Kannada NewsKarnataka NewsLatest

*ಕಾಂಗ್ರೆಸ್‌ನಲ್ಲಿ ಕಾಡಾನೆ ಸ್ಥಳಾಂತರದ ಕಿಚ್ಚು*: *ಸಚಿವ ರಾಮಲಿಂಗಾರೆಡ್ಡಿ ಗರಂ, ಶಾಸಕರಿಗೆ ಖಡಕ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ವಿಚಾರ ಈಗ ಕಾಂಗ್ರೆಸ್‌ನಲ್ಲೇ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಚಿಕ್ಕಮಗಳೂರಿನ ಕಾಂಗ್ರೆಸ್ ಶಾಸಕರು ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ಶಾಸಕರ ನಡೆಯಿಂದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದಾರೆ. ಸ್ವಪಕ್ಷದ ಶಾಸಕರ ಹೇಳಿಕೆಗಳಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿರುವ ಅವರು, ಅರಣ್ಯ ಖಾತೆಯನ್ನೇ ಬಿಟ್ಟುಕೊಡಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಪ್ರಸ್ತಾಪಕ್ಕೆ ಚಿಕ್ಕಮಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ ಮತ್ತು ಎಚ್.ಡಿ. ತಮ್ಮಯ್ಯ ಈ ವಿಚಾರವಾಗಿ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಧ್ಯಪ್ರವೇಶಿಸಿ ಶಾಸಕರನ್ನು ತಡೆದಿದ್ದಾರೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ಶಾಸಕರ ಹೇಳಿಕೆಗಳಿಂದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶಗೊಂಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಎಚ್.ಡಿ. ತಮ್ಮಯ್ಯ ಹೇಳಿರುವುದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದರು.

“ನಮ್ಮದು ಆನೇಕಲ್. ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶವಿದೆ. ನಮ್ಮ ತೋಟಕ್ಕೂ ಕಾಡಾನೆಗಳು ಬರುತ್ತವೆ. ಅರಣ್ಯದಲ್ಲಿ ಹುಟ್ಟಿ ಬೆಳೆದು ಬಂದವರೇ ಮಂತ್ರಿಯಾದರೆ ಅಭ್ಯಂತರವಿಲ್ಲ. ನಾನು ಅರಣ್ಯ ಇಲಾಖೆ ಬಿಟ್ಟುಕೊಡುತ್ತೇನೆ. ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ” ಎಂದು ತಿರುಗೇಟು ನೀಡಿದರು.

ಅರಣ್ಯ ಸಚಿವನಾಗಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಈಗ ನಡೆಯುತ್ತಿರುವ ಸಾವು-ನೋವುಗಳನ್ನು ಕಡಿಮೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು. ಅರಣ್ಯದಲ್ಲಿ ಹುಟ್ಟಿ ಬೆಳೆದವರು ಯಾರಾದರೂ ಇದ್ದರೆ ಅವರಿಗೆ ಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂಬ ಸವಾಲನ್ನೂ ಹಾಕಿದರು.

ಶಾಸಕರು ತಮ್ಮನ್ನು ಸಂಪರ್ಕಿಸುವ ಬದಲು ನೇರವಾಗಿ ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರನ್ನು ಭೇಟಿಯಾಗಿರುವುದಕ್ಕೂ ಸಚಿವರು ಬೇಸರ ವ್ಯಕ್ತಪಡಿಸಿದರು. “ಶಾಸಕರು ನನಗಿಂತ ಮುಂದೆ ಹೋಗಿ ಸಿಎಂ, ಸ್ಪೀಕರ್ ಭೇಟಿಯಾಗಿದ್ದಾರೆ. ಚಿಕ್ಕಮಗಳೂರು ಭಾಗದ ಶಾಸಕರು ಅವರನ್ನೇ ಕೇಳಲಿ. ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ನನಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವೇ?” ಎಂದು ಪ್ರಶ್ನಿಸಿದರು.

ಯಾವ ಅಧಿಕಾರಿಯೂ ತಮ್ಮನ್ನು ದಾರಿ ತಪ್ಪಿಸಿಲ್ಲ. ಈಗ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ತಾನೇ ತೆಗೆದುಕೊಂಡಿದ್ದೇನೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಶ್ನೆಯೇ ಇಲ್ಲ. ನಾನು ಯಾವಾಗಲಾದರೂ ಭಯಗೊಂಡಿರುವುದನ್ನು ನೋಡಿದ್ದೀರಾ ಎಂದು ಪ್ರಶ್ನಿಸುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಕಾಡಾನೆ ಸ್ಥಳಾಂತರದ ಕುರಿತು ನವೆಂಬರ್ 30ರಂದು ಮಹತ್ವದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ಕರೆದಿದ್ದು, ಅದರ ತೀರ್ಮಾನದ ಬಳಿಕವೇ ಆನೆಗಳ ಸ್ಥಳಾಂತರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಬೇಲೂರು, ಸಕಲೇಶಪುರ ಮತ್ತು ಶೃಂಗೇರಿ ಭಾಗದ ಜನರಿಗೂ ತೊಂದರೆಯಾಗಬಾರದು. ಅರಣ್ಯ ಇಲಾಖೆಗೆ ಕಾಡುಪ್ರಾಣಿಗಳ ರಕ್ಷಣೆ ಎಷ್ಟು ಮುಖ್ಯವೋ, ಜನರ ಜೀವನವೂ ಅಷ್ಟೇ ಮುಖ್ಯ. ಎರಡನ್ನೂ ಗಮನದಲ್ಲಿಟ್ಟುಕೊಂಡು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಾಡಾನೆಗಳು ಈಗ ಎಲ್ಲಿವೆಯೋ ಅಲ್ಲಿಯೇ ಇವೆ. ಅವುಗಳನ್ನು ಸ್ಥಳಾಂತರಿಸುವ ವಿಚಾರ ಮುಖ್ಯಮಂತ್ರಿ ಗಮನಕ್ಕೂ ಹೋಗಿದೆ. ಬೇಲೂರಿನಿಂದ ಚಿಕ್ಕಮಗಳೂರಿಗೆ ಸ್ಥಳಾಂತರಿಸುವುದಕ್ಕೇ ಶಾಸಕರು ವಿರೋಧಿಸುತ್ತಿದ್ದಾರೆ. ಇನ್ನು ಬಂಡೀಪುರಕ್ಕೆ ಸ್ಥಳಾಂತರಿಸಿದರೆ ಸುಮ್ಮನಿರುತ್ತಾರಾ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಬೆಲೂರು ಆನೆ, ಚಿಕ್ಕಮಗಳೂರು ಆನೆ ಎಂದು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿಲ್ಲ. ಕಾಡಿರುವ ಎಲ್ಲ ಪ್ರದೇಶಗಳಲ್ಲೂ ಆನೆಗಳು ಸಂಚರಿಸುತ್ತವೆ. ಸದ್ಯ ಆನೆಗಳು ಇರುವ ಪ್ರದೇಶಗಳಲ್ಲಿ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂದರು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ನೀಡಬೇಕಾದ ಸೂಚನೆಗಳನ್ನು ಈಗಾಗಲೇ ನೀಡಿದ್ದೇನೆ ಎಂದೂ ತಿಳಿಸಿದರು.

ಒಟ್ಟಿನಲ್ಲಿ ಕಾಡಾನೆ ಸ್ಥಳಾಂತರದ ವಿಚಾರ ಕಾಂಗ್ರೆಸ್‌ನೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು, ನವೆಂಬರ್ 30ರ ಸಭೆಯ ತೀರ್ಮಾನದ ಮೇಲೆ ಎಲ್ಲರ ಗಮನ ನೆಟ್ಟಿದೆ. ಕಾಡುಪ್ರಾಣಿಗಳ ರಕ್ಷಣೆ ಮತ್ತು ಜನರ ಸುರಕ್ಷತೆಯ ನಡುವೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Related Articles

Back to top button