ಪ್ರಗತಿ ವಾಹಿನಿ, ಬೆಳಗಾವಿ – ಜಿಲ್ಲೆಯ ಸಂಕೇಶ್ವರದಲ್ಲಿ ಸ್ಥಳೀಯ ಆರೋಪಿಗಳೇ ಭಾಗಿಯಾಗಿದ್ದ ಒಂದು ಪ್ರಕರಣ ಹೊರತು ಪಡಿಸಿ ಮತ್ಯಾವುದೇ ಮಕ್ಕಳ ಕಳ್ಳತನದ ಪ್ರಕರಣ ನಡೆದಿಲ್ಲ, ಹೊರ ರಾಜ್ಯಗಳಿಂದಲೂ ಯಾರೂ ಮಕ್ಕಳ ಕಳ್ಳರು ಬಂದಿಲ್ಲ ಎಂದು ಎಸ್ ಪಿ ಸಂಜೀವ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ಕಳ್ಳತನವಾಗಿದೆ ಎಂಬ ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ. ಆದರೆ ಕಿತ್ತೂರು, ಗೋಕಾಕ ಮೊದಲಾದೆಡೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ವದಂತಿ ಹಬ್ಬಿಸಲಾಗುತ್ತಿದೆ.
ಪೊಲೀಸ್ ಇಲಾಖೆಯು ಸಾಕಷ್ಟು ವಿಚಾರಣೆ ನಡೆಸಿದೆ. ಜಿಲ್ಲೆಯ ಮೂಲಕ ರಾಮೇಶ್ವರಕ್ಕೆ ತೆರಳುತ್ತಿದ್ದ ನಾಗಾ ಸಾಧುಗಳನ್ನು, ಉಣ್ಣೆ ರಗ್ ಮಾರುವವರು ಹೀಗೆ ಸಂಶಯಾಸ್ಪದವಾಗಿ ಕಂಡ ಪ್ರತಿಯೊಬ್ಬರನ್ನೂ ವಿಚಾರಣೆ ನಡೆಸಿ ಯಾವುದೇ ಮಕ್ಕಳ ಕಳ್ಳರ ಹಾವಳಿ ಜಿಲ್ಲೆಯಲ್ಲಿ ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದೆ. ಕಿತ್ತೂರಿನಲ್ಲಿ ಮಕ್ಕಳ ಕಳ್ಳ ಎಂದು ಆರೋಪಿಸಿದ್ದ ವ್ಯಕ್ತಿ ಕಾರವಾರದ ಸಮೀಪದವನಾಗಿದ್ದು ಮಾನಸಿಕ ಅಸ್ವಸ್ಥ ಎಂಬುದು ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಕಳ್ಳತನದ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ (112) ತಿಳಿಸಬೇಕು. ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಲು ಮುಂದಾಗಬಾರದು ಎಂದು ಡಾ. ಸಂಜೀವ ಪಾಟೀಲ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ