Kannada NewsKarnataka NewsLatest
ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ತಿಪಂಜರ, ಬುರುಡೆ ಪತ್ತೆ : ಹೆಸ್ಕಾಂ ವಿರುದ್ಧ ಕೊಲೆ ಪ್ರಕರಣ ದಾಖಲು
ಪ್ರಗತಿವಾಹಿನಿ ಸುದ್ದಿ, ಖಾನಾಪುರ : 26 ದಿನಗಳ ಹಿಂದೆ ಮೇವು ತರುವುದಾಗಿ ಮನೆಯಲ್ಲಿ ಹೇಳಿ ಹೊಲಕ್ಕೆ ತೆರಳಿದ್ದ ತಾಲ್ಲೂಕಿನ ಲಕ್ಕೇಬೈಲ ಗ್ರಾಮದ ರಾಮಚಂದ್ರ ಅಂಧಾರೆ (36) ಎಂಬ ವ್ಯಕ್ತಿ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಗುರುವಾರ ಮಹತ್ವದ ತಿರುವು ದೊರೆತಿದೆ.
ನಾಪತ್ತೆಯಾಗಿದ್ದ ವ್ಯಕ್ತಿಯದು ಎನ್ನಲಾದ ಅಸ್ತಿಪಂಜರ ಮತ್ತು ತಲೆಬುರುಡೆ ಗ್ರಾಮದ ಹೊರವಲಯದ ಕೃಷಿ ಭೂಮಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಸ್ಕಾಂ ವಿರುದ್ಧ ರಾಮಚಂದ್ರ ಅವರ ಕೊಲೆ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣದ ಹಿನ್ನೆಲೆ
ರಾಮಚಂದ್ರ ಕಳೆದ ಸೆ.12ರಂದು ಜಾನುವಾರುಗಳಿಗೆ ಮೇವು ತರುವುದಾಗಿ ಮನೆಯವರಿಗೆ ತಿಳಿಸಿ ಹೊಲಕ್ಕೆ ತೆರಳಿದ್ದರು. ಬಹಳ ಹೊತ್ತಾದರೂ ಅವರು ಮನೆಗೆ ಮರಳದ ಕಾರಣ ಅವರಿಗಾಗಿ ಎಲ್ಲೆಡೆ ಹುಡುಕಾಡಿದ ಕುಟುಂಬದವರು ಮರುದಿನ ಖಾನಾಪುರ ಪೊಲೀಸ್ ಠಾಣೆಯಲ್ಲಿ ರಾಮಚಂದ್ರ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿದ್ದರು.
ಘಟನೆ ನಡೆದು ಮೂರು ವಾರಗಳು ಕಳೆದ ಬಳಿಕ ಗುರುವಾರ ಮಧ್ಯಾಹ್ನ ಲಕ್ಕೇಬೈಲ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯೊಂದರ ನಡುವೆ ವ್ಯಕ್ತಿಯ ಅಸ್ತಿಪಂಜರ, ತಲೆಬುರುಡೆಗಳು ಪತ್ತೆಯಾಗಿದ್ದು, ಅಸ್ತಿಪಂಜರ ಮತ್ತು ತಲೆಬುರುಡೆಗಳ ಬಗ್ಗೆ ತನಿಖೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ರಾಮಚಂದ್ರ ಅವರದ್ದು ಎಂದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಹೊಲಕ್ಕೆ ಮೇವು ತರಲು ತೆರಳಿದ್ದ ರಾಮಚಂದ್ರ ಹೊಲದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಇದಕ್ಕೆ ಪುಷ್ಟಿ ನೀಡಲೆಂಬಂತೆ ಅವರ ದೇಹಕ್ಕೆ ವಿದ್ಯುತ್ ತಂತಿ ಸಿಲುಕಿರುವ ಬಗ್ಗೆ ಸ್ಥಳದಲ್ಲಿ ಅವಶೇಷಗಳು ದೊರೆತಿವೆ.
ಲಕ್ಕೇಬೈಲ ಗ್ರಾಮದ ಹಲವೆಡೆ ವಿದ್ಯುತ್ ತಂತಿಗಳು ಧರೆಗುರುಳಿದ ಬಗ್ಗೆ ಗ್ರಾಮಸ್ಥರು ಹೆಸ್ಕಾಂ ಕಚೇರಿಗೆ ತಿಳಿಸಿದ್ದರೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಅವುಗಳ ತೆರವಿಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಲಾಖೆಯ ನಿರ್ಲಕ್ಷ್ಯಕ್ಕೆ ರಾಮಚಂದ್ರ ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಮಚಂದ್ರ ಮೇವು ತರಲು ಹೊಲಕ್ಕೆ ಹೋದಾಗ ಅವರು ನೆಲದಲ್ಲಿ ತುಂಡರಿಸಿ ಬಿದ್ದಿದ್ದ ಪ್ರವಹಿಸುತ್ತಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಿದ್ದಾರೆ.
ಘಟನೆಯ ಬಗ್ಗೆ ಹೆಸ್ಕಾಂನ ಖಾನಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿರುದ್ಧ ಐಪಿಸಿ ಸೆಕ್ಷನ್ 306ರಡಿ ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
https://pragati.taskdun.com/latest/belagavi-police-alert-to-public-regarding-5g/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ