
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಕಳ್ಳತನಕ್ಕಾಗಿ ಬರೋಬ್ಬರಿ 9 ಮಂದಿಯನ್ನು ಮದುವೆಯಾಗಿ ಅಷ್ಟು ಜನಕ್ಕೂ ಟೋಪಿ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಖತರ್ನಾಕ್ ಕಳ್ಳಿಯನ್ನು ವಾಣಿ ಎಂದು ಗುರುತಿಸಲಾಗಿದೆ. ವಿವಾಹವನ್ನು ಲಾಭದಾಯಕ ವ್ಯವಹಾರವನ್ನಾಗಿ ಮಾಡಿಕೊಂಡು ವಂಚನೆ ನಡೆಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ನಿವಾಸಿಯಾಗಿರುವ ವಾಣಿ, ತನ್ನ ಅತ್ತೆಯನ್ನು ಸಹಕಾರಿಯಾಗಿ ಬಳಸಿಕೊಂಡು ಯೋಜಿತ ರೀತಿಯಲ್ಲಿ ಯುವಕರನ್ನು ತನ್ನ ಬಲೆಗೆ ಬೀಳಿಸುತ್ತಿದ್ದಳು.
ಕಳ್ಳತನವನ್ನೇ ಬಂಡವಾಳವಾಗಿಸಿಕೊಂಡ ವಾಣಿ ಶ್ರೀಮಂತ ಹಾಗೂ ಹೆಚ್ಚು ಅನುಮಾನಿಸದ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ಪ್ರೀತಿ, ಪ್ರೇಮ ಎಂದು ತಲೆ ಕೆಡಿಸಿ ಅವರಿಗೆ ಮದುವೆ ಆಸೆ ಹುಟ್ಟಿಸಿ ಸಿಂಪಲ್ ಆಗಿ ಮದುವೆಯಾಗುತ್ತಿದ್ದಳು.
ಮದುವೆಯಾದ ಕೆಲವೇ ದಿನಗಳಲ್ಲಿ ಮನೆಲ್ಲಿದ್ದ ಚಿನ್ನಾಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿ ರಾತ್ರೋರಾತ್ರಿ ಪರಾರಿಯಾಗುತ್ತಿದ್ದಳು.
ಈ ರೀತಿಯಲ್ಲಿ ಇದುವರೆಗೆ ಎಂಟು ಜನರನ್ನು ಮದುವೆಯಾಗಿದ್ದು ಒಂಬತ್ತನೇ ಮದುವೆಯಾಗಿ ಆತನ ಮನೆಯಲ್ಲಿ ಕೂಡ ಕಳ್ಳತನ ಮಾಡಬೇಕು ಅನ್ನೋವಷ್ಟರಲ್ಲಿ ಸಿಕ್ಕಿ ಬಿದ್ದಿದ್ದಾಳೆ.
ಇತ್ತೀಚೆಗೆ ವಾಣಿ ಒಂಬತ್ತನೇ ವ್ಯಕ್ತಿಯನ್ನು ವಿವಾಹವಾಗಿದ್ದಳು. ಆದರೆ ಆಕೆಯ ವರ್ತನೆ ಮತ್ತು ಮಾತುಕತೆಗಳು ಪತಿಗೆ ಅನುಮಾನ ಮೂಡಿಸಿದೆ. ಹೀಗಾಗಿ ಆಕೆಯನ್ನು ಗಮನಿಸುತ್ತಿದ್ದರು. ಈ ವೇಳೆ ಆಕೆ ಮನೆಯಲ್ಲಿದ್ದ ಹಣ ಚಿನ್ನಾಭರಣ ದೋಚುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ.
ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

