ನಿಮಗೆ ತಾಕತ್ತು, ಧಮ್ಮಿದ್ರೆ ಪರೀಕ್ಷೆ ಬರೆದ ನಿರುದ್ಯೋಗಿ ಯುವಕರ ಮುಂದೆ ಹೇಳಿ; ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ ಪ್ರಿಯಾಂಕ್ ಖರ್ಗೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿಗಾಗಿ ಕನಕಗಿರಿ ಬಿಜೆಪಿ ಶಾಸಕರು ಲಂಚ ಪಡೆದ ಬಗ್ಗೆ ವಿಡಿಯೋ ಬಿಡಿಗಡೆ ಮಾಡಿದ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪಿಎಸ್ ಐ ಹುದ್ದೆ ನೇಮಕಾತಿಗಾಗಿ ಶಾಸಕ ಬಸವರಾಜ್ ದಡೇಸೂಗುರು ಪರಸಪ್ಪ ಎಂಬುವರಿಂದ ಹಣ ಪಡೆದುಕೊಂಡಿದ್ದಾರೆ. ಪರಸಪ್ಪ ಮಗನಿಗೆ ಪಿಎಸ್ ಐ ಹುದ್ದೆ ಪರೀಕ್ಷೆ ಬರೆಸಲು ಯತ್ನಿಸುತ್ತಿದ್ದಾಗ ಶಾಸಕರ ಬೆಂಬಲಿಗರು ಬಂದು ತಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿ ಪರಸಪ್ಪ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಶಾಸಕರು ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿಗೆ ಕರೆದೊಯ್ದು ತಮ್ಮ ಕಾರಿನಲ್ಲಿಯೇ ಪರಸಪ್ಪ ಅವರ ಬಳಿ 30 ಲಕ್ಷ ರೂಪಾಯಿ ಕೊಡುವಂತೆ ಹೇಳಿ ರೇಟ್ ಫಿಕ್ಸ್ ಮಾಡುತ್ತಾರೆ. ಅದರ ಮೊದಲ ಕಂತಾಗಿ 15 ಲಕ್ಷ ರೂಪಾಯಿಯನ್ನು ಪರಸಪ್ಪ ಕೊಟ್ಟಿದ್ದಾರೆ. ಈ ಬಗ್ಗೆ ಪರಸಪ್ಪ ಅವರೇ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ತಿಳಿಸಿದರು.
ಶಾಸಕರ ಭವನದಲ್ಲಿಯೇ ಶಾಸಕರು ಡೀಲ್ ಕುದಿರಿಸುತ್ತಿದ್ದಾರೆ. ವಿಧನಸೌಧ ಈಗ ವ್ಯಾಪಾರ ಸೌಧವಾಗಿದೆ. ಹಣ ಕೊಟ್ಟರೂ ಕೆಲಸ ಯಾಕೆ ಮಾಡಿಕೊಡುತ್ತಿಲ್ಲ ಎಂದು ಪರಸಪ್ಪ ಕೇಳಿದಾಗ ಶಾಸಕರು ಸರ್ಕಾರಕ್ಕೆ ಕೊಟ್ಟಿದ್ದೇನೆ ಎನ್ನುತ್ತಾರೆ. ಅಂದರೆ ಶಾಸಕರು ಸರ್ಕಾರದ ಯಾರಿಗೆ ಹಣ ಕೊಟ್ಟಿದ್ದಾರೆ. ಅಂದು ಗೃಹಮಂತ್ರಿಯಾಗಿದ್ದವರು ಯಾರು? ಅಧಿಕಾರಿಗಳು ಯಾರು ಯಾರು ಇದ್ದರು? ಸರ್ಕಾರ ಅಂದರೆ ವಿಧಾನಸೌಧಕ್ಕೆ ಹಣ ಹೋಗಿದೆ ಎಂದರ್ಥ. ಸಾಲಮಾಡಿ ಹಣ ಕೊಟ್ಟರೂ ಕೆಲಸ ಮಾಡಿಕೊಡದಿದ್ದಾಗ ಪರಸಪ್ಪ ಹಣ ವಾಪಸ್ ಕೊಡುವಂತೆ ಕೆಳಿದ್ದಾರೆ. ಆಗ ಶಾಸಕರು ನೆಪ ಹೇಳಲು ಆರಂಭಿಸಿದ್ದಾರೆ. ಹಣ ವಾಪಸ್ ಕೊಡದಿದ್ದಕ್ಕೆ ಇಷ್ಟೆಲ್ಲ ಹಗರಣಗಳು ಹೊರಗೆ ಬಂದಿವೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರು ಸಚಿವರುಗಳಿಗೆ ಬ್ರೋಕರ್ಸ್ ಆಗಿದ್ದಾರೆ ಎಂದು ಇಲ್ಲಿ ಸ್ಪಷ್ಟ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಇಂದು ಭ್ರಷ್ಟ ಜನತಾ ಪಕ್ಷವಾಗಿ ಪರಿವರ್ತನೆಯಾಗಿದೆ. ಇಲ್ಲಿ ಬಿಜೆಪಿ ಶಾಸಕರೆಲ್ಲ ಬ್ರೋಕರ್ ಜನತಾ ಪಕ್ಷದ ಶಾಸಕರಾಗಿದ್ದಾರೆ. ವಿಧಾನಸೌಧದಲ್ಲಿಯೇ ಡೀಲ್ ಮಾಡುತ್ತಿದ್ದಾರೆ. ಅಂದರೆ ಹೀಗೆ ಬಿಟ್ಟರೆ ವಿಧಾನಸೌಧವನೂ ಮಾರಿಬಿಡುತ್ತಾರೆ ಎಂದು ಗುಡುಗಿದರು.
ಶಾಸಕರು ವೈರಲ್ ಆದ ಆಡಿಯೋ ತನ್ನದೇ ಎಂದು ಹೇಳಿಕೊಂಡಿದ್ದಾರೆ. ಆದರೂ ಶಾಸಕರಿಗೆ ಈವರೆಗೆ ಒಂದು ನೋಟೀಸ್ ಕೊಟ್ಟಿಲ್ಲ. ಸರ್ಕಾರ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಆಡಿಯೋ ನನ್ನದೇ ಎಂದು ಹೇಳಿದರೂ ಸಿಎಂ ಬೊಮ್ಮಾಯಿಯವರು ಶಾಸಕರನ್ನು ಕರೆದು ಯಾಕೆ ಎಂದು ವಿಚಾರಿಸಿಲ್ಲ. ಇಷ್ಟೆಲ್ಲ ಹಗರಣಗಳು ಸರ್ಕಾರದ ಸಚಿವರು, ಶಾಸಕರಿಂದ ನಡೆಯುತ್ತಿದ್ದರೂ ಮೊನ್ನೆ ಜನಸ್ಪಂದನ ಸಮಾವೇಶ ಎಂದು ಮಾಡಿ ಸಿಎಂ ಘಂಟಾಘೋಷವಾಗಿ ಧೈರ್ಯ ಇದ್ರೆ… ತಾಕತ್ತಿದ್ರೆ… ಧಮ್ಮಿದ್ರೆ ಬಿಜೆಪಿಯನ್ನು ತಡೆಯಿರಿ ಎಂದು ಕೂಗುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ, ಧಮ್ಮಿದ್ರೆ ಕೆಪಿ ಎಸ್ ಸಿ, ಪಿಎಸ್ ಐ, ಕೆಪಿಟಿಎಲ್ ಪರೀಕ್ಷೆಗಳನ್ನು ಬರೆದ 20 ಲಕ್ಷ ನಿರುದ್ಯೋಗಿ ಯುವಕರ ಬಳಿ ಹೋಗಿ ನಿಮ್ಮ ಶಾಸಕರು 15 ಲಕ್ಷ ಹಣ ಪಡೆದಿದ್ದು ಯಾಕೆ? ಸರ್ಕಾರ ಯಾಕೆ ಎಲ್ಲಾ ಹುದ್ದೆಗಳನ್ನು ಮಾರಿಕೊಂಡಿದೆ. ಪ್ರತಿ ಇಲಾಖೆಯಲ್ಲಿಯೂ ಲಂಚಾವತಾರ ಯಾಕೆ ನಡೆದಿದೆ ಎಂದು ಹೇಳಿ ನೋಡೋಣ… ಎರಡು ಮೂರು ವರ್ಷಗಳಾದರೂ ಇವರ ಯೋಗ್ಯತೆಗೆ ಒಬ್ಬನೇ ಒಬ್ಬ ವ್ಯಕ್ತಿಗೆ ನೌಕರಿ ಕೊಡಿಸಲು ಸಾಧ್ಯವಾಗಿಲ್ಲ. ಇಷ್ಟಾಗ್ಯೂ ತಾಕತ್ತು, ಧಮ್ಮು ಇದನ್ನೆಲ್ಲ ಮಾತನಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. – Live via https://t.co/1a7h5UXpnT https://t.co/ug0A2qUvlf
— Karnataka Congress (@INCKarnataka) September 12, 2022
ಆಡಿಯೋ ಬೆನ್ನಲ್ಲೇ ಬಿಜೆಪಿ ಶಾಸಕರ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್
https://pragati.taskdun.com/politics/psi-scamemla-basavaraj-dadesuguruvideo-relaesepriyank-kharge/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ