂದ ಗೃಹಮಂತ್ರಿ ಕಚೇರಿವರೆಗೂ ಎಲ್ಲ ಹಂತದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ರಾಜ್ಯದಲ್ಲಿ ಉಪಕುಲಪತಿಗಳ ನೇಮಕಕ್ಕೆ 5 ಕೋಟಿ ಲಂಚ ನೀಡಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು. ಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಿಲ್ಲ. ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳುವ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂದು ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಮಠದ ಸ್ವಾಮೀಜಿಗಳು, ಬಿಜೆಪಿಯ ಎಂಎಲ್ಸಿ ವಿಶ್ವನಾಥ್, ಬಿಜೆಪಿ ಶಾಸಕ ಯತ್ನಾಳ್, ಗೂಳಿಹಟ್ಟಿ ಶೇಖರ್ ಕೂಡ ಈ ಸರ್ಕಾರದ ಲಂಚಾವತಾರದ ಬಗ್ಗೆ ಆರೋಪ ಮಾಡಿದ್ದಾರೆ. ಈ ಬಿಜೆಪಿಯವರು ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಕಳಂಕವನ್ನು ತೆಗೆದುಹಾಕಬೇಕು. ಇದು ನಿಮ್ಮಿಂದ ಮಾತ್ರ ಸಾಧ್ಯ.
ನಿಮಗೆ ಸ್ವಚ್ಛ ಆಡಳಿತ ನೀಡಬೇಕು. ಕೇಂದ್ರದಿಂದ ಬರಬೇಕಾದ ಅನುದಾನವನ್ನು ಕೇಳಿ ಪಡೆಯಬೇಕಿದೆ. ಪಿಂಚಣಿದಾರರು ಹಳೇ ಮಾದರಿ ಪಿಂಚಣಿ ಮರು ಜಾರಿಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಸೂಕ್ತ ತೀರ್ಮಾನ ಮಾಡಲಿದೆ. ಇದರ ಜತೆಗೆ ಕಾಂಗ್ರೆಸ್ ಅನೇಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ಬೆಳಕು ತರಬೇಕು ಎಂಬ ಉದ್ದೇಶದಿಂದ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಇದರಿಂದ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎರಡು ಯೋಜನೆ ಮೂಲಕ ವರ್ಷಕ್ಕೆ 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷದಷ್ಟು ಆರ್ಥಿಕ ಶಕ್ತಿ ತುಂಬಲಾಗುವುದು. ಬಿಜೆಪಿ, ದಳದವರು ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ನಮ್ಮ ಸಹಿ ಇರುವ ಈ ಯೋಜನೆಗಳ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ನೀವು ಮನೆ ಮನೆಗೆ ಈ ಕಾರ್ಡ್ ತಲುಪಿಸಬೇಕು. ಅತಿ ಹೆಚ್ಚು ಮನೆಗೆ ಕಾರ್ಡ್ ತಲುಪಿಸುವವರಿಗೆ ವಿಶೇಷ ಬಹುಮಾನ ನೀಡಲಾಗುವುದು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯದಂತಹ ಜನಪರ ಕಾರ್ಯಕ್ರಮ ನೀಡುವ ಈ ಕೈಗೆ ನೀವು ಅಧಿಕಾರ ನೀಡಬೇಕು. ದಾನ, ಧರ್ಮ ಮಾಡುವ ಕೈ ಜತೆ ಕೈ ಜೋಡಿಸಬೇಕು.
ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸುವುದು ಅಸಾಧ್ಯ ಎಂಬ ಮಾತಿದೆ. ಅದೇರೀತಿ ಕಾಂಗ್ರೆಸ್ ಪಕ್ಷ ಸದಾ ಇಂತಹ ಜನಪರ ಕಾರ್ಯಕ್ರಮ ನೀಡುತ್ತಾ ಬಂದಿದೆ. ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಉಳುವವನಿಗೆ ಭೂಮಿ, ಆಣೆಕಟ್ಟುಗಳು, ವಿದ್ಯಾಸಂಸ್ಥೆ, ಬಡವರಿಗೆ ಜಮೀನು, ಮನೆ, ರೈತರಿಗೆ ಉಚಿತ ವಿದ್ಯುತ್, ಬಿಸಿಯೂಟ, ಸ್ತ್ರೀ ಶಕ್ತಿ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಹಾಲಿಗೆ 5 ರೂ. ಪ್ರೋತ್ಸಾಹ ಧನ ಕೊಟ್ಟಿತು.
ಈ ಭಾಗದಲ್ಲಿ ನಾಲ್ಕೈದು ಅಭ್ಯರ್ಥಿಗಳು ಪಕ್ಷದ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ನಮ್ಮ ಬಳಿ ಇರುವುದು ಒಂದೇ ಟಿಕೆಟ್, ನಾವು ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಎಲ್ಲರಿಗೂ ಅಧಿಕಾರ, ಹುದ್ದೆಗಳನ್ನು ನೀಡಲಾಗುವುದು. ನಿಮ್ಮ ಗುರಿ ನಿಮ್ಮ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ಆಗಿರಬೇಕು. ಇಲ್ಲಿರುವ ಜನತಾ ದಳದ ಶಾಸಕರು ತಮ್ಮ ಕೈಯಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರು ಅವರ ಕಷ್ಟ ಹೇಳಿಕೊಂಡಿದ್ದಾರೆ. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ.
ನಾವು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಿರಿ ಎಂದು ಹೇಳಿದೆವು. ಆದರೆ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಈಗ ನಮಗೂ ಒಂದು ಅವಕಾಶ ನೀಡಿ. ನಾನು ಕೂಡ ನಿಮ್ಮ ಮನೆಯ ಮಗ. ನನಗೆ ಹಾಸನ, ಕನಕಪುರ ಎರಡೂ ಒಂದೇ.
ರಾಜ್ಯಕ್ಕೆ ಅಭಿವೃದ್ಧಿಶೀಲ ಎಂದು ಕೀರ್ತಿ ಇತ್ತು. ಈಗ ಭ್ರಷ್ಟ ರಾಜ್ಯ ಎಂಬ ಕಳಂಕ ಅಂಟಿಕೊಂಡಿದೆ. ಇದನ್ನು ತೊಡೆದುಹಾಕಲು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಬಿಜೆಪಿ ಸರ್ಕಾರ ಕಿತ್ತೊಗೆಯುವಂತೆ ಮಾಡಬೇಕು. ದೇವರು ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯ. ಈಗ ನಿಮ್ಮ ಮುಂದೆ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಳ್ಳಿ. ಈ ಕೈ ಜೊತೆ ಕೈ ಜೋಡಿಸಿ. ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
*ಮಾಜಿ ಪ್ರಧಾನಿ, JDS ವರಿಷ್ಠ ಹೆಚ್.ಡಿ.ದೇವೇಗೌಡರು ಆಸ್ಪತ್ರೆಗೆ ದಾಖಲು*
https://pragati.taskdun.com/h-d-devegowdahospitalizedh-d-kumaraswamy/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ