Latest

ದಯವಿಟ್ಟು ಆ ರೀತಿ ಹೇಳಬೇಡಿ…ಶ್ರೀರಾಮಚಂದ್ರನ ಪಾದದ ಧೂಳಿಗೂ ನಾನು ಸಮನಲ್ಲ ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸ್ ಸಿ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಶಾಸಕರು, ಸಚಿವರು ಹಾಡಿ ಹೊಗಳುತ್ತಿದ್ದಾರೆ. ದ್ವಾಪರಯುಗದಲ್ಲಿ ನಮ್ಮ ಸಮಾಜಕ್ಕೆ ಶ್ರೀರಾಮಚಂದ್ರ ನಿಂತ. ಕಲಿಯುಗದಲ್ಲಿ ಶ್ರೀರಾಮನಂತೆ ಬೊಮ್ಮಾಯಿ ನಿಂತಿದ್ದಾರೆ ಎಂದು ಸಚಿವ ಶ್ರೀರಾಮುಲು ಶ್ಲಾಘಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಮೀಸಲಾತಿ ಹೆಚ್ಚಳವಾಗಬೇಕಾದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ನಾನು ಅವತ್ತೇ ಹೇಳಿದ್ದೆ. ನನ್ನ ಸರ್ಕಾರ ಅಧಿಕಾರಕ್ಕೆ ಬರಬೇಕು ಮೀಸಲಾತಿ ಹೆಚ್ಚಳ ಮಾಡುವುದಾಗಿ ಭರವಸೆ ಕೊಟ್ಟಿದ್ದೆ. ಆದರೆ ನನ್ನನ್ನುಹಲವರು ಗೇಲಿ ಮಾಡಿದ್ದರು. ಆದರೂ ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ. ಬೊಮ್ಮಾಯಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇಂದು ಮೀಸಲಾತಿ ಹೆಚ್ಚಳ ಘೋಷಣೆ ಮಾಡಲಾಗಿದೆ. ವಾಲ್ಮಿಕಿ ಸಮಾಜ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದೆ ಎಂದರು.

ನಮ್ಮ ಸಮುದಾಯದ ಜನ ವಿಧಾನಸೌಧದ ಈ ಮೆಟ್ಟಿಲು ನೋಡಿಯೇ ಇರಲಿಲ್ಲ. ಯಾವತ್ತೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ. ದ್ವಾಪರಯುಗದಲ್ಲಿ ನಮ್ಮ ಸಮಾಜಕ್ಕೆ ಶ್ರೀರಾಮಚಂದ್ರ ನಿಂತ. ಕಲಿಯುಗದಲ್ಲಿ ಶ್ರೀರಾಮನಂತೆ ಸಿಎಂ ಬೊಮ್ಮಾಯಿ ನಿಂತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಶಾಸಕ ರಾಜು ಗೌಡ ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಮೀಸಲಾತಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ ಅಣ್ಣನವರದ್ದು ಗಂದುಗಲಿ ಗುಂಡಿಗೆ ಎಂದು ಹಾಡಿ ಹೊಗಳಿದ್ದಾರೆ.

ಇಂದು ಜೀವನದಲ್ಲಿ ಮರೆಯಲಾಗದ ಸಂದರ್ಭ. 77 ವರ್ಷಗಳ ಬಳಿಕ ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿರುವುದು ಐತಿಹಾಸಿಕ ನಿರ್ಧಾರ. ಇಂತಹ ಘೋಷಣೆ ಮಾಡಲು ಎರಡು ಗುಂಡಿಗೆ ಇರಬೇಕು. ಅಂತಹ ಗುಂಡಿಗೆ ನಮ್ಮ ಬೊಮ್ಮಾಯಿ ಅಣ್ಣನವರಿಗಿದೆ. ಇದಕ್ಕಾಗಿ ಈ ಜೀವವಿರುವವರೆಗೂ ಗುಲಾಮರಾಗಿ ಇರ್ತೀವಿ ಎಂದು ಹೇಳುತ್ತಾ ವೇದಿಕೆಯ ಮೇಲೆಯೇ ಸಾಷ್ಟಾಂಗ ನಮಸ್ಕಾರ ಮಾಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಶ್ರೀರಾಮುಲು ಹಾಗೂ ಶಾಸಕ ರಾಜುಗೌಡ ಅವರಿಗೆ ದಯವಿಟ್ಟು ಹೀಗೆ ಹೇಳಬೇಡಿ ಎಂದು ಹೇಳಿದರು.

ಶ್ರೀರಾಮುಲು ಅವರು ನನ್ನನ್ನು ಶ್ರೀರಾಮಚಂದ್ರ ಎನ್ನುತ್ತಿದ್ದಾರೆ. ದಯವಿಟ್ಟು ಹೀಗೆ ಹೇಳಬೆಡಿ…ನಾನು ಶ್ರೀರಾಮನ ಪಾದದ ಧೂಳಿಗೂ ಸಮನಲ್ಲ. ನ್ಯಾಯ, ನೀತಿ ಆದರ್ಶ ಮತ್ತು ನಡತೆಯಲ್ಲಿ ಶ್ರೀರಾಮಚಂದ್ರ ಒಬ್ಬನೇ ಎಂದು ಹೇಳಿದರು.

ಇನ್ನು ಶಾಸಕ ರಾಜುಗೌಡ ಹೇಳಿಕೆಗೆ ಗರಂ ಆದ ಸಿಎಂ ಬೊಮ್ಮಾಯಿ, ರಾಜುಗೌಡ ಅವರು ಗುಲಾಮನಾಗಿರ್ತೀನಿ ಎಂದು ಹೇಳಿದ್ದು ಸರಿಯಲ್ಲ. ಜೀವನದಲ್ಲಿ  ಯಾರೂ ಯಾರಿಗೂ ಗುಲಾಮರಾಗಿರುವ ಅವಶ್ಯಕತೆ ಇಲ್ಲ. ಗುಲಾಮನಾಗಿರಬೇಕು ಎಂದರೆ ನಿನಗೆ ಬದುಕು ಕೊಟ್ಟ ದೇವರಿಗೆ ಗುಲಾಮನಾಗಿರು. ಭೂಮಿ ಮೇಲೆ ಇರುವ ಜನರಿಗೆ  ಗುಲಾಮರಾಗಬೇಕಿಲ್ಲ ಎಂದರು.

https://pragati.taskdun.com/latest/maharshi-valmikhi-jayanticm-basavaraj-bommaivalmiki-statue/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button