Karnataka NewsLatestPolitics

*ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಕೈ ಶಾಸಕರು*

ಪ್ರಗತಿವಾಹಿನಿ ಸುದ್ದಿ: ಕಾಡಾನೆ ಸ್ಥಳಾಂತರ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದ್ದು ರಾಜೀನಾಮೆಗೆ ಮುಂದಾಗಿದ್ದ ಕಾಂಗ್ರೆಸ್ ಶಾಸಕರು, ಸರ್ಕಾರದ ಭರವಸೆ ಬೆನ್ನಲ್ಲೇ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಹಾಸನದಿಂದ ಮೂಡಿಗೆರೆಗೆ ಕಾಡಾನೆಗಳ ಸ್ಥಳಾಂತರ ವಿರೋಧಿಸಿ ಶಾಸಕರಾದ ಎಚ್.ಡಿ. ತಮ್ಮಯ್ಯ ಮತ್ತು ನಯನಾ ಮೋಟಮ್ಮ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಕಾರ್ಯಾಚರಣೆ ನಿಲ್ಲಿಸುವ ಸರ್ಕಾರದ ಭರವಸೆ ಬೆನ್ನಲ್ಲೇ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಮೂಡಿಗೆರೆ ಪ್ರದೇಶಕ್ಕೆ ಆನೆಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರದಿಂದ ಜನರ ಜೀವಕ್ಕೆ ಅಪಾಯವಿದೆ, ತೋಟಗಳು ಹಾಳಾಗುತ್ತಿವೆ ಮತ್ತು ಜನರು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಮಗಳೂರು ಭಾಗದ ಶಾಸಕರಾದ ಎಚ್.ಡಿ. ತಮ್ಮಯ್ಯ ಮತ್ತು ನಯನಾ ಮೋಟಮ್ಮ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಸ್ಪೀಕರ್ ಜಿ.ಎಸ್. ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆಯನ್ನೂ ನಡೆಸಿದ್ದರು. ಆದರೆ ರಾಜ್ಯ ಸರ್ಕಾರ ಕಾರ್ಯಾಚರಣೆ ನಿಲ್ಲಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಆನೆಗಳ ಸ್ಥಳಾಂತರ ವಿರೋಧಿಸಿ ಮೂಡಿಗೆರೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೂಡಿಗೆರೆ ಅರಣ್ಯ ಇಲಾಖೆಗೆ ಮುತ್ತಿಗೆ ಯತ್ನವೂ ನಡೆದಿದ್ದು, ಸ್ಥಳಕ್ಕೆ DFO, CCF ಬರುವಂತೆ ಸಾರ್ವಜನಿಕರು ಪಟ್ಟು ಹಿಡಿದ ಪ್ರಸಂಗೂ ನಡೆದಿದೆ. ಸ್ಥಳಕ್ಕೆ DFO, CCF ಬರುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಅರಣ್ಯ ಸಚಿವ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಡಿದ್ದಿದಿರುವ ಚಿಕ್ಕಮಗಳೂರಿಗರು ಮೂಡಿಗೆರೆ ಪಟ್ಟಣ ಬಂದ್​​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಅರಣ್ಯ ಇಲಾಖೆಯ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮೂಡಿಗೆರೆ ಬಸ್ ನಿಲ್ದಾಣದ ಬಳಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ಕೂಡ ನಡೆಸಲಾಗಿದ್ದು, ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಶಿವಲಿಂಗೇಗೌಡರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ 38 ಆನೆಗಳನ್ನು ಮೂಡಿಗೆರೆ ಅರಣ್ಯದತ್ತ ಓಡಿಸಿದರೂ ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಮಾತ್ರ ನಿಂತಿಲ್ಲ. ಕೊಗೋಡು ಬಳಿ 7 ಎಕರೆ ಭತ್ತದ ಬೆಳೆಯನ್ನು ಕಾಡಾನೆ ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.

Related Articles

Back to top button