Latest

ಸಂಕೇಶ್ವರ: ಮನೆ ಕಳ್ಳರ ಇಬ್ಬರ ಬಂಧನ, 18 ಲಕ್ಷ ರೂ ಮೌಲ್ಯದ ವಸ್ತು ವಶ

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾತ್ರಿ ಮನೆಗಳ್ಳತನ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು 16 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 2 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಲು ಡಿಎಸ್‌ಪಿ ಗೋಕಾಕ ಹಾಗೂ ಸಿಪಿಐ ಹುಕ್ಕೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡವು ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ವ್ಯವಸ್ಥೆಯನ್ನು ಚುರುಕುಗೊಳಿಸಿದ್ದರು. ಶನಿವಾರ ರಾತ್ರಿ ಸಂಕೇಶ್ವರ- ನಿಡಸೋಸಿ ರಸ್ತೆಯ ಸಾಯಿ ಭವನ ಹತ್ತಿರ ಮಹಾರಾಷ್ಟ್ರದವರಾದ ತೌಫೀಕ ಸಿಕಂದರ ಜಮಾದಾರ ಮತ್ತು ಇರ್ಫಾನ ಬಾಬಾಸಾಬ ಮಾಲ್ದಾರ ಎನ್ನುವ ಇಬ್ಬರನ್ನುವಶಕ್ಕೆ ಪಡೆಯಲಾಯಿತು.
ಅವರ ಬಳಿ ಇದ್ದ ಇಂಡಿಕಾ ಕಾರನ್ನು ಪರೀಶೀಲಿಸಿದಾಗ ಕಾರಿನಲ್ಲಿ ಮನೆ ಕಳ್ಳತನ ಮಾಡಲು ಬೇಕಾಗುವ ಎಲ್ಲ ರೀತಿಯ ಸಲಕರಣೆಗಳು ಕಂಡು ಬಂದವು. ಇದರಿಂದಾ ಸಂಶಯ ದ್ವಿಗುಣಗೊಂಡು ಹೆಚ್ಚಿನ ವಿಚಾರಣೆಗೆ ಠಾಣೆಗೆ ಕರೆತಂದು ಕೂಲಂಕೂಷವಾಗಿ ವಿಚಾರಿಸಿದಾಗ, ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿ ಆರು, ಗೋಕಾಕ ತಾಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ಎರಡು ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವಿಚಾರಣೆ ಮುಂದುವರೆಸಿದಾಗ ಸಾಂಗಲಿಯಲ್ಲಿ ಒಂದು ಯುನಿಕಾರ್ನ ಬೈಕನ್ನು ಕಳ್ಳತನ ಮಾಡಿದ್ದು ಅದನ್ನು ಮನೆ ಕಳ್ಳತನ ಮಾಡಲು ಬಳಸುತ್ತಿರುವುದಾಗಿ ಹೇಳಿದರು.
25 ವರ್ಷದ ತೌಫಿಕ್ ಗೌಂಡಿ ಕೆಲಸ ಮಾಡುತ್ತಿದ್ದ. ಮೂಲತಃ ಹಾಥಕಣಗಲಾ ತಾಲೂಕಿನ ಚೌಗುಲೆವಾಡಿ ಕುಂಬಜದವನಾಗಿದ್ದು, ಹಾಲಿ ಸಂಕೇಶ್ವರದಲ್ಲಿ ವಾಸಿಸುತ್ತಿದ್ದಾನೆ. ಇರ್ಫಾನ ಬಾಬಾಸಾಬ ಮಾಲ್ದಾರ 38 ವರ್ಷದವನಿದ್ದು, ಕಾರು ಚಾಲಕನಾಗಿದ್ದಾನೆ. ಈತನೂ ಸಂಕೇಶ್ವರದಲ್ಲೇ ವಾಸವಾಗಿದ್ದಾನೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಂಡು ತನಿಖೆ ಮುಂದೆವರಿಸಲಾಗಿದೆ. ಕಳ್ಳತನ ಮಾಡಿದ 15.21 ಲಕ್ಷ ರೂ. ಮೌಲ್ಯದ 507 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ಮೌಲ್ಯದ ಒಂದು ಕಾರು ಮತ್ತು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಡಿ.ಟಿ.ಪ್ರಭು ಡಿಎಸ್‌ಪಿ ಗೋಕಾಕ, ಎಸ್. ಕೆ. ಹೊಳೆನ್ನವರ ಸಿ.ಪಿ.ಐ ಹುಕ್ಕೇರಿ, ಸಂಕೇಶ್ವರ ಪೊಲೀಸ ಠಾಣೆಯ ಪಿಎಸ್ಐಗಳಾದ ಎಮ್.ಎಮ್. ತಹಾಶೀಲ್ದಾರ ಮತ್ತು ಎ.ಪಿ.ಹೊಸಮನಿ ಹಾಗೂ ಸಿಬ್ಬಂದಿಯಾದ ಎ.ಎಸ್.ಸನದಿ, ಬಿ.ವ್ಹಿ ನೇರಲಿ, ಎಮ್.ಎಸ್.ಕಬ್ಬೂರ, ಎಮ್.ಎಸ್.ಹಾರೂಗೇರಿ, ಎಸ್. ಎಲ್ ಗಳತಗಿ, ಆರ್ ಎಸ್ ರಾಜಾಪೂರ, ಬಿ.ಎಸ್.ಕಪರಟ್ಟಿ, ಎಸ್.ಬಿ. ಪೂಜೇರಿ, ವಿಠ್ಠಲ. ಆರ್. ನಾಯಕ ತಂಡದಲ್ಲಿದ್ದರು ಎಂದು ಎಸ್ಪಿ ಸುಧೀರ ರಡ್ಡಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button