ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಂತ್ರಜ್ಞಾನ ಆಧಾರಿತ ಸೈಬರ್ ಕ್ರೈಮ್ ಭವಿಷ್ಯದಲ್ಲಿ ಬಹುದೊಡ್ಡ ಸವಾಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಲಪಡಿಸುವುದು ಮತ್ತು ಉನ್ನತೀಕರಿಸುವ ಅಗತ್ಯವಿದ್ದು, ಬೆಂಗಳೂರಿನ ವಿವಿಧೆಡೆ 8 ನೂತನ ಸೈಬರ್ ಕ್ರೈಂ ವಿಶೇಷ ಠಾಣೆಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದು ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶ ಸಭೆಯಲ್ಲಿ ಭಾಗವಹಿಸಿ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ದೇಶದಲ್ಲಿ ಅತಿ ಶಾಂತಿಯುತ ರಾಜ್ಯವೆಂದು ಕರೆಸಿಕೊಳ್ಳುವ ನಮ್ಮ ರಾಜ್ಯದ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸೇರಿದ್ದಾಗಿದೆ ಎಂದು ಹೇಳಿದರು.
ಕಳೆದ ವರ್ಷ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿದ್ದು ಅಂಕಿ ಅಂಶಗಳ ಪ್ರಕಾರ ಅಪರಾಧಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆ ರಾಜ್ಯ ಸರ್ಕಾರದ ಪ್ರಥಮಾಧ್ಯತೆಯಾಗಿದ್ದು ಈ ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉಗ್ರಗಾಮಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಉಗ್ರಗಾಮಿ ನಿಗ್ರಹದಳ ಸ್ಥಾಪಿಸಲಾಗುವುದು. ಕಠಿಣ ಶ್ರಮ ಪಡುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಾಗಿ 10,134 ವಸತಿಗೃಹಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವಸತಿ ಗೃಹಗಳನ್ನು ನಿರ್ಮಿಸಲಾಗುವುದು.
ತುರ್ತು ಸೇವೆಗಾಗಿ 700 ವಾಹನಗಳನ್ನು ಖರೀದಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ನೌಕರಿಗೆ ಸೇರುವ ಅಭ್ಯರ್ಥಿಗಳಿಗಾಗಿ ಇನ್ಸ್‍ಪೆಕ್ಟರ್ ಹುದ್ದೆಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಜಾತಿಯ ಮೀಸಲಾತಿ ಅಭ್ಯರ್ಥಿಗಳಿಗೆ ಎರಡು ವರ್ಷ ಅವಧಿಯ ಹೆಚ್ಚಿನ ಅವಕಾಶ ನೀಡಲಾಗಿದೆ. ಇಲಾಖೆಯಲ್ಲಿ ಮಹಿಳಾ ಮೀಸಲಾತಿಯನ್ನು ಶೇ. 25 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಉನ್ನತಾಧಿಕಾರಿಗಳ ವರ್ಗಾವಣೆ ಪ್ರಸ್ತುತ ಒಂದು ವರ್ಷ ನಂತರ ಮಾಡಬಹುದು ಎಂದು ಕಾನೂನಿನಲ್ಲಿ ಅವಕಾಶವಿದ್ದು ಅದನ್ನು ಎರಡು ವರ್ಷದ ನಂತರ ವರ್ಗಾವಣೆ ಮಾಡಲು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆನ್‍ಲೈನ್ ಗೇಮ್ ಕುರಿತು ಅದೊಂದು ಜೂಜು ಎಂಬ ಸಾರ್ವಜನಿಕರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಅಧ್ಯಯನ ನಡೆಸಿ ಕಾನೂನು ಇಲಾಖೆಯ ಅಭಿಪ್ರಾಯಪಡೆದು ನೂತನ ಕಾನೂನು ಜಾರಿಗೊಳಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ