ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆ ಸೋಮವಾರ ಇನ್ನಷ್ಟು ಕುತೂಹಲಕಾರಿ ಅಂಶಗಳಿಗೆ ಕಾರಣವಾಗಲಿದೆ.
ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ತುರ್ತು ಸಚಿವಸಂಪುಟ ಸಭೆ ಕರೆದಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಕಾಂಗ್ರೆಸ್ ನಾಯಕರ ಸರಣಿ ಸಭೆ ಮುಂದುವರಿದಿದ್ದು, ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ.
ಈ ಮಧ್ಯೆ, ಮುಖ್ಯಮಂತ್ರಿಗಳು ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಡಿದೆ. ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು.
ಸೋಮವಾರ ಕಾಂಗ್ರೆಸ್ ನ ಇನ್ನೂ 9 ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರೋಶನ್ ಬೇಗ್, ಎಂಟಿಬಿ ನಾಗರಾಜ, ನಾಗೇಂದ್ರ, ಅಂಜಲಿ ನಿಂಬಾಳಕರ್, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಶ್ರೀಮಂತ ಪಾಟೀಲ ಮೊದಲಾದವರ ಹೆಸರು ರಾಜಿನಾಮೆ ನೀಡುವವರ ಪಟ್ಟಿಯಲ್ಲಿ ಹರಿದಾಡುತ್ತಿದೆ. ಹಾಲಿ ಸಚಿವರೊಬ್ಬರ ಹೆಸರು ಕೂಡ ಈ ಪಟ್ಟಿಯಲ್ಲಿದೆ.
ಕೆಲವರು ಬಿಜೆಪಿ ಜೊತೆ ಡೀಲಿಂಗ್ ನಡೆಸುತ್ತಿದ್ದು, ವ್ಯವಹಾರ ಕುದುರಿದರೆ ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಸಮ್ಮಿಶ್ರ ಸರಕಾರ ಉಳಿಸಲು ಸಾಧ್ಯತೆ ಇದೆಯೇ ಎನ್ನುವ ಕುರಿತೂ ಚಿಂತನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ