*ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ಯಾಂಕರ್*: *ಕ್ಷಣಾರ್ಧದಲ್ಲಿ 31 ಮಂದಿ ಸಾವು, 27 ವಾಹನಗಳು ಭಸ್ಮ*

ಪ್ರಗತಿವಾಹಿನಿ ಸುದ್ದಿ: ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳು ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ. ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಭೀಕರ ಅಗ್ನಿ ದುರಂತ ಸಂಭವಿಸಿದೆ. ಬೆಂಕಿಯ ತೀವ್ರತೆ ರಸ್ತೆಯಲ್ಲಿದ್ದ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೂ ವ್ಯಾಪಿಸಿದ್ದು, ಈ ಭೀಕರ ಘಟನೆಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ.
ಈಜಿಪ್ಟ್ನ ರಾಜಧಾನಿ ಕೈರೋ ಸಮೀಪದ ಪ್ರಮುಖ ರಿಂಗ್ ರೋಡ್ನಲ್ಲಿ ಈ ದುರಂತ ಸಂಭವಿಸಿದೆ. ಗಿಜಾ ಪ್ರಾಂತ್ಯದ ಅಲ್-ವಾರಕ್ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತಕ್ಷಣವೇ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಸುತ್ತಮುತ್ತಲಿನ ವಾಹನಗಳಿಗೆ ಹರಡಿದೆ.
ಟ್ಯಾಂಕರ್ನಿಂದ ಹರಡಿದ ಬೆಂಕಿಗೆ ಕಾರುಗಳು, ಮಿನಿ ಬಸ್ಗಳು ಮತ್ತು ಮೋಟಾರ್ಸೈಕಲ್ಗಳು ಆಹುತಿಯಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 27 ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ವಾಹನಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ.
ಘಟನಾ ಸ್ಥಳಕ್ಕೆ 39 ಆಂಬ್ಯುಲೆನ್ಸ್ಗಳನ್ನು ರವಾನಿಸಲಾಗಿದ್ದು, ಗಾಯಗೊಂಡ 21 ಮಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರಂತದ ತೀವ್ರತೆಯಿಂದಾಗಿ ಕೆಲವು ಮೃತದೇಹಗಳನ್ನು ಗುರುತಿಸುವುದೂ ಕಷ್ಟವಾಗಿದೆ.
ಹೀಗಾಗಿ ಮೃತರ ಗುರುತು ಪತ್ತೆ ಮಾಡಲು ಡಿಎನ್ಎ ಪರೀಕ್ಷೆ ನಡೆಸುವಂತೆ ಸಾರ್ವಜನಿಕ ಅಭಿಯೋಜಕರ ಕಚೇರಿ ಸೂಚಿಸಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇನ್ನು ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಈಜಿಪ್ಟ್ನ ಪೆಟ್ರೋಲಿಯಂ ಸಚಿವಾಲಯಕ್ಕೆ ಸೇರಿದ್ದಲ್ಲ. ಇಂಧನ ಸಾಗಣೆಗಾಗಿ ನೇಮಕಗೊಂಡಿದ್ದ ಖಾಸಗಿ ಗುತ್ತಿಗೆದಾರರ ವಾಹನವಾಗಿದೆ ಎಂದು ಪೆಟ್ರೋಲಿಯಂ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ಯಾಂಕರ್ ನಿಯಂತ್ರಣ ತಪ್ಪಲು ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಈಜಿಪ್ಟ್ನಲ್ಲಿ ರಸ್ತೆ ಅಪಘಾತಗಳು ಗಂಭೀರ ಸಮಸ್ಯೆಯಾಗಿವೆ. ವೇಗದ ಚಾಲನೆ, ರಸ್ತೆಗಳ ಕಳಪೆ ನಿರ್ವಹಣೆ ಮತ್ತು ಸಂಚಾರ ನಿಯಮಗಳ ಸರಿಯಾದ ಅನುಷ್ಠಾನ ಇಲ್ಲದಿರುವುದು ಅಪಘಾತಗಳಿಗೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. 2025ರಲ್ಲಿ ಈಜಿಪ್ಟ್ನಲ್ಲಿ ರಸ್ತೆ ಅಪಘಾತಗಳಿಂದ 5,829 ಮಂದಿ ಮೃತಪಟ್ಟಿದ್ದಾರೆ.



