ಅನುಭಾವಿ ಶರಣ ಹಡಪದ ಅಪ್ಪಣ್ಣ
12 ನೆಯ ಶತಮಾನದಲ್ಲಿ ಕಲ್ಯಾಣದ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ಆತ್ಮೀಯರಲ್ಲಿ ಹಡಪದ ಅಪ್ಪಣ್ಣವರು ಒಬ್ಬರು. ಬಸವಣ್ಣನವರ ಆತ್ಮೀಯ ಅಂತರಂಗದ ಅನುಭಾವಿ, ಆಪ್ತ ಕಾರ್ಯದರ್ಶಿ, ಅಲ್ಲದೇ ತಾಂಬೂಲನ್ನೊದಗಿಸುವ ಅಚ್ಚುಮೆಚ್ಚಿನ ಶರಣರಾಗಿದ್ದರು.
ಬಸವಣ್ಣನವರ ಸೇವಕನಾಗಿ ಕೊನೆಯವರೆಗೂ ಸೇವೆ ಮಾಡುತ್ತ ಲೌಕಿಕದಲ್ಲಿ ಮಾತ್ರವಲ್ಲದೇ ಪಾರಮಾರ್ಥಿಕ ವಿಷಯಗಳಲ್ಲಿಯೂ ಸಹಾಯಕನಾಗಿದ್ದ ಎಂದು ತಿಳಿದು ಬರುತ್ತದೆ. ಬಸವಣ್ಣನವರ ಜೀವನದ ಮೊದಲಿನಿಂದ ಐಕ್ಯದವರೆಗೂ, ಬಸವಣ್ಣನವರ ಒಡನಾಡಿ, ಅಪ್ಪಣ್ಣನಿಲ್ಲದಿದ್ದರೆ ಅವರ ಕಾರ್ಯಕ್ರಮಗಳೇ ನಡೆಯುತ್ತಿರಲಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.
ಶೂನ್ಯ ಸಂಪಾದನೆಯಲ್ಲಿ ಪ್ರಭುದೇವರು ಹಾಗೂ ಸಿದ್ಧರಾಮದೇವರು ಬಸವಣ್ಣನವರ ಅರಮನೆಯ ಬಾಗಿಲಲ್ಲಿ ಬಂದು ನಿಂತಾಗ ಅವರು ಪ್ರಭುದೇವರು ಎಂದು ಗುರುತಿಸುವಲ್ಲಿ ಸದೃಶ್ಯ ಪಾತ್ರ ನಿರ್ವಹಿಸಿದ್ದು ಅಪ್ಪಣ್ಣನವರು. ಈ ಸಂಗತಿಯನ್ನು ಬಸವಣ್ಣವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
“ಏನೆಂದು ಪಮಿಸುವೆನಯ್ಯಾ ತನ್ನಿಂದ ತಾ ತೋರದೆ
ಗುರು ಮುಖದಿಂದ ತೋರಿದ ತನ್ನ ನಿಲವ ನಿರುಪಮನು
…………………….ಕೂಡಲ ಸಂಗಮದೇವನರಲ್ಲಿ………………………….
ಪ್ರಭುದೇವರು,ಸಿದ್ಧರಾಮಯ್ಯದೇವರು, ಹಡಪದಪ್ಪಣ್ಣ
ನಿಂದ ಕಂಡು ಎನ್ನ ಜನ್ಮ ಸಫಲವಾಯಿತಯ್ಯ”.
ವ್ಯಕ್ತ್ತಿ-ಸಮಾಜ-ರಾಷ್ಟ್ರಗಳ ಸರ್ವಾಂಗ ಸುಂದರ ಬದುಕಿಗೆ ನೂರಾರು ಪ್ರಕಾರಗಳ ವೃತ್ತಿ-ಉದ್ಯೋಗಗಳು ಬೇಕು. ಈ ಉದ್ಯೋಗಗಳಲ್ಲಿಯೇ ಮೇಲು-ಕೀಳು ಎಂದು ಕಲ್ಪಿಸಿ ಜನರನ್ನು ಒಡೆದು ಆಳುವುದನ್ನು ಬಸವಣ್ಣನವರು ಸಹಿಸಲಿಲ್ಲ. ಅವರು ಉದ್ಯೋಗ-ವೃತ್ತಿಗಳಿಗೆ ‘ಕಾಯಕ’ ಎಂದು ಕರೆದು ಅದರ ಮೌಲಿಕತೆಯನ್ನು ಸಾರಿದರು. ಪ್ರಧಾನಿಯ ಕಾಯಕದಿಂದ-ಸೇವಕನ ಕಾಯಕದವರೆಗೆ, ಬ್ರಾಹ್ಮಣ ಕಾಯಕದಿಂದ-ಭಂಗಿಯ ಕಾಯಕದವರೆಗಿನ ಎಲ್ಲ ಕಾಯಕಗಳು ಸಮಾನವಾದವು.
ಇದರಿಂದ ಮೇಲು-ಕೀಳು, ಭೇದಭಾವವಿಲ್ಲದೇ ಸಮಾನತೆ-ಸ್ವಾತಂತ್ಯ-ಬಂಧುತ್ವದ ತಳಹದಿಯ ಮೇಲೆ ಹೊಸದಾದ ಲಿಂಗವಂತ ಧರ್ಮವನ್ನು ಸ್ಥಾಪಿಸಿದಾಗ, ಈ ಧರ್ಮದ ಹೃದಯದಂತಿದ್ದ ಅನುಭವ ಮಂಟಪಕ್ಕೆ ಕಾಶ್ಮಿರದಿಂದ ಕನ್ಯಾಕುಮಾರಿವರೆಗಿನ ಅಸಂಖ್ಯಾತ ಶರಣಚೇತನಗಳು ಧಾವಿಸಿದವು. ಈ ರೀತಿ ಕಲ್ಯಾಣಕ್ಕೆ ಬಂದವರಲ್ಲಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರು.
ಅಪ್ಪ ಬಸವರಾಜರ ಮಹಾಮನೆಯಲ್ಲಿ 770 ಶರಣ ಪ್ರಮಥರು ಮತ್ತು ಲಕ್ಷೋಪಲಕ್ಷ ಜಂಗಮ ಗಣಂಗಳ ಮಹಾಶರಣ ಬಳಗವೇ ತಾನಾದ ಕಲ್ಯಾಣಪುರದಲ್ಲಿ ಅಪ್ಪನ ಜೊತೆ ಜೊತೆಯಲ್ಲೆ ಇದ್ದು,ಅವರು ಹೇಳಿಕೊಟ್ಟ ಸಪ್ತಶೀಲಗಳನ್ನು ಚಾಚೂ ತಪ್ಪದೇ ಪಾಲಿಸಿ ಷಟ್ಸ್ಥಲಗಳ ಅರಿವ ಅರಿತು ಬೆರೆತವರು ಹಡಪದ ಅಪ್ಪಣ್ಣನವರು.
ಭಕ್ತ-ಗುರು-ಜಂಗಮ-ಲಿಂಗ ಸ್ವರೂಪದ ಕುರಿತು ಅಪ್ಪಣ್ಣನವರು ಮಾರ್ಮಿಕವಾಗಿ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
ಭಕ್ತನಾದರೂ ಆಗಲಿ ಗುರುವಾದರೂ ಆಗಲಿ
ಲಿಂಗವಾದರೂ ಆಗಲಿ ಜಂಗಮ ತಾನಾದರೂ ಆಗಲಿ
ಈ ಮರ್ತ್ಯ ಲೋಕದಲ್ಲಿ ಒಡಲವಿಡಿದು ಹುಟ್ಟಿದ ಮೇಲೆ
ಮಾಯೆ ಗೆದ್ದೆವೆಂದರೆ ಸಾಧ್ಯವಿಲ್ಲ ಕೇಳಿರಣ್ಣ !!
ಅಣ್ಣ ಬಸವಣ್ಣನವರ ಸೇವೆಯಲ್ಲಿ ತಮ್ಮನ್ನು ತಾವೇ ಸಮರ್ಪಣಾ ಭಾವದಿಂದ ಅರ್ಪಿಸಿಕೊಂಡು ಮುಗ್ಧರಾವರು ಅಪ್ಪಣ್ಣ. ಅದನ್ನು ತಮ್ಮ ವಚನದಲ್ಲಿ ಹೇಳಿದ್ದಾರೆ.
ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು,
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು,
ಎನ್ನ ಅರಿವು ನಿಮ್ಮ ಘನದೊಳಗೆ ಸವೆದು,
ನಿಶ್ಚಲ ನಿಜೈಕ್ಯವಾಗಿ—
ಬಸವಪ್ರಿಯ ಕೂಡಲಚೆನ್ನಸಂಗಯ್ಯಾ
ನೀ ನಾನೆಂಬುದು ಏನಾಯಿತ್ತೆಂದರಿಯೆ.
ಒಬ್ಬ ಅನುಭಾವಿ ಕೇವಲ ತಾನೊಬ್ಬನೇ ದಿವ್ಯತೆಯನ್ನು ಸಾಧಿಸಿದರೆ ಸಾಲದು, ತನ್ನೊಂದಿಗೆ ಸಮಜವನ್ನೂ ಮೇಲೆತ್ತಬೇಕು. ಸಮಾಜವನ್ನು ಹಸನಾಗಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಪ್ಪಣ್ಣನವರು ಅನುಭಾವ ಸಾಧನೆಯ ಬಗ್ಗೆ ಎಚ್ಚರಿಸಿದ್ದಾರೆ.
ಪತಿ ಅಪ್ಪಣ್ಣನವರಂತೆ ತಾಯಿ ನೀಲಮ್ಮನು ತಮ್ಮ ವಚನಗಳನ್ನು ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ನಾಮಾಂಕಿತದೊಂದಿಗೆ ರಚಿಸಿದ್ದಾರೆ. ಲಿಂಗಮ್ಮನವರು ಅನೇಕ ಬೆಡಗಿನ ವಚನಗಳನ್ನು ಕೂಡಾ ಬರೆದಿದ್ದಾರೆ. ಈ ಬೆಡಗಿನ ವಚನಗಳಲ್ಲಿ ನಿರೂಪಿತವಾಗಿರುವ ಅನುಭಾವವು ಆ ತಾಯಿಯ ಸಾಧನೆ-ಸಿದ್ಧಿಗಳ ದರ್ಶನ ಮಾಡಿಸುತ್ತದೆ.
ಒಂದು ಊರಿಗೆ ಒಂಬತ್ತು ಬಾಗಿಲು
ಆ ಊರಿಗೆ ಐವರು ಕಾವಲುಗಾರರು
ಆರು ಮಂದಿ ಪ್ರಧಾನಿಗಳು
ಇಪ್ಪತೈದು ಮಂದಿ ಪರಿವಾರ
ಅವರೊಳಗೆ ತೊಟ್ಟನೆ ತಳಲಿ ಬಳಲಲಾರದೆ
ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ,
ಆ ಅರಸನ ಗೊತ್ತವಿಡಿದು,
ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯದ ಮಾಡಿ,
ಒಂದು ಬಾಗಿಲಲಿ ನಿಂದು,
ಕಾವಲವರ ಕಟ್ಟಿಸಿ, ಪ್ರಧಾನಿಗಳ ಮೆಟ್ಟಿಸಿ,
ಪರಿವಾರವನೆ ಸುಟ್ಟು ಅರಸನ ಮುಟ್ಟಿ ಹಿಡಿದು ಓಲೈಸಲು,
ಸಪ್ತಧಾತು ಷಡುವರ್ಗವನೆ ಕಂಡು,
ಕತ್ತಲೆಯ ಕದಲೀಯ ದಾಟಿ
ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ
ಸುಖಿಯಾದನೆಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
ಹೀಗೆ ಶರಣರ ಸಂಗದಲ್ಲಿ ಸುಖಲೋಲರಾಗಿ ಜೀವಿಸುತಿರುವಾಗ ಬರಸಿಡಿಲಿನಂತೆ ಬಂದ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರ ಜೊತೆ ಕೂಡಲಸಂಗಮದವರೆಗೂ ಹೋಗುತ್ತಾರೆ. ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮ ತಾಯಿಯವರನ್ನು ಕರೆತರಲು ಕಲ್ಯಾಣಕ್ಕೆ ಮರಳುತ್ತಾರೆ.
ಅಷ್ಟರಲ್ಲಿಯೇ ಬ್ರಾಹ್ಮಣರ ಕುತಂತ್ರದಿಂದ ಕಲ್ಯಾಣ ಕ್ರಾಂತಿಯಾಗಿ ಶರಣರಿಗೆ ಎಳೆಹೂಟೆ ಶಿಕ್ಷೆ ನೀಡುತ್ತ ಕಲ್ಯಾಣವನ್ನೆ ರಕ್ತದ ಹೊಳೆಯಾಗಿಸಿ ಸಮಾಜದಲ್ಲಿ ಸಮಾನತೆಯ ಸಾರಿದ ಶರಣರ ವಚನಗಳು ಸುಟ್ಟು ಹೋದವು.
ಅವ್ವ ನೀಲಮ್ಮಳಿಗೆ ಬಸವಣ್ಣನವರ ಬಗ್ಗೆ ತಿಳಿಸಲು, ತಾಯಿ ದುಃಖಿತಳಾಗಿ ತನ್ನಿಷ್ಟಲಿಂಗದಲ್ಲೆ ಬಸವಪ್ಪನ ನಡೆಯ ಕಾಣುತ್ತಾಳೆ. ಆಗಲೇ ಅಪ್ಪ ಬಸವರಾಜರು ಲಿಂಗೈಕ್ಯರಾಗಿರುವುದನ್ನು ತಿಳಿದು ಅವ್ವ ನೀಲಮ್ಮ ಮತ್ತು ಅಪ್ಪಣ್ಣನವರು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.
ಬಸವ ಶರಣೆ ಲಿಂಗಮ್ಮ ತಾಯಿಯು ಮಹಾಮಾತೆ ಅಕ್ಕನಾಗಮ್ಮಳ ಜೊತೆಯಲ್ಲಿ ವೀರಗಚ್ಚೆಯ ಕಟ್ಟಿ, ಕೈಯಲ್ಲಿ ಖಡ್ಗವ ಹಿಡಿದು ವಚನ ಸಾಹಿತ್ಯ ಉಳಿಸಲು ಹೋರಾಡುವಾಗ ವೈದಿಕ ಪಾಲಕನೊಬ್ಬನು ಕುತಂತ್ರದಿಂದ ಅವ್ವನ ತಲೆಗೆ ಮತ್ತು ಹೊಟ್ಟೆಗೆ ಖಡ್ಗದಿಂದ ಚುಚ್ಚಲು ರಕ್ತದ ಮಡುವಿನಲ್ಲು ಕೊನೆಯುಸಿರ ಸಮರ್ಪಿಸುತ್ತಾಳೆ. ಹೀಗೆ ಕಲ್ಯಾಣದ ಎಲ್ಲ ಶರಣರು ಭಕ್ತಗಣವನ್ನು ಅಗಲುತ್ತಾರೆ.
ಬದುಕನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಶರಣ ದಂಪತಿಗಳಾದ ಅಪ್ಪಣ್ಣ-ಲಿಂಗಮ್ಮನವರ ಹಿತನುಡಿಗಳು ಸರ್ವರಿಗೂ ದಾರಿ ದೀಪಗಳಾಗಿವೆ. ಬಸವ ಮಹಾಗುರುವಿನ, ಚಿಜ್ಞಾನಿ ಚೆನ್ನಬಸವಣ್ಣ ಗುರುವಿನ ಸಾನಿಧ್ಯದಲ್ಲಿ ಬಾಳಿ ಇಂದಿಗೂ ತಮ್ಮ ವಚನ ಶರೀರದಿಂದ ನಮಗೆಲ್ಲ ಸಂದೇಶ ನೀಡುತ್ತಿದ್ದಾರೆ.
-ಪುಂಡಲೀಕ ಭೀ.ಹಡಪದ
ನರೇಂದ್ರ. ತಾ/ಜಿ. ಧಾರವಾಡ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ