ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ಹೆಣ್ಣುಭ್ರೂಣಗಳ ಹತ್ಯೆ ಮಾಡಿದ್ದ ಇಬ್ಬರು ವೈದ್ಯರು ಸೇರಿದಂತೆ 9 ಆರೋಪಿಗಳನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಭ್ರೂಣ ಹತ್ಯೆ ಕೇಸ್ ಪ್ರಕರಣ ಸಂಬಂಧ ಈ ಹಿಂದೆ ಶಿವನಂಜೇಗೌಡ, ವಿರೇಶ್, ನವೀನ್, ನಯನಾ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ ಆರೋಪಿಗಳ ವಿಚಾರಣೆ ವೇಳೆ ವೈದ್ಯರ ತಂಡವೂ ಈ ಕೃತ್ಯದಲ್ಲಿ ಭಾಗಿಯಾಗಿದೆ ಎಂಬುದು ಗೊತ್ತಾಗಿದೆ.
ಪ್ರಕರಣ ಸಂಬಂಧ ತಮಿಳುನಾಡಿನ ಚೆನ್ನೈ ಮೂಲದ ಡಾ.ತುಳಸಿರಾಮ್, ಡಾ.ಚಂದನ್ ಬಲ್ಲಾಳ್, ಚಂದನ್ ಬಲ್ಲಾಳ್ ಪತ್ನಿ ಮೀನಾ, ಲ್ಯಾಬ್ ಟೆಕ್ನಿಷಿಯನ್ ನಿಸ್ಸಾರ್, ಮೈಸೂರಿನ ಖಾಸಗಿ ಆಸ್ಪತ್ರೆ ರಿಸಪ್ಷನಿಸ್ಟ್ ರಿಜ್ಮಾ ಅವರನ್ನು ಬಂಧಿಸಲಾಗಿದೆ.
ಆರೋಪಿಗಳು ಸಿಂಡಿಕೇಟ್ ಮಾಡಿಕೊಂಡು ಹೆಣ್ಣುಭ್ರೂಣ ಹತ್ಯೆ ಮಾಡುತ್ತಿದ್ದರು. ತಿಂಗಳಲ್ಲಿ 20-25 ಭ್ರೂಣ ಹತ್ಯೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
15 ದಿನಗಳ ಹಿಂದೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆಗೆ ಬರುವವರ ಮಾಹಿತಿ ಕಲೆಹಾಕಿದ್ದರು. ಈ ಬಗ್ಗೆ ತಿಳಿದ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮಂಡ್ಯದಲ್ಲಿ ಕಬ್ಬಿನ ಗದ್ದೆಯಲ್ಲಿ ಶೀಟ್ ಮನೆ ಮಾಡಿಕೊಂಡು ಅಲ್ಲಿ ಸ್ಕ್ಯಾನಿಂಗ್ ಯಂತ್ರ ಇಟ್ಟು ಭ್ರೂಣ ಪತ್ತೆ ಮಾಡುತ್ತಿದ್ದರು. ಶೀಟ್ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿನ ಯಂತ್ರ, ಉಪಕರಣಗಳನ್ನು ವಶಕ್ಕೆ ಪಡೆದಿದ್ದರು.
ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಬೆಂಗಳೂರು ಹಾಗೂ ಮೈಸೂರಿನ ಕೆಲ ಆಸ್ಪತ್ರೆಗಳು ಇದರಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಪ್ರಕರಣ ಸಂಬಂಧ ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಪೈಲ್ಸ್ ಡೇ ಕೇರ್ ಸೆಂಟರ್, ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇನ್ನು ಬೇರೆ ಬೇರೆ ಆಸ್ಪತ್ರೆ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ