Kannada NewsKarnataka NewsLatest

ವೈರಲ್ ಆಯ್ತು ಶಿಕ್ಷಕರೊಬ್ಬರ ಪತ್ರ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಮೊದಲೇ ವಿವಿಧ ಅನ್ಯ ಕೆಲಸಗಳಿಂದ ನಲುಗುತ್ತಿರುವ ಶಿಕ್ಷಕರಿಗೆ ಈಗ ಓಟರ್ ಐಡಿ ಜೊತೆ ಆಧಾರ್ ಲಿಂಕ್ ಮಾಡುವ ಮತ್ತೊಂದು ಹೊಣೆಯನ್ನು ವಹಿಸಲಾಗಿದೆ. ಹಲವಾರು ಶಿಕ್ಷಕರು ಬೂತ್ ಲೆವಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಇದರಿಂದಾಗಿ ಅವರು ಹೇಗೆಲ್ಲ ಸಂಕಟ ಪಡುತ್ತಿದ್ದಾರೆ ಎನ್ನುವುದನ್ನು ಶಿಕ್ಷಕರೊಬ್ಬರು ವಿವರಿಸಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ರದ ಪೂರ್ಣ ವಿವರ ಹೀಗಿದೆ –

ಆತ್ಮೀಯ ಎಲ್ಲ BLO ಶಿಕ್ಷಕ ಬಂಧುಗಳೇ ತಮಗೆಲ್ಲರಿಗೂ ನಮಸ್ಕಾರಗಳು…🙏
ಈಗ ಕಳೆದ 1 ತಿಂಗಳಿಂದ ತಮ್ಮ ಮತದಾರ ಕ್ಷೇತ್ರದಲ್ಲಿ ಗುರುತಿನ ಚೀಟಿಗೆ ಆಧಾರ ಸಂಖ್ಯೆಯನ್ನು ಲಿಂಕ್ ಮಾಡುವಲ್ಲಿ ತಮ್ಮ ಎಲ್ಲಾ ಕೆಲಸವನ್ನು ಬದಿಗಿಟ್ಟು, ನಮ್ಮ ಮೂಲ ಬೋಧನಾ ವೃತ್ತಿಗಿಂತಲೂ ಈ ಕಾರ್ಯಕ್ಕೆ ಆದ್ಯತೆ ನೀಡಿ ಪ್ರತಿ ಮನೆ ಮನೆಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿ ಕುಂತಲ್ಲಿ ನಿಂತಲ್ಲಿ ತಮ್ಮ ಮೊಬೈಲನ ಗರುಡ ಆಪನಲ್ಲಿ ಅಪ್ ಲೋಡ್ ಮಾಡಿ ಸ್ಕ್ರೀನ್ ಶಾಟ್ ಹಾಕುತ್ತಿರುವದನ್ನು, ಹಾಗೂ ಫಾರಂ ನಂ.6, 7, 8 ಗಳ ಮಾಹಿತಿಯನ್ನು BLO ಗ್ರೂಪ್ ನಲ್ಲಿ ಎಲ್ಲರೂ ನೋಡುತ್ತಿದ್ದಾರೆ.

ಆದರೆ ಈಗ ಎಲ್ಲರೂ ಆಧಾರ ನಂಬರ್ ಲಿಂಕ್ ಮಾಡುವ ಕೆಲಸದಲ್ಲಿ ತೀವ್ರ ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದರಲ್ಲೂ ಕಂದಾಯ ಇಲಾಖೆಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ದಿನಕ್ಕೆ 3-4 ಬಾರಿ ಮೊಬೈಲಗೆ ಕರೆ ಮಾಡಿ ನಿಮ್ಮ ಪ್ರಗತಿ ಕಡಿಮೆ ಇದೆ, ಕೇವಲ ಇಷ್ಟೇ ಪರ್ಸೆಂಟ್ ಆಗಿದೆ ಅಂತ ಹೇಳುತ್ತ ತ್ವರಿತ ಗತಿಯಲ್ಲಿ ಕೆಲಸ ಪೂರ್ಣಗೊಳಿಸಿ, ಡಿ. ಸಿ. ಯವರು ಪ್ರತಿದಿನ ವಿಡಿಯೋ ಕಾನ್ಫರೆನ್ಸನಲ್ಲಿ ಪ್ರಗತಿ ಮಾಹಿತಿಯನ್ನು ಕೇಳುತ್ತಿದ್ದಾರೆ ಅಂತ ತೀವ್ರ ಒತ್ತಡ ಹೇರುತ್ತಿದ್ದಾರೆ.

ಆದರೆ ಆತ್ಮೀಯರೆ, ಸದರಿ ಕೆಲಸವು ಎಷ್ಟೊಂದು ಕ್ಲಿಷ್ಟಕರ ಇದೆ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿದೆಯೋ ಇಲ್ಲವೊ ಗೊತ್ತಿಲ್ಲ, ಅಥವಾ ಗೊತ್ತಿದ್ದೂ ಕೂಡ ಒತ್ತಡ ಹೇರುತ್ತಿದ್ದಾರೋ ಗೊತ್ತಿಲ್ಲ. ಅದೂ ಅಲ್ಲದೇ ಮತದಾರ ಗುರುತಿನ ಚೀಟಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯ ಅಲ್ಲವೆಂಬುದನ್ನು ಕೂಡ ಆದೇಶದಲ್ಲಿ ಸ್ಪಷ್ಟ ಪಡಿಸಿದೆ. ಕಾರಣ ಈಗ ನಾವೆಲ್ಲ ನಮ್ಮ ಇಲಾಖೆಯ ಪಾಠಬೋಧನೆ ಕೆಲಸ ದೊಂದಿಗೆ ದಿನನಿತ್ಯ ಕೇಳುವ ವಿವಿಧ ಮಾಹಿತಿ ಜೊತೆ ಈ ಕೆಲಸವನ್ನು ನಿರ್ವಹಿಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದೇವೆ.

ಮೊದಲೇ ನಮ್ಮ ತಾಲೂಕಿನಲ್ಲಿ ಸುಮಾರು 300 ಜನ ಶಿಕ್ಷಕರ ಕೊರತೆ ಇದೆ. ಅಂತಹದ್ದರಲ್ಲಿ ಕೊರೊನ ಹೊಡೆತಕ್ಕೆ ಸಿಕ್ಕು ಮಕ್ಕಳ ಶಿಕ್ಷಣ, ವಿದ್ಯಾಭ್ಯಾಸ ಪಾತಾಳಕ್ಕೆ ಕುಸಿದಿದೆ. ಈ ಕುಸಿತದಿಂದ ಹೊರ ಬರಲು, ಶಿಕ್ಷಣ ಗುಣಮಟ್ಟ ಏರಿಸಲು ಇದೇ ಶೈಕ್ಷಣಿಕ ವರ್ಷದಿಂದ ನಮ್ಮ ಇಲಾಖೆ ರಜಾ ಅವಧಿಯನ್ನು ಕಡಿತಗೊಳಿಸಿ 16 ಮೇ 2022 ರಿಂದಲೇ ಶಾಲೆಗಳನ್ನು ಪ್ರಾರಂಭಿಸಿದ್ದು ಇದಕ್ಕೂ ಮುಂಚೆನೇ ತರಬೇತಿ ನೀಡಿದ್ದು ಮಳೆ ಬಿಲ್ಲು, ವಿದ್ಯಾ ಪ್ರವೇಶ, ಕಲಿಕಾ ಚೇತರಿಕೆ ಎಂಬ ಹೆಸರಿನಲ್ಲಿ ವಿಶೇಷ ಪಠ್ಯಕ್ರಮ, ಪುಸ್ತಕಗಳನ್ನು ಸಿದ್ಧ ಪಡಿಸಿ ಬೋಧಿಸಲು ಪ್ರಯತ್ನಿಸುತ್ತಿದೆ.

ಈಗ ಈ ಆಧಾರ ಲಿಂಕ್ ಕಾರ್ಯಕ್ಕಾಗಿ ಮನೆ ಮನೆ ಅಲೆಯುವ ಶಿಕ್ಷಕರನ್ನು ನೋಡಿ ಸಾರ್ವಜನಿಕರು, ಪಾಲಕರು, ಎಸ್.ಡಿ.ಎಂ.ಸಿ. ಸದಸ್ಯರು ಏನು ಗುರುಗಳೇ ಹೀಗಾದರೆ ನಮ್ಮ ಮಕ್ಕಳ ಶಿಕ್ಷಣದ ಭವಿಷ್ಯ ಅಂತ ಪ್ರಶ್ನಿಸುತ್ತಿದ್ದಾರೆ. ಈಗ ಒಂದು ತಿಂಗಳ ಹಿಂದೆ   ಪತ್ರಿಕೆಗಳಲ್ಲಿ *”ಮತ್ತೆ ಕುಸಿತಗೊಂಡ ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ, ಖಾಸಗಿ ಶಾಲೆಗಳತ್ತ ಮುಖ ಮಾಡಿದ ಮಕ್ಕಳು”* ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟಗೊಂಡ ಸುದ್ದಿಯನ್ನು ತಾವುಗಳು ಓದಿರಬಹುದು.

ಶಿಕ್ಷಕರನ್ನು ಈ BLO ಕೆಲಸದಿಂದ ಮುಕ್ತಗೊಳಿಸಿ ಕೇವಲ ಮುಖ್ಯ ಚುನಾವಣೆಗಳಿಗೆ ಮತದಾನ ಸಂದರ್ಭಗಳಲ್ಲಿ ಮಾತ್ರ ಬಳಸಿಕೊಳ್ಳುವಂತೆ ಸೂಚಿಸಿದ್ದು ಕೇವಲ ಪತ್ರಿಕೆಗಳಲ್ಲಿ, ಕಾಗದದಲ್ಲಿ ಮಾತ್ರ ಆದೇಶವಾಗಿದ್ದು ಕಂಡು ಬರುತ್ತಿದೆಯೇ ಹೊರತು ನಾವು ಇನ್ನೂ ಈ ಕೆಲಸದಿಂದ ಬಿಡುಗಡೆ ಹೊಂದಿಲ್ಲ.

ಕಂದಾಯ ಇಲಾಖೆಯ ಅಧಿಕಾರಿಗಳು ನಮ್ಮ ಶಿಕ್ಷಕರನ್ನು ತಮ್ಮ ಚುನಾವಣೆ ಕೆಲಸಕ್ಕೆ ಕತ್ತೆಯಂತೆ ದುಡಿಸಿಕೊಂಡು ಅಕಸ್ಮಾತ್ ನಾವೇನಾದರೂ ನಮ್ಮ ಇತರೆ ಯಾವುದೇ ಕೆಲಸಕ್ಕೆ ತಹಸೀಲ್ದಾರ್ ಕಚೇರಿಗೆ ಹೋದರೆ ಕ್ಯಾರೇ ಅನ್ನುವುದಿಲ್ಲ. ಇನ್ನು ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಹಿಳಾ ಶಿಕ್ಷಕಿಯರಿಗೆ, ಗರ್ಭಿಣಿಯರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಚುನಾವಣೆ ಆದೇಶ ಬಂದಾಗ ಅದನ್ನು ರದ್ದು ಪಡಿಸುವಂತೆ ವಿನಂತಿಸಲು ಹೋದಾಗ ಸರಿಯಾಗಿ ಸ್ಪಂದನೆ ನೀಡದೆ ಹೀನಾಯವಾಗಿ ನಡೆಸಿ ಕೊಂಡಿರುವ ಸಾಕಷ್ಟು ದೂರುಗಳು, ತಾಜಾ ಉದಾಹರಣೆಗಳು ಇವೆ. ಗ್ರಾಮ ಪಂಚಾಯತ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿದಾಗ ಪರ್ಯಾಯ ಶಿಕ್ಷಕರನ್ನು ಕರೆದುಕೊಂಡು ಹೋಗಿ ರದ್ದು ಪಡಿಸುವಂತೆ ಕೋರಿದಾಗ ಮು.9 ರಿಂದ ಸಂಜೆ 4ರ ವರೆಗೂ ದಿನವಿಡೀ ಕೂಡ್ರಿಸಿಕೊಂಡು ಸತಾಯಿಸಿದ ಉದಾಹರಣೆಗಳು ಇವೆ. ಆರೋಗ್ಯ ಇಲಾಖೆಯು ಇತ್ತೀಚಿಗಷ್ಟೇ ನಡೆಸಿದ ಒಂದು ಸಮೀಕ್ಷೆಯ ವರದಿ ಪ್ರಕಾರ ಶೇ.50 ರಷ್ಟು ಶಿಕ್ಷಕರು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿದ್ದು ಇದು ಶಿಕ್ಷಣ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಈಗ ಇಷ್ಟೆಲ್ಲಾ ಬವಣೆ, ಸಂಕಟ, ನೋವು ನಾವು BLO ಗಳು ಅನುಭವಿಸುತ್ತಿದ್ದರೂ ಕೂಡ ನಮ್ಮ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗ್ರಾಮೀಣ ಶಿಕ್ಷಕರ ಸಂಘ, ಎನ್. ಪಿ. ಎಸ್. ಶಿಕ್ಷಕರ ಸಂಘ, ದೈಹಿಕ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಇತ್ಯಾದಿ ಸಂಘಗಳ ಪದಾಧಿಕಾರಿಗಳಿಗೆ ಕಾಣುತ್ತಿಲ್ಲವೇ? ಗೊತ್ತಾಗುತ್ತಿಲ್ಲವೇ? ಅಥವಾ ಕಂಡರೂ ಗೊತ್ತಿದ್ದರೂ ಜಾಣ ಮೌನ, ಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎಂಬುದೇ ಯಕ್ಷ ಪ್ರಶ್ನೆ ಆಗಿದೆ? ಅಥವಾ ಅವರಿಗೆ ಮೌಖಿಕವಾಗಿ ಲಿಖಿತವಾಗಿ ದೂರು ಸಲ್ಲಿಸಬೇಕೇ?

ಕಾರಣ ಸಂಭಂದ ಪಟ್ಟ ಎಲ್ಲಾ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು ಇತ್ತ ಕಡೆ ಲಕ್ಷ ಕೊಟ್ಟು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ BLO ಅಂತ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ತೊಂದರೆಯನ್ನು ಆದಷ್ಟು ಬೇಗ ಪರಿಹರಿಸಿ ಸಹಕರಿಸತ್ತೀರೆಂದು ನಂಬಿದ್ದೇವೆ.

https://pragati.taskdun.com/politics/bjp-janotsavacongresstweetministers-dance/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button