ಇತಿಹಾಸ ತಿರುಚಿ ಜಾಹೀರಾತು ನೀಡುತ್ತಿದ್ದಾರೆ; ಜನರು ಮುಕ್ತವಾಗಿ ಮಾತನಾಡಲು ಭಯಪಡುವ ಸ್ಥಿತಿಯಿದೆ; ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ; ಮೈಸೂರು: ಭಾರತ ಐಕ್ಯತಾ ಯಾತ್ರೆ ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಎಲ್ಲ ಜನರ ಕಾರ್ಯಕ್ರಮ. ಈ ಶ್ರಮ ಯಾಕೆ ಎಂಬ ಚರ್ಚೆ ಆಗುತ್ತಿದೆ. ಈ ಯಾತ್ರೆ ಸಂದರ್ಭದಲ್ಲಿ ದೂರ ಆಗುತ್ತಿರುವ ಮನಸ್ಸುಗಳನ್ನು ಜೋಡಿಸುವ ಪ್ರಯತ್ನ ಮಾಡಲಾಗುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆಗೆ ಪರಿಹಾರ ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದು, ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ 40% ಕಮಿಷನ್ ವಿಚಾರವನ್ನು ಅವರ ಮಂತ್ರಿಗಳು, ಶಾಸಕರು, ಗುತ್ತಿಗೆದಾರರ ಸಂಘದವರು ಹಾಗೂ ಮಾಧ್ಯಮಗಳು ಮಾಡಿರುವ ವರದಿಗಳನ್ನು ನಾವು ಜನರ ಮುಂದೆ ಇಡುತ್ತಿದ್ದೇವೆ. ಇನ್ನು ದಿನನಿತ್ಯ ಜೀವನದಲ್ಲಿ ಜನ ಬೆಲೆ ಏರಿಕೆ ಸಮಸ್ಯೆ ಅನುಭವಿಸುತ್ತಿದ್ದು, ರೈತರು ಕೂಡ ಕಂಗಾಲಾಗಿದ್ದಾರೆ. ರೈತರ ಆದಾಯ ಡಬಲ್ ಮಾಡುವುದಾಗಿ ತಿಳಿಸಿದ್ದ ಸರ್ಕಾರ ಅವರ ಆದಾಯ ಕುಸಿಯುವಂತೆ ಮಾಡಿ ವೆಚ್ಚ ಹೆಚ್ಚಾಗುವಂತೆ ಮಾಡಿದ್ದಾರೆ. ಒಂದೆಡೆ ಭ್ರಷ್ಟಾಚಾರ, ಬೆಲೆ ಏರಿಕೆ, ಮತ್ತೊಂದೆಡೆ ಅಶಾಂತಿ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು..
ಜನರು ಮುಕ್ತವಾಗಿ ಮಾತನಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿ, ಪರಸ್ಪರ ದ್ವೇಷ, ಅಸೂಯೆ ತಾಂಡವವಾಡುತ್ತಿದೆ. ಈ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಪತ್ರಿಕೆಗಳಲ್ಲಿ ಇತಿಹಾಸ ತಿರುಚಿ ಜಾಹೀರಾತು ನೀಡುತ್ತಿದ್ದಾರೆ. ಈ ಸಮಯದಲ್ಲಿ ಪಾಕಿಸ್ತಾನ, ಜಿನ್ನಾ, ಸಾರ್ವಕರ್ ವಿಚಾರವಾಗಿ ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ನಮ್ಮ ಯಶಸ್ಸು ಸಹಿಸಲಾಗದೇ ಬಹಳ ದೊಡ್ಡ ಸುಳ್ಳಿನ ಜಾಹೀರಾತು ಪ್ರಕಟಿಸಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ, ಬಗ್ಗಲ್ಲ, ಜಗ್ಗಲ್ಲ. ಜನರಿಗೆ ನಮ್ಮ ಆಚಾರ ವಿಚಾರ ತಿಳಿಸಿ, ಅವರ ನೋವಿನ ಜತೆ ನಾವು ಇರುತ್ತೇವೆ. ಬಿಜೆಪಿಯವರು ಏನೇ ಅಡ್ಡಿಪಡಿಸಲು ಪ್ರಯತ್ನಿಸಿದರೂ ಕಾಂಗ್ರೆಸ್ ಈ ದೇಶದ ಪರವಾಗಿ ನಿಲ್ಲಲಿದೆ, ಅವರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದರು.
ಭಾರತ ಜೋಡೋ ಯಾತ್ರೆ ಮಾಡಲಿ ಎಂಬ ಬಿಜೆಪಿ ನಾಯಕರ ಲೇವಡಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರಿಗೆ ಈ ಯಾತ್ರೆ ಯಶಸ್ಸು ತಡೆಯಲು ಆಗುತ್ತಿಲ್ಲ. ಈ ಯಾತ್ರೆ ಯಶಸ್ಸಿಗೆ ನಿಮ್ಮ ಕಣ್ಣು ಕ್ಯಾಮೆರಾಗಳೇ ಸಾಕ್ಷಿ. ನಮ್ಮ ಹುಡುಗ ಪೇಸಿಎಂ ಎಂಬ ಟೀ ಶರ್ಟ್ ಧರಿಸಿದ್ದ. ಅವನ್ನು ಪೊಲೀಸರು ಹಿಡಿದು ಬಡಿಯುತ್ತಿದ್ದಾರೆ. ನಾಳೆ ನಾನು, ಸಿದ್ದರಾಮಯ್ಯ ಅವರು ಎಲ್ಲರೂ ಹಾಕಿಕೊಳ್ಳುತ್ತೇವೆ. ನನ್ನ ಹಾಗೂ ಸಿದ್ದರಾಮಯ್ಯನವರ ಬಗ್ಗೆಯೂ ಬಿಜೆಪಿಯವರು ಹಾಕಿದ್ದರು ಆಗ ಅವರನ್ನು ಪೊಲೀಸರು ಯಾಕೆ ಬಂಧಿಸಲಿಲ್ಲ? ಹೊಡೆಯಲಿಲ್ಲ? ಅವರಿಗೊಂದು ಕಾನೂನು ನಮಗೊಂದು ಕಾನೂನಾ? ಇದು ಪ್ರಜಾಪ್ರಭುತ್ವವ್ಯವಸ್ಥೆ. ನನ್ನನ್ನೇ ಹೆದರಿಸಲು ಪ್ರಯತ್ನಿಸುತ್ತಿದ್ದು, ಇನ್ನು ಜನ ಸಾಮಾನ್ಯರನ್ನು ಹೆದರಿಸುವುದಿಲ್ಲವೇ? ನಮ್ಮ ವಿರುದ್ಧವೂ ಪೇಸಿಎಂ ಎಂದು ಹಾಕಿದ್ದರು’ ಎಂದು ಪ್ರಶ್ನಿಸಿದರು.
ಸಾಹಿತಿ ಬರಹಗಾರರು ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ಹೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಬ್ಬ ಯುವಕ ನನ್ನನ್ನು ಭೇಟಿ ಮಾಡಿ ಆತ ಬರೆದ ಲೇಖನಕ್ಕೆ ಅವನನ್ನು ಬಂಧಿಸಿ ಅವನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ’ ಎಂದರು.
ಭಾರತ್ ಜೋಡೋ ಯಾತ್ರೆ; ಪೇಸಿಎಂ ಟಿ ಶರ್ಟ್ ಧರಿಸಿದ್ದ ಯುವಕನ್ನು ಥಳಿಸಿ ಟಿ ಶರ್ಟ್ ಬಿಚ್ಚಿಸಿದ ಪೊಲೀಸರು
https://pragati.taskdun.com/politics/paycmt-shirtbharath-jodo-yatrecongress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ