Latest

ಉತ್ತರ ಕನ್ನಡಕ್ಕೆ ದೊಡ್ಡ ಆಘಾತ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರಾಕರಿಸಿದ ಆರ್ಥಿಕ ಇಲಾಖೆ: ಜನರಿಗೆ ತೀವ್ರ ನಿರಾಸೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡದ ಕಾರಣ ಜಿಲ್ಲೆಯ ಜನರಲ್ಲಿ ತೀವ್ರ ಅಸಮಾಧಾನ ಮೂಡುವಂತಾಗಿದೆ.
  ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗಳ ಕೊರತೆಯಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜನ ಪರದಾಡುವಂತಾಗಿದೆ. ರಸ್ತೆ ಅಪಘಾತಗಳೂ ಸೇರಿದಂತೆ ವಿವಿಧ ಅವಘಡಗಳಾದ ಸಂದರ್ಭದಲ್ಲಿ ದೂರದ ಮಂಗಳೂರು, ಹುಬ್ಬಳ್ಳಿ, ಇತ್ತ ಗೋವಾ ರಾಜ್ಯದ ಆಸ್ಪತ್ರೆಗಳನ್ನು ಉತ್ತರ ಕನ್ನಡದ ಜನ ಅವಲಂಭಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕಳೆದ 3-4 ವರ್ಷಗಳಿಂದ ಉತ್ತರ ಕನ್ನಡದ ಜನ ಆಸ್ಪತ್ರೆಗಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಶಿರೂರು ಟೋಲ್ ಗೇಟ್ ಬಳಿ ನಡೆದ ಅಪಘಾತದ ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ತೀವ್ರವಾಗಿದೆ.
  ಆದರೆ ವಿಧಾನ ಸಭೆ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಆರೋಗ್ಯ ಇಲಾಖೆ, ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದೆ.
  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗ, ವೈದ್ಯರು ಸಿಬ್ಬಂದಿ ನೇಮಕ, ಸಲಕರಣೆಗಳು, ಕಟ್ಟಡ ಮೊದಲಾದ ಖರ್ಚು ವೆಚ್ಚಗಳುಳ್ಳ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಲಾಗಿದೆ.
   ಇದರಿಂದ ಕಳೆದ ಹಲವಾರು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಉತ್ತರ ಕನ್ನಡದ ಜನತೆ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಅಲ್ಲದೇ ಜಿಲ್ಲೆಯ ಶಾಸಕರಿಂದಲೂ ಅಸಮಾಧಾನ ವ್ಯಕ್ತವಾಗಿದೆ.
ಆರೋಗ್ಯ ಸಚಿವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಅಭಿಯಾನವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದರು.
ಮುಂದಿನ ದಿನಗಳಲ್ಲಿ ಮತ್ತೆ ಅಭಿಯಾನ ಬುಗಿಲೇಳುವ ಸಾಧ್ಯತೆ ಇದೆ.

 

https://pragati.taskdun.com/latest/pragativahinis-support-for-uttara-kannadas-campaign-a-trending-twitter-hashtag/

https://pragati.taskdun.com/politics/uttara-kannadamultispeciality-hospitaltrauma-care-centre/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button