Kannada NewsLatestNational

*ಏರ್ ಪೋರ್ಟ್ ನಲ್ಲಿ ಭದ್ರತಾ ತಪಾಸಣೆ ವೇಳೆ ಅವಘಡ: ಪ್ರಯಾಣಿಕನ ಬಳಿ ಇದ್ದ ಗನ್ ಫೈರ್*

ಪ್ರಗತಿವಾಹಿನಿ ಸುದ್ದಿ: ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರ ಬಳಿ ಇದ್ದ ಲೈಸೆನ್ಸ್ ಗನ್ ಏಕಾಅಏಕಿ ಫೈರ್ ಆಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ (IX-1810) ಪ್ರಯಾಣಿಕರೊಬ್ಬರು ತಂದಿದ್ದ ಪಿಸ್ತೂಲು ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಸಿಡಿದಿದೆ.

ಕಮಲೇಶ್ ರಾಯ್ ಎಂಬುವವರ ಪಿಸ್ತೂಲ್ ಇದಾಗಿದ್ದು, ಲೈನೆನ್ಸ್ ಗನ್ ಆಗಿದೆ. ಕಮಲೇಶ್ ರಾಯ್ ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ ತಮ್ಮ ಬಳಿ ಲೈಸೆನ್ಸ್ಡ್ ಗನ್ ಇರುವುದಾಗಿ ಹೇಳಿ ಭದ್ರತಾ ಸಿಬ್ಬಂದಿಗೆ ಪರಿಶೀಲನೆಗೆ ನೀಡಿದ್ದರು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ಗನ್ ಏಕಾಏಕಿ ಫೈರ್ ಆಗಿದೆ. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಇಂದು ಬೆಳಗ್ಗೆ ಸುಮಾರು 9:30 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಒಬ್ಬ ಮಹಿಳಾ ಸಿಬ್ಬಂದಿಯ ಕಾಲಿಗೆ ಮತ್ತು ಮತ್ತೊಬ್ಬ ಸಿಬ್ಬಂದಿಯ ಕೈಬೆರಳಿಗೆ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಹತ್ತಿರದ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಇಬ್ಬರೂ ಪಾರಾಗಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಆಕಸ್ಮಿಕ ಘಟನೆಯಾಗಿದ್ದು, ಭದ್ರತಾ ಪ್ರೋಟೋಕಾಲ್‌ಗಳ ಅನುಸಾರ ಬಂದೂಕು ಹಸ್ತಾಂತರದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button