ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರಿ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಬಹುತೇಕ ಪ್ರದೇಶಗಳು ಮುಳುಗಡೆಯಾಗಿವೆ, ಅಪಾರ್ಟ್ ಮೆಂಟ್, ಮನೆಗಳು, ರಸ್ತೆ, ಐಟಿ ಕಂಪನಿಗಳು, ಶಾಪಿಂಗ್ ಮಾಲ್ ಗಳು ಮುಳುಗಡೆಯಾಗಿದ್ದು, ಬಡಾವಣೆಗಳಲ್ಲಿ ನೀರು ನದಿಯಂತೆ ಉಕ್ಕಿ ಹರಿಯುತ್ತಿವೆ. ಈ ಅವಾಂತರಗಳ ನಡುವೆ ಮತ್ತೊಂದು ಸಂಕಷ್ಟ ಎದುರಾಗಿದೆ.
ರಾಜಧಾನಿ ಬೆಂಗಳೂರಿಗೆ ಇನ್ನು ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಈಗಾಗಲೇ ವರುನಾರ್ಭಟಕ್ಕೆ ತತ್ತರಿಸಿರುವ ಸಿಲಿಕಾನ್ ಸಿಟಿ ಜನತೆಗೆ ಇದೀಗ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದ್ದು, ಎರಡು ದಿನ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.
ಭಾರಿ ಮಳೆಯಿಂದಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ ಗ್ರಾಮದಲ್ಲಿ ಕಾವೇರಿ ನೀರು ಪೂರೈಕೆ ಘಟಕ ಸಂಪೂರ್ಣ ಜಲಾವೃತಗೊಂಡಿದ್ದು, ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿವೆ. ಬೆಂಗಳೂರಿಗೆ ಈ ಘಟಕದಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಇದೀಗ ಮಳೆಯಿಂದಾಗಿ ಕಾವೇರಿ ನೀರು ಪೂರೈಕೆ ಘಟಕ ಜಲಾವೃತವಾಗಿರುವುದರಿಂದ ನೀರು ಸರಬರಾಜು ಅಸಾಧ್ಯವಾಗಿದೆ.
*ಟಿ. ಕೆ.ಹಳ್ಳಿ ನೀರು ಸರಬರಾಜು ಘಟಕ ಜಲಾವೃತ:*
*ಇಂದು ಮಧ್ಯಾಹ್ನ ಸಿಎಂ ಭೇಟಿ*
ನಿನ್ನೆ ರಾತ್ರಿ ನಗರದಲ್ಲಿ ಸುರಿದ ಮಳೆಗೆ ಕಾವೇರಿ ನೀರು ನಿರ್ವಹಿಸುವ ಬೆಂಗಳೂರು ಜಲ ಮಂಡಳಿ ಟಿ. ಕೆ.ಹಳ್ಳಿ ಘಟಕದಲ್ಲಿ ಹೆಚ್ಚು ನೀರು ನುಗ್ಗಿ ತೊಂದರೆಯಾಗಿದ್ದು, ಶಿಕ್ಷಕರ ದಿನಾಚರಣೆ ಮುಗಿದ ಕೂಡಲೇ ಟಿ. ಕೆ.ಹಳ್ಳಿಗೆ ಭೇಟಿ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬೆಂಗಳೂರು ಜಲ ಮಂಡಳಿ ಅಧಕ್ಷರು, ಇಂಜಿನಿಯರ್ ಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳನ್ನು ಈಗಾಗಲೇ ಅಲ್ಲಿಗೆ ಕಳುಹಿಸಲಾಗಿದೆ. ಮಂಡ್ಯ ಜಿಲ್ಲೆಯ ಅಧಿಕಾರಿಗಳು ಇದ್ದು ನೀರು ತೆಗೆಯುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬಹುತೇಕ ಸಂಜೆಯೊಳಗೆ ಪರಿಸ್ಥಿತಿ ತಹಬಂದಿಗೆ ಬರಲಿದೆ.ಕೂಡಲೇ ಯಂತ್ರೋಪಕರಣಗಳ ಚಾಲನೆ ಮಾಡಲು ತಾಂತ್ರಿಕ ಬೆಂಬಲ ನೀಡಿ ತುರ್ತು ಕೆಲಸ ಮಾಡಲಾಗುತ್ತಿದೆ. ಮಧ್ಯಾಹ್ನ ಭೇಟಿ ನೀಡಿ ಅಗತ್ಯ ಸೂಚನೆ ನೀಡಲಾಗುವುದು ಎಂದರು.
*2 ಎಸ್.ಡಿ.ಆರ್.ಎಫ್.ತಂಡ*
ಬೆಂಗಳೂರಿನಲ್ಲಿಯೂ ಹೆಚ್ಚಿನ ಮಳೆಯಾಗಿದ್ದು, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 30 ಕ್ಕೂ ಹೆಚ್ಚು ಕಡೆ ಹಾನಿಯಾಗಿದೆ. ತಲಾ 30 ಜನರುಳ್ಳ ಎರಡು ಎಸ್.ಡಿ.ಆರ್.ಎಫ್.ತಂಡವನ್ನು ಅಲ್ಲಿಗೆ ಕಳುಹಿಸಲು ಸೂಚನೆ ನೀಡಲಾಗಿದೆ. ರಸ್ತೆಗಳ ಮೇಲೆ ನೀರು ನಿಂತಿರುವುದನ್ನು ತೆಗೆಯಲು ಸೂಚಿಸಿದ್ದು, ಈಗಾಗಲೇ ಯೋಜಿಸಿದಂತೆ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲಾಗುವುದು ಎಂದರು.
ಪಿಎಸ್ ಐ ಅಕ್ರಮ; ಶಾಸಕರ ಆಡಿಯೋ ವೈರಲ್; ಧ್ವನಿ ನನ್ನದೇ ಆದರೆ…ಬಸವರಾಜ್ ದಡೇಸಗೂರು ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ