*ಜೂಜು ಅಡ್ಡೆ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸರ ದಾಳಿ: 7 ಜನ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಸ್ಪೀಟ್ ಎಲೆಗಳ ಮೇಲೆ ಹಣ ಪಣಕ್ಕಿಟ್ಟು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿಯನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದು ಬಂಧಿತರದಿಂದ 27,390 ರೂ. ನಗದು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯಳ್ಳೂರ ಕೆರೆ ಸಮೀಪ ನ.23ರಂದು ಈ ದಾಳಿ ನಡೆದಿದೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಲ್.ಎಸ್. ಜೋಡಟ್ಟಿ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಯಳ್ಳೂರ ಗ್ರಾಮದ ಏಳು ಮಂದಿ ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಜೂಜಾಟದಲ್ಲಿ ನಿರತರಾಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಯಳ್ಳೂರದ ದಿನೇಶ ನಾರಾಯಣ ಅನಗೋಳಕರ (33), ಯೋಗೇಶ ಪ್ರಕಾಶ ಕದಂ (24), ಸೂರಜ ಯಲ್ಲಪ್ಪ ಹಂಡೋರಿ (34), ಭರಮಪ್ಪ ಯಲ್ಲಪ್ಪ ಮಂಗಾಯಿ (28), ಆನಂದ ರಾಮಾ ಹಂಡೋರಿ (34), ನಿಖಿಲ ಮಹಾದೇವ ದನ್ನುಗೋಳ (28) ಹಾಗೂ ಸಿದ್ದಾರ್ಥ ಮನೋಹರ ಮುಚ್ಚಂಡಿ (34) ಎಂದು ಗುರುತಿಸಲಾಗಿದೆ.
ಪೊಲೀಸರ ದಾಳಿ ವೇಳೆ ಆರೋಪಿತರಿಂದ ಜೂಜಾಟಕ್ಕೆ ಬಳಸಲಾಗುತ್ತಿದ್ದ 27,390 ರೂ. ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 250/2026 ದಾಖಲಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಯಳ್ಳೂರ ಕೆರೆ ಬಳಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪಿಎಸ್‌ಐ ಎಲ್.ಎಸ್. ಜೋಡಟ್ಟಿ, ಎಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.



