ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೋಕಾಕ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
ದಿನಾಂಕ: 15/01/2025 ರಂದು ಆರತಿ ಪ್ರಕಾಶ ಹಿರಟ್ಟಿ, ಸಾ:ಕೊಳವಿ, ಗೋಕಾಕ ಇವರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ “ತನ್ನ ಗಂಡನಾದ ಪ್ರಕಾಶ ಮಾರುತಿ ಹೀರಟ್ಟಿ ವಯಸ್ಸು-26 ವರ್ಷ ಸಾ:ಕೊಳವಿ ತಾ:ಗೋಕಾಕ ಈತನ ಜೊತೆ ವಿಜಯಕುಮಾರ ಕುಮಾರ ಮಲ್ಲಪ್ಪ ನಾಯಿಕ ಸಾ:ಕೊಳವಿ ಈತನು 2024 ರ ಡಿಸೆಂಬರ ತಿಂಗಳಲ್ಲಿ ಕೊಳವಿ ಗ್ರಾಮದಲ್ಲಿಯ ಗುಳಿಬಸವೇಶ್ವರ ಜಾತ್ರೆಯಲ್ಲಿ ತಂಟೆ ಮಾಡಿದ್ದು ಆರೋಪಿತನಿಗೆ ಹಿರಿಯರು ತಾಕೀತು ಮಾಡಿದ್ದರಿಂದ ದಿನಾಂಕ. 15/01/2025 ರಂದು 0030 ಗಂಟೆಗೆ ಆರೋಪಿ ನಂ. 1 ಈತನು ಇತರೆ ಆರೋಪಿತರ ಜೊತೆ ಸಂಗನಮತ ಮಾಡಿಕೊಂಡು ಪ್ರಕಾಶ ಈತನಿಗೆ ಕೊಲೆ ಮಾಡಿರುತ್ತಾರೆ” ಅಂತಾ ದೂರು ನೀಡಿದ್ದು, ಈ ಬಗ್ಗೆ ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 08/2025 ಕಲಂ: 189[2] 190[2] 190[3] 126[2] 352 103 ಸ/ಕ 190 ಬಿ ಎನ್ ಎಸ್-2023 ನೇದ್ದಕ್ಕೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ತನಿಖೆ ಕಾಲಕ್ಕೆ ಕೊಲೆಯಾದ ಪ್ರಕಾಶ ಮಾರುತಿ ಹಿರಟ್ಟಿ ಈತನ ಜೊತೆ ಆರೋಪಿ ನಂ. 1 ವಿಜಯಕುಮಾರ ಕುಮಾರ ಮಲ್ಲಪ್ಪ ನಾಯಿಕ ಸಾ:ಕೊಳವಿ ಈತನು 2024 ರ ಡಿಸೆಂಬರ ತಿಂಗಳಲ್ಲಿ ಕೊಳವಿ ಗ್ರಾಮದು ಗುಳಿಬಸವೇಶ್ವರ ಜಾತ್ರೆಯಲ್ಲಿ ತಂಟೆ ಮಾಡಿದ್ದರಿಂದ ಆರೋಪಿ ವಿಜಯಕುಮಾರ ಈತನಿಗೆ ಗ್ರಾಮದ ಹಿರಿಯರು ತಂಟೆ ಮಾಡದಂತೆ ತಾಕೀತು ಮಾಡಿದ್ದರು.
ಇದರಿಂದಾಗಿ ಆರೋಪಿ ವಿಜಯಕುಮಾರ ಕುಮಾರ ಮಲ್ಲಪ್ಪ ನಾಯಿಕ ಸಾ:ಕೊಳವಿ ಈತನು ಪ್ರಕಾಶನ ಮೇಲೆ ವಿಪರೀತ ಸಿಟ್ಟಾಗಿ, ಆಗಲೇ ಪ್ರಕಾಶ ಈತನಿಗೆ ಕೊಲೆ ಮಾಡುವ ನಿರ್ಧಾರ ಮಾಡಿದ್ದನು. ಆರೋಪಿ ವಿಜಯಕುಮಾರ ಈತನು ಈ ಘಟನೆಯ ಬಗ್ಗೆ ತನ್ನ ಸ್ನೇಹಿತರಾದ ಇನ್ನುಳಿದ ಆರೋಪಿತರ ಮುಂದೆಯು ಹೇಳುತ್ತಾ ಸಮಯ ಸಿಕ್ಕಾಗ ಪ್ರಕಾಶನಿಗೆ ಕೊಲೆ ಮಾಡುವುದಾಗಿ ಹೇಳಿದ್ದನು.
ಕೊಲೆಯಾದ ಪ್ರಕಾಶ ಇವನು ದಿನಾಂಕ. 14/01/2025 ರಂದು ರಾತ್ರಿ 1030 ಗಂಟೆಯ ಸುಮಾರಿಗೆ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರೆಗೆ ಬಂದಿದ್ದನ್ನು ಆರೋಪಿ ವಿಜಯಕುಮಾರ ಈತನು ನೋಡಿ, ಆತನಿಗೆ ಕೊಲೆ ಮಾಡಬೇಕು ಅಂತಾ ತನ್ನ ಸ್ನೇಹಿತರಾದ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು 8 ಜನ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಹೂಲಿಕಟ್ಟಿ ಗ್ರಾಮದ ಕೆರೆಯ ಸಮೀಪ ಹೋಗಿ ಪ್ರಕಾಶ ಈತನಿಗೆ ಕೊಲೆ ಮಾಡುವ ಸಂಚು ರೂಪಿಸಿ, ವಾಪಸ ಜಾತ್ರೆಗೆ ಬಂದು ತನ್ನ ಒಬ್ಬ ಅಪ್ರಾಪ್ತ ಸ್ನೇಹಿತನಿಗೆ ಪ್ರಕಾಶ ಈತನ ಚಲನವಲನಗಳ ಬಗ್ಗೆ ಗಮನಿಸಿ ಅವನು ಜಾತ್ರೆಯಿಂದ ಕೊಳವಿ ರಸ್ತೆಯ ಕಡೆ ಹೋಗುವಾಗ ಮಾಹಿತಿ ಕೊಡಲು ತಿಳಿಸಿ, ಇನ್ನೂಳಿದ ಆರೋಪಿತರ ಜೊತೆ ಹೋಗಿ ತಲ್ವಾರ, ಜಂಬೆ, ಚಾಕು ತೆಗೆದುಕೊಂಡು ಬಂದು ಹೂಲಿಕಟ್ಟಿಯಿಂದ ಕೊಳವಿ ಕಡೆ ಹೋಗುವ ದಾರಿಯ ಪಕ್ಕ ಪ್ರಕಾಶ ಈತನು ಬರುವುದನ್ನು ಕಾಯುತ್ತಾ ಅವಿತು ಕುಳಿತಿದ್ದನು.
ಆಗ ಪ್ರಕಾಶನಿಗೆ ಗಮನಿಸುತ್ತಿದ್ದ ಬಾಲಕನು ಪ್ರಕಾಶ ಈತನು ಒಂದು ಬೈಕ್ ಹಿಂದೆ ಕುಳಿತು ತನ್ನ ಇಬ್ಬರು ಗೆಳೆಯರ ಜೊತೆ ಹೋಗುತ್ತಿರುವ ಬಗ್ಗೆ ಆರೋಪಿ ವಿಜಯಕುಮಾರ ಈತನಿಗೆ ಮಾಹಿತಿ ನೀಡಿದ್ದು ಆಗ ಕೊಲೆಯಾದ ಪ್ರಕಾಶ ಈತನು ಬೈಕ್ ಮೇಲೆ ಹೋಗುವಾಗ ದಿನಾಂಕ. 15/01/2025 ರಂದು 0030 ಗಂಟೆಗೆ ಕೊಳವಿ ಹದ್ದಿಯಲ್ಲಿ ಆರೋಪಿತರಲ್ಲಿ ಒಬ್ಬನು ರಸ್ತೆಯ ಮೇಲೆ ಹೋಗಿ ಬೈಕ್‌ಗೆ ಕೈ ಮಾಡಿ ಅಡ್ಡಗಟ್ಟಿ ನಿಲ್ಲಿಸಿದಾಗ ಇನ್ನೂಳಿದ 6 ಜನ ಆರೋಪಿತರು ಬಂದು ಬೈಕ್ ಹಿಂದೆ ಕುಳಿತಿದ್ದ ಪ್ರಕಾಶ ಇವನಿಗೆ ಜಗ್ಗಿ ತಲ್ವಾರದಿಂದ ಹೊಡೆಯಲು ಪ್ರಯತ್ನಿಸಿದ್ದು, ಪ್ರಕಾಶ ಇವನು ತಪ್ಪಿಸಿಕೊಂಡು ರಸ್ತೆಯ ಬಾಜು ತೆಗ್ಗಿನಲ್ಲಿ ಬಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ತಲ್ವಾರ, ಜಂಬೆ, ಚಾಕುವಿನಿಂದ ಮನಸೋ ಇಚ್ಛೆ ಕಡಿದು, ಚುಚ್ಚಿ ಮುಖಕ್ಕೆ, ಹೊಟ್ಟೆಗೆ, ಕುತ್ತಿಗೆ ಹಿಂದೆ ಭಾರಿ ಗಾಯ ಪಡಿಸಿ ಕೊಲೆ ಮಾಡಿ ಬೈಕ್‌ಗಳ ಮೇಲೆ ಪರಾರಿ ಆಗಿದ್ದರು ಅಂತಾ ತಿಳಿದು ಬಂದಿರುತ್ತದೆ.
ಸದರ ಪ್ರಕರಣದ ಪತ್ತೆ ಕುರಿತು ಡಾ. ಭೀಮಾಶಂಕರ ಎಸ್.ಗುಳೇದ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರು ಸುರೇಶಬಾಬು ಆರ್ ಬಿ ಸಿಪಿಐ ಗೋಕಾಕ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತನಿಖಾ ತಂಡವು ತೃತಿ ಎನ್ ಎಸ್. ಮಾನ್ಯ ಹೆಚ್ಚುವರಿ ಎಸ್ ಪಿ 01 ಮತ್ತು ರಾಮಗೊಂಡ ಬಿ ಬಸರಗಿ ಹೆಚ್ಚುವರಿ ಎಸ್ ಪಿ 02 ಬೆಳಗಾವಿ, ಡಿ ಎಚ್ ಮುಲ್ಲಾ, ಡಿಎಸ್‌ಪಿ ಗೋಕಾಕ ಉಪವಿಭಾಗರವರ ಮಾರ್ಗದರ್ಶನದಲ್ಲಿ ಸದರಿ ಕೊಲೆ ಪ್ರಕರಣದ ತನಿಖೆ ಕೈಕೊಂಡು ದಿನಾಂಕ: 16/01/2025 ರಂದು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 08 ಜನ ಆರೋಪಿತರಿಗೆ ಬಂಧಿಸಿ, ಅವರಿಂದ ಕೊಲೆ ಮಾಡಲು ಉಪಯೋಗಿಸಿದ 2 ಮೋಟಾರ ಸೈಕಲ್ ಗಳನ್ನು, 5 ಮೊಬೈಲ್ ಗಳನ್ನು & ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸುರೇಶಬಾಬು ಆರ್.ಬಿ ಸಿಪಿಐ ಗೋಕಾಕ, ಕಿರಣ ಎಸ್ ಮೋಹಿತೆ, ಪಿಎಸ್‌ಐ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ, ಎ.ಎಸ್.ಐ ರವರಾದ ಎಸ್ ಕೆ ಪಾಟೀಲ, ಎಫ್ ಕೆ ಗುರನಗೌಡರ, ಟಿ ಎಸ್ ದಳವಾಯಿ, ಮತ್ತು ಸಿಬ್ಬಂದಿ ಜನರಾದ ಬಿ.ವಿ ನೇರ್ಲಿ, ಜಗದೀಶ ಗುಡ್ಲಿ, ಕುಮಾರ ಪವಾರ, ವಿ ಎಸ್ ಮಲಾಮರಡಿ, ಎಮ್ ವೈ ಪಡದಲ್ಲಿ, ಆರ್ ವಿ ಅರಮನಿ, ಡಿ ಬಿ ಅಂತರಗಟ್ಟಿ, ಡಿ ಜಿ ಕೊಣ್ಣೂರ, ಎಚ್ ಡಿ ಗೌಡಿ, ಸಂಜು ಮಾನೆಪ್ಪಗೋಳ, ವಿ.ಎಲ್. ನಾಯ್ಕವಾಡಿ, ಎನ್ ಜಿ ದುರದುಂಡಿ. ಪಿ ಬಿ ನೇಸರಗಿ, ಎಮ್ ಎನ್ ಪರಮಶೆಟ್ಟಿ, ಕೆ ಐ ತಿಳಿಗಂಜಿ, ಸಂತೋಷ ವಜ್ರಮಟ್ಟಿ, ಎಸ್ ಎಸ್ ಕಲ್ಲೋಳಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ವಿನೋದ ಠಕ್ಕನ್ನವರ ಮತ್ತು ಸಚೀನ ಪಾಟೀಲ ಇವರ ಕಾರ್ಯವನ್ನು ಎಸ್.ಪಿ ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ