Kannada NewsKarnataka NewsLatestPolitics

*ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸ್‌ಗೆ ಹೊಸ ತಿರುವು*: *ಕೃಪಾ ಆಳ್ವಾ ಮೊಬೈಲ್‌ನಲ್ಲಿ ಏನಿದೆ?*

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಈಗ ಮತ್ತಷ್ಟು ಚುರುಕುಗೊಂಡಿದೆ. ಈವರೆಗೆ ಪೊಲೀಸರಿಗೆ ನೀಡದೆ ಉಳಿಸಿಕೊಂಡಿದ್ದ ಮೊಬೈಲ್ ಕೊನೆಗೂ ತನಿಖಾಧಿಕಾರಿಗಳ ಕೈ ಸೇರಿದೆ. ಮೊಬೈಲ್‌ನಲ್ಲಿ ಕೆಲವು ಫೈಲ್‌ಗಳನ್ನು ಅಳಿಸಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ಮೊರೆ ಹೋಗಿದ್ದಾರೆ. ಮತ್ತೊಂದೆಡೆ, ವಿಡಿಯೋದಲ್ಲಿನ ಧ್ವನಿಯ ಸತ್ಯಾಸತ್ಯತೆ ಪತ್ತೆಹಚ್ಚಲು ಮಹತ್ವದ ಪರೀಕ್ಷೆಗೂ ಸಿದ್ಧತೆ ನಡೆದಿದೆ.

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಸುತ್ತಿರುವ ಸೈಬರ್ ಕ್ರೈಂ ಪೊಲೀಸರು ಕೇಳಿದ್ದ ಮೊಬೈಲ್ ಫೋನ್ ಅನ್ನು ಕೃಪಾ ಆಳ್ವಾ ಕೊನೆಗೂ ತನಿಖಾಧಿಕಾರಿ ಎಸಿಪಿ ರವಿ ಅವರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಮೊಬೈಲ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಟಿಂಗ್ ವಿಡಿಯೋ ಚಿತ್ರೀಕರಣದ ವೇಳೆ ಇದೇ ಮೊಬೈಲ್ ಬಳಕೆಯಾಗಿತ್ತು ಎನ್ನಲಾಗಿದೆ. ಈ ಹಿಂದೆ ವಿಚಾರಣೆಗೆ ಹಾಜರಾದ ಸಂದರ್ಭದಲ್ಲೇ ಮೊಬೈಲ್ ನೀಡುವಂತೆ ಪೊಲೀಸರು ಕೃಪಾ ಆಳ್ವಾಗೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದರೂ ಮೊಬೈಲ್ ಹಸ್ತಾಂತರಿಸಲು ಅವರು ಹಿಂದೇಟು ಹಾಕಿದ್ದರು.

ಇದೀಗ ಮೊಬೈಲ್‌ನಲ್ಲಿದ್ದ ಹಲವು ಫೈಲ್‌ಗಳನ್ನು ಅಳಿಸಲಾಗಿದೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಹೀಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆ. ಅಳಿಸಲಾದ ಫೈಲ್‌ಗಳು ಹಾಗೂ ಇತರ ಡಿಜಿಟಲ್ ಮಾಹಿತಿಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.

ಇದೇ ವೇಳೆ ಕೃಪಾ ಆಳ್ವಾ ಅವರ ಧ್ವನಿ ಮಾದರಿಯನ್ನೂ ಪೊಲೀಸರು ಸಂಗ್ರಹಿಸಿದ್ದಾರೆ. ಸ್ಟಿಂಗ್ ವಿಡಿಯೋದಲ್ಲಿರುವ ಧ್ವನಿಯೊಂದಿಗೆ ಅದನ್ನು ಹೋಲಿಕೆ ಮಾಡಿ ಪರಿಶೀಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಧ್ವನಿ ಮಾದರಿಯನ್ನೂ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ.

2023ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಸ್ಟಿಂಗ್ ವಿಡಿಯೋ 2026ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿತ್ತು. ಈ ವಿಡಿಯೋದಲ್ಲಿ ಕೃಪಾ ಆಳ್ವಾ ಹಾಗೂ ಖಾಸಗಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರು ಕಾಣಿಸಿಕೊಂಡಿದ್ದರು. ಹೀಗಾಗಿ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಇವರಿಬ್ಬರ ಕೈವಾಡವಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಈ ವಿವಾದ ಮತ್ತು ಪಕ್ಷವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೃಪಾ ಆಳ್ವಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತ್ತು. ಆದರೆ, ವಿಚಾರಣೆ ವೇಳೆ ತಾವು ನಿರಪರಾಧಿ ಎಂದು ಹೇಳಿಕೊಂಡಿರುವ ಕೃಪಾ ಆಳ್ವಾ, ಸ್ಟಿಂಗ್ ವಿಡಿಯೋ ವಿಚಾರವಾಗಿ ರಾಕೇಶ್ ಶೆಟ್ಟಿ ತಮ್ಮನ್ನು ಸಂಪರ್ಕಿಸಿದ್ದರು ಎಂದು ಹೇಳಿಕೆ ನೀಡಿದ್ದರು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾರಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿರುವ ಕೃಪಾ ಆಳ್ವಾ ಅವರ ಮೊಬೈಲ್ ಮತ್ತು ಧ್ವನಿ ಮಾದರಿಗಳು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಲಿವೆ. ಈ ಪರೀಕ್ಷೆಯ ವರದಿ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವು ನೀಡುತ್ತದೆಯೇ ಎಂಬ ಕುತೂಹಲ ಮೂಡಿದೆ.

Related Articles

Back to top button