
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಮಧುರೈ ತಿರುಪ್ಪರಂಕುಂದ್ರಂ ಕಾರ್ತಿಕ ದೀಪಂ ವಿವಾದ ಮತ್ತೆ ಭುಗಿಲೆದ್ದಿದೆ. ಕಲ್ಲಿನ ಕಂಬದ ಮೇಲೆ ದೀಪ ಬೆಳಗಿಸುವ ವಿಚಾರ ಈಗ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಿಲ್ಲ ಎಂಬ ಆರೋಪದೊಂದಿಗೆ ಹಿಂದೂ ಕಾರ್ಯಕರ್ತರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗಿದ್ದಾರೆ.
ಕಲ್ಲಿನ ಕಂಬದ ಮೇಲೆಯೇ ಕಾರ್ತಿಕ ದೀಪ ಬೆಳಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಮಧುರೈ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟು 300ಕ್ಕೂ ಅಧಿಕ ಮಂದಿಯ ವಿರುದ್ಧ ಆರು ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅನುಮತಿಯಿಲ್ಲದೆ ಕಾನೂನುಬಾಹಿರವಾಗಿ ಗುಂಪುಗೂಡುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು, ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹಾಗೂ ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ ಆರೋಪಗಳನ್ನು ಪೊಲೀಸರು ಹೊರಿಸಿದ್ದಾರೆ.
ಇದರ ನಡುವೆ ಕಾರ್ತಿಕ ದೀಪಂ ವಿವಾದ ಮತ್ತೊಂದು ಕಾನೂನು ಹೋರಾಟದ ಹಂತಕ್ಕೆ ತಲುಪುತ್ತಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಹಿಂದೂ ಕಾರ್ಯಕರ್ತರು, ಮತ್ತೊಮ್ಮೆ ಸುಪ್ರೀಂ ಕೋರ್ಟ್ ಕದ ತಟ್ಟಲು ಸಿದ್ಧತೆ ನಡೆಸಿದ್ದಾರೆ.
ಪವಿತ್ರವೆಂದು ನಂಬಲಾಗಿರುವ ತಿರುಪ್ಪರಂಕುಂದ್ರಂ ಬೆಟ್ಟದ ಕಲ್ಲಿನ ಕಂಬದ ಮೇಲೆಯೇ ಕಾರ್ತಿಕ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ, ನ್ಯಾಯಾಲಯದ ಸೂಚನೆಯಂತೆ ಕಲ್ಲಿನ ಕಂಬದ ಮೇಲೆ ದೀಪ ಬೆಳಗಿಸದೆ, ಅದೇ ಬೆಟ್ಟದಲ್ಲಿರುವ ಉಚಿಪಿಳ್ಳಯರ್ ಮಂಟಪದಲ್ಲಿ ದೀಪ ಬೆಳಗಿಸಲಾಗಿದೆ ಎಂಬುದು ಹಿಂದೂ ಕಾರ್ಯಕರ್ತರ ಆಕ್ಷೇಪ.
ವಿಜಯ್ ನೇತೃತ್ವದ ಸರ್ಕಾರ ಸಾಂಪ್ರದಾಯಿಕವಲ್ಲದ ಉಚಿಪಿಳ್ಳಯರ್ ಮಂಟಪದಲ್ಲಿ ದೀಪ ಬೆಳಗಿಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ನ್ಯಾಯಾಲಯದ ಸೂಚನೆಯನ್ನು ಪಾಲಿಸದೆ ಬೇರೆ ಸ್ಥಳದಲ್ಲಿ ದೀಪ ಬೆಳಗಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ವಿಚಾರವನ್ನು ಮತ್ತೆ ಸುಪ್ರೀಂ ಕೋರ್ಟ್ ಮುಂದೆ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ.
ಒಂದೆಡೆ ಪ್ರತಿಭಟನಾಕಾರರ ವಿರುದ್ಧ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, ಮತ್ತೊಂದೆಡೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಯ ವಿಚಾರ ಮತ್ತೆ ನ್ಯಾಯಾಂಗದ ಗಮನ ಸೆಳೆಯಲು ಸಿದ್ಧವಾಗಿದೆ. ಹೀಗಾಗಿ ತಿರುಪ್ಪರಂಕುಂದ್ರಂ ಕಾರ್ತಿಕ ದೀಪಂ ವಿವಾದಕ್ಕೆ ಮುಂದಿನ ದಿನಗಳಲ್ಲಿ ಯಾವ ತಿರುವು ಸಿಗಲಿದೆ ಎಂಬ ಕುತೂಹಲ ಮೂಡಿದೆ.




