Kannada NewsKarnataka NewsLatest

ಸವದತ್ತಿಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಉಗರಗೋಳ(ತಾ.ಸವದತ್ತಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಒಂಭತ್ತು ದಿನಗಳ ಕಾಲ ಆಚರಿಸಲಾಗುವ ನವರಾತ್ರಿ ಉತ್ಶವಕ್ಕೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿತು.

ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸರಳವಾಗಿ ನಡೆದ ಘಟಸ್ಥಾಪನೆ ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಪತಿ ಹಾಗೂ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಮಾಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದೀಪಕ್ಕೆ ಎಣ್ಣೆ ಹಾಕುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

Home add -Advt

ಆನಂದ ಮಾಮನಿ ಮಾತನಾಡಿ, ವಿಶ್ವವಿಖ್ಯಾತ ಮೈಸೂರು ದಸರಾ ಸೇರಿ ಎಲ್ಲ ಉತ್ಸವಗಳನ್ನು ಸರ್ಕಾರದ ವತಿಯಿಂದ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಪವಿತ್ರ ಸ್ಥಳ ಯಲ್ಲಮ್ಮನ ಸನ್ನಿಧಿಯಲ್ಲೂ ನವರಾತ್ರಿ ಉತ್ಸವ ಸರಳವಾಗಿ ನಡೆಯಲಿದ್ದು, ಭಕ್ತರು ಇದಕ್ಕೆ ಸಹಕಾರ ನೀಡಬೇಕು ಎಂದರು. ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯು ಇಡೀ ದೇಶವನ್ನು ಶೀಘ್ರವೇ ಕರೊನಾ ಸಂಕಷ್ಟದಿಂದ ದೂರಗೊಳಿಸಲಿ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಕರೊನಾ ಹಾವಳಿ ತಗ್ಗಿದ ನಂತರ ಅಭಿವೃದ್ಧಿ ಕೆಲಸ ಚುರುಕುಗೊಳಿಸುತ್ತೇವೆ ಎಂದು ತಿಳಿಸಿದರು.

ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಈ ಬಾರಿ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಸರ್ಕಾರಿ ಮಾರ್ಗಸೂಚಿ ಅನುಸಾರ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಸಮ್ಮುಖದಲ್ಲಿ ಘಟಸ್ಥಾಪನೆ ಕಾರ್ಯಕ್ರಮ ನೆರವೇರಿತು. ಇಡೀ ದೇಶದ ಜನತೆಯ ಪರವಾಗಿ ಇಲ್ಲಿ ನೆರೆದಿದ್ದ ಗಣ್ಯರೇ ದೀಪಕ್ಕೆ ಎಣ್ಣೆ ಹಾಕಿ ಸರ್ವರ ಬಾಳು ದೀಪದಂತೆ ಬೆಳಗುತ್ತಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿ “ಎಲ್ಲರ ಅಮ್ಮ” ಯಲ್ಲಮ್ಮನಿಗೆ ವಿಶೇಷ ಪೂಜೆ, ಅಲಂಕಾರ ನೆರವೇರಿದವು.

ಗಂಗಮ್ಮತಾಯಿ ಮಾಮನಿ, ಸವದತ್ತಿ ತಹಸೀಲ್ದಾರ್ ಪ್ರಶಾಂತ ಪಾಟೀಲ, ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಾಳಗೆ, ಸಿ.ಎಸ್.ಪಟ್ಟಣಶೆಟ್ಟಿ, ಎಂ.ವಿ.ಮುಳ್ಳೂರ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ವರ್ಷಾ ಗಾಂವಕರ, ಅರ್ಚಕ ವರ್ಗ ಹಾಗೂ ಸಿಬ್ಬಂದಿ ಹಾಜರಿದ್ದರು.

Related Articles

Back to top button