*ಬೆಳಗಾವಿ ಪೊಲೀಸರಿಂದ ಮಟಕಾ ಅಡ್ಡೆಗಳ ಮೇಲೆ ದಾಳಿ*: *ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟಕಾ ಅಡ್ಡೆಗಳ ಮೇಲೆ ಪೊಲೀಸರು ಪ್ರತ್ಯೇಕ ಎರಡು ಕಡೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹3,590 ನಗದು ಹಾಗೂ ಮಟಕಾ ಆಟಕ್ಕೆ ಸಂಬಂಧಿಸಿದ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.
ನವೆಂಬರ್ 24ರಂದು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಪಿ.ಜಿ. ಗಂಡವ್ವಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಮೊದಲ ದಾಳಿಯನ್ನು ರವಿವಾರ ಪೇಟೆಯ ಸಿದ್ದರಾಮೇಶ್ವರ ಆಗೋ ಸೆಂಟರ್ ಎದುರು ನಡೆಸಲಾಗಿದ್ದು, ಸಾರ್ವಜನಿಕರಿಂದ ಅಂಕಿ-ಸಂಖ್ಯೆಗಳ ಮೇಲೆ ಹಣ ಕಟ್ಟಿಸಿಕೊಂಡು ಮಟಕಾ ಆಟ ಆಡಿಸುತ್ತಿದ್ದ ಕಾಮತ ಗಲ್ಲಿಯ ಪಂಕಜ ಮೋಹನ ಜಾಧವ (34) ಎಂಬಾತನನ್ನು ಬಂಧಿಸಲಾಯಿತು. ಆತನಿಂದ ₹1,250 ನಗದು ಹಾಗೂ ಓಸಿ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 259/2026ರ ಅಡಿಯಲ್ಲಿ ಕೆ.ಪಿ. ಕಾಯ್ದೆ ಕಲಂ 78(3)ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ದಾಳಿಯನ್ನು ಕೊತ್ವಾಲ್ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ನಡೆಸಲಾಗಿದ್ದು, ಮಟಕಾ ಆಟದಲ್ಲಿ ತೊಡಗಿದ್ದ ಖಂಜರ ಗಲ್ಲಿಯ ಮುದ್ದಸರ್ ಮೆಹಬೂಬ ದೇಸಾಯಿ (34) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ₹2,340 ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 261/2026ರ ಅಡಿಯಲ್ಲಿ ಕೆ.ಪಿ. ಕಾಯ್ದೆ ಕಲಂ 78(3)ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಮಟಕಾ ಅಡ್ಡೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.



