Kannada NewsLatest

ನಿರಾಣಿ ಸಮೂಹದ ವಿಶಾಲ ಸಹಕಾರಿ ರಾಜ್ಯಾದ್ಯಂತ ವಿಸ್ತರಿಸಲಿ – ಸಿಎಂ ಬೊಮ್ಮಾಯಿ

ಬೆಳಗಾವಿ ಶಾಖೆ ಉದ್ಘಾಟನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ  ಕಾಳಿ ಅಂಬ್ರಾಯಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ನಿರಾಣಿ ಸಮೂಹ ಸಂಸ್ಥೆಗಳಲ್ಲಿ ಒಂದಾಗಿರುವ ವಿಶಾಲ ಸೌಹಾರ್ದ ಸಹಕಾರಿ ಬ್ಯಾಂಕಿನ ಬೆಳಗಾವಿ ಶಾಖೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮುರುಗೇಶ ನಿರಾಣಿ ಅವರು ರೈತರ ಬದುಕನ್ನು ಹಸನುಗೊಳಿಸಲು ಸದಾ ಪ್ರಯತ್ನದಲ್ಲಿರುತ್ತಾರೆ. ರೈತರ ಅಭಿವೃದ್ಧಿಗಾಗಿಯೇ ಅವರು ವಿಶಾಲ ಸಹಕಾರಿ ಪ್ರಾರಂಭಿಸಿದ್ದು, ಸಹಕಾರಿಯು ರಾಜ್ಯದಾಧ್ಯಂತ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಎಷ್ಟೇ ಶ್ರೀಮಂತಿಕೆ ಬಂದರೂ, ದೊಡ್ಡ ಅಧಿಕಾರ ದೊರೆತರೂ ನಿರಾಣಿ ಸಹೋದರರು ಎಲ್ಲರೊಂದಿಗೆ ಅತ್ಯಂತ ವಿನಯಪೂರ್ವಕವಾಗಿ ನಡೆದುಕೊಳ್ಳುವುದು ಅವರ ದೊಡ್ಡ ಗುಣ. ಹಾಗಾಗಿ ಅವರಿಗೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಪ್ರಾಪ್ತವಾಗುತ್ತಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮ ಪ್ರಭು ಸ್ವಾಮೀಜಿ ಮಾತನಾಡಿ, ನಿರಾಣಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಗಳು ಬೆಳಗಾವಿಗೂ ಬರುತ್ತಿರುವುದು ಖುಷಿ ತಂದಿದೆ ಎಂದರು.

ಸೌಹಾರ್ದ ಸಹಕಾರಿಯ ಅಧ್ಯಕ್ಷ ಸಂಗಮೇಶ ನಿರಾಣಿ ಮಾತನಾಡಿ, ರೈತರೊಂದಿಗೆ ಕೆಲಸ ಮಾಡಬೇಕು ಎಂಬುದು ಮುರುಗೇಶ ನಿರಾಣಿ ಅವರ ಇಚ್ಛೆ. ಹಾಗಾಗಿ ಬೇರೆ ಯಾವುದೇ ಉದ್ಯಮಗಳಿಗಿಂತ ಸಕ್ಕರೆ ಉದ್ಯಮಗಳನ್ನು ಅವರು ಬೆಳೆಸಿದ್ದಾರೆ. ಅದೇ ರೀತಿ ರೈತರಿಗೆ ನೆರವಾಗುವ ಸಲುವಾಗಿ ೧೦ ವರ್ಷಗಳ ಹಿಂದೆ ವಿಜಯ ಸೌಹಾರ್ದ ಪ್ರಾರಂಭಿಸಲಾಗಿತ್ತು. ವಿಜಯ ಸೌಹಾರ್ದವು ಈಗ ಅಗಾಧವಾಗಿ ಬೆಳೆದಿದ್ದು ರಾಷ್ಟ್ರೀಕೃತ ಬ್ಯಾಂಕ್ ಆಗಿ ಪರಿವರ್ತಿಸಲು ಪ್ರಯತ್ನ ನಡೆಸಿದ್ದೇವೆ. ಅದು ರಾಷ್ಟ್ರೀಕೃತ ಬ್ಯಾಂಕ್ ಆದಲ್ಲಿ ಮತ್ತೊಂದು ಸಹಕಾರಿ ಬ್ಯಾಂಕ್ ಬೇಕು ಎಂಬ ಉದ್ದೇಶದಿಂದ ವಿಶಾಲ ಸೌಹಾರ್ದ ಸಹಕಾರಿಯನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು ಎಂದರು.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರಾದ ಬೈರತಿ ಬಸವರಾಜ, ಮುರುಗೇಶ ನಿರಾಣಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ, ಶಾಸಕ ಅನಿಲ ಬೆನಕೆ, ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ವಿಪ ಸದಸ್ಯರಾದ ಪ್ರಕಾಶ ಹುಕ್ಕೇರಿ, ಎಸ್. ವಿ. ಸಂಕನೂರ, ಸಂಜಯ ಪಾಟೀಲ, ಡಾ.ಗಿರೀಶ ಸೋನವಾಲ್ಕರ್ ಮೊದಲಾದವರು ಇದ್ದರು.

ಬೆಳಗಾವಿಯಲ್ಲಿ ನಿರಾಣಿ ಸಮೂಹದ ವಿಶಾಲ ಸೌಹರ್ದ ಸಹಕಾರಿ ಶಾಖೆ ನಾಳೆ ಉದ್ಘಾಟನೆ ; ಸಿಎಂ, ಕೇಂದ್ರ ಸಚಿವರು ಭಾಗಿ

https://pragati.taskdun.com/belgaum-news/inauguration-of-vishal-souharda-cooperative-branch-in-belgaum-tomorrow-cm-union-minister-participated/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button