ರಮೇಶ ಜಾರಕಿಹೊಳಿ ಮಂತ್ರಿ ಮಾಡ್ತಾರಾ, ಇಲ್ಲಾ ಮತ್ತೊಂದು ಚಾಕಲೇಟ್ ಕೊಟ್ಟು ಹೋದ್ರಾ ಅರುಣ ಸಿಂಗ್?
ಎಂ.ಕೆ.ಹೆಗಡೆ, ಬೆಳಗಾವಿ : ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಹೋದರರೂ, ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಕಳೆದ ವಾರ ಬೆಳಗಾವಿಯಲ್ಲಿ ಹೇಳಿದ ಚಾಕಲೋಟ್ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರಕಾರ ಬೀಳಿಸಿ ಬಿಜೆಪಿ ಸರಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ರಮೇಶ ಜಾರಕಿಹೊಳಿ. ಇದ್ದ ಮಂತ್ರಿಸ್ಥಾನವನ್ನು ತ್ಯಜಿಸಿ, ಭಿನ್ನಮತೀಯರನ್ನೆಲ್ಲ ಒಂದುಗೂಡಿಸಿ ಇನ್ನಿಲ್ಲದ ಕಷ್ಟಪಟ್ಟು ಬಿಜೆಪಿ ಸರಕಾರ ತಂದಿದ್ದಾರೆ.
ಆದರೆ ಸಿಡಿ ಹಗರಣದಲ್ಲಿ ಸಿಲುಕಿ, ಬಿಜೆಪಿ ಸರಕಾರದ ಅತ್ಯಂತ ಮಹತ್ವದ ಖಾತೆಯಾಗಿದ್ದ ಜಲಸಂಪನ್ಮೂಲ ಇಲಾಖೆಯನ್ನು ಕಳೆದುಕೊಳ್ಳಬೇಕಾಯಿತು. ಆದಷ್ಟು ಬೇಗ ಹಗರಣದಿಂದ ಹೊರಗೆ ಬಂದು ಮತ್ತೆ ಮಂತ್ರಿಯಾಗುವ ನಿರೀಕ್ಷೆ ಅವರದ್ದಾಗಿತ್ತು. ಜೊತೆಗೆ ಬಿಜೆಪಿ ನಾಯಕರೂ ಅಂತಹ ಭರವಸೆಯನ್ನು ರಮೇಶ ಜಾರಕಿಹೊಳಿ ಅವರಿಗೆ ನೀಡಿದ್ದರು.
ಆದರೆ ವರ್ಷಗಳೇ ಉರುಳಿದರೂ ಹಗರಣ ಅಂತ್ಯ ಕಾಣುತ್ತಿಲ್ಲ. ಬಿಜೆಪಿ ಸರಕಾರವೂ ರಮೇಶ ಜಾರಕಿಹೊಳಿಗೆ ಸಚಿವಸ್ಥಾನ ಕೊಡುವ ಆಸಕ್ತಿ ತೋರಿಸುತ್ತಿಲ್ಲ. ಅಲ್ಲದೆ, ಜೊತೆಗೆ ಬಂದವರೂ ರಮೇಶ ಜಾರಕಿಹೊಳಿಗೆ ಮಂತ್ರಿಸ್ಥಾನ ಕೊಡುವ ವಿಷಯದಲ್ಲಿ ಅಷ್ಟಾಗಿ ಆಸಕ್ತರಿದ್ದಂತೆ ಕಾಣುತ್ತಿಲ್ಲ. ಹಾಗಾಗಿ ರಮೇಶ ಜಾರಕಿಹೊಳಿಗೆ ಇನ್ನೂ ಅಜ್ಞಾತವಾಸ ಮುಗಿದಿಲ್ಲ.
ಚಾಕಲೇಟ್ ಕೊಟ್ಟು ಹೋಗ್ತಾರೆ
ಮುಖ್ಯಮಂತ್ರಿಯಿಂದ ಹಿಡಿದು ಯಾವುದೇ ಮಂತ್ರಿಗಳು, ಬಿಜೆಪಿಯ ರಾಜ್ಯಧ್ಯಕ್ಷರಿಂದ ಹಿಡಿದು ಯಾವುದೇ ಪದಾಧಿಕಾರಿಗಳು ಬೆಳಗಾವಿ ಜಿಲ್ಲೆಗೆ ಬಂದಾಗಲೆಲ್ಲ, ರಮೇಶ ಜಾರಕಿಹೊಳಿಗೆ ಶೀಘ್ರದಲ್ಲೇ ಸಚಿವಸ್ಥಾನ ಸಿಗಲಿದೆ ಎಂದು ಹೇಳಿ ಹೋಗುತ್ತಾರೆ. ರಮೇಶ ಜಾರಕಿಹೊಳಿ ಸಚಿವಸ್ಥಾನ ಕಳೆದುಕೊಂಡಾಗಿನಿಂದಲೇ ಹಾಗೆ ಹೇಳುತ್ತ ಬಂದಿದ್ದಾರೆ. ಆದರೆ ಅದು ಮಾತ್ರ ಈಡೇರುತ್ತಿಲ್ಲ. ಆ ಶೀಘ್ರ ಬರುತ್ತಲೇ ಇಲ್ಲ.
ಹಾಗಾಗಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬಿಜೆಪಿಯವರು ಬಂದಾಗೊಮ್ಮೆ ರಮೇಶ ಜಾರಕಿಹೊಳಿಗೆ ಚಾಕಲೇಟ್ ಕೊಟ್ಟು ಹೋಗುತ್ತಾರೆ. ಮತ್ತೆ ಮುಂದಿನಬಾರಿ ಬಂದಾಗ ಮತ್ತೊಂದು ಚಾಕಲೇಟ್ ಕೊಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ತನ್ಮೂಲಕ ರಮೇಶ ಜಾರಕಿಹೊಳಿಗೆ ಮಂತ್ರಿಸ್ಥಾನ ಕೊಡುವ ಇಚ್ಛೆಯಾಗಲಿ, ಸಾಧ್ಯತೆಯಾಗಲಿ ಇಲ್ಲ. ಸುಮ್ಮನೇ ಟೈಂ ಪಾಸ್ ಮಾಡುತ್ತಿದ್ದಾರೆ ಎನ್ನುವುದು ಸತೀಶ್ ಜಾರಕಿಹೊಳಿ ಅವರ ಹೇಳಿಕೆಯ ಅರ್ಥ.
ಅರುಣ ಸಿಂಗ್ ಮತ್ತೊಂದು ಚಾಕಲೇಟ್ ಕೊಟ್ರಾ?
2 ದಿನಗಳ ಹಿಂದೆ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿಗೆೆ ಬಂದಿದ್ದರು. ಅಂದು ಸುಮಾರು ಒಂದು ಗಂಟೆಗಳ ಕಾಲ ರಮೇಶ ಜಾರಕಿಹೊಳಿ ಜೊತೆಗೆ ಅವರು ಗುಪ್ತವಾಗಿ ಚರ್ಚಿಸಿದ್ದಾರೆ. ಆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅರುಣ ಸಿಂಗ್ ರಮೇಶ ಜಾರಕಿಹೊಳಿಗೆ ಶೀಘ್ರದಲ್ಲೇ ಸಚಿವಸ್ಥಾನ ಸಿಗಲಿದೆ. ಜೊತೆಗೆ ಪಕ್ಷದಲ್ಲಿ ಮಹತ್ವದ ಸ್ಥಾನ ನೀಡಲಾಗುವುದು ಎಂದು ಹೇಳಿದರು.
ಸುದ್ದಿ ಮೂಲಗಳ ಪ್ರಕಾರ ರಮೇಶ ಜಾರಕಿಹೊಳಿ ಅರುಣ ಸಿಂಗ್ ಬಳಿ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ತಮ್ಮನ್ನು ಪುನಃ ಸಚಿವರನ್ನಾಗಿಸಲು ಬಿಜೆಪಿಯ ಯಾರೊಬ್ಬರೂ ಆಸಕ್ತರಾಗಿಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ. ಹಾಗಾಗಿ ಅವರ ಸಿಟ್ಟನ್ನು ತಣಿಸಿ, ಸಮಾಧಾನಪಡಿಸುವ ಪ್ರಯತ್ನವನ್ನು ಅರುಣ ಸಿಂಗ್ ಮಾಡಿದ್ದಾರೆ. ಅಂದರೆ ಮತ್ತೊಂದು ಚಾಕಲೇಟ್ ಕೊಟ್ಟು ಹೋಗುವ ಕೆಲಸವನ್ನಷ್ಟೆ ಅರುಣಸಿಂಗ್ ಮಾಡಿದ್ದಾರೆ.
ಶೀಘ್ರದಲ್ಲೇ ಸಚಿವಸಂಪುಟ ವಿಸ್ತರಣೆ ನಡೆಯಲಿದೆ. ಆದಷ್ಟು ಬೇಗ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನೇಕ ಸಲ ಹೇಳಿದ್ದಾರೆ. ಅವರ ಹೇಳಿಕೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಸಿಎಂ ಸಹ ರಮೇಶ ಜಾರಕಿಹೊಳಿ ಜೊತೆಗೆ ಇನ್ನಷ್ಟು ಅಸಮಾಧಾನಿತರಿಗೆ ಚಾಕಲೇಟ್ ಕೊಡುವ ಕೆಲಸವನ್ನಷ್ಟೆ ಮಾಡುತ್ತಿದ್ದಾರೆಯೇ?
ಇನ್ನೇನು 6-7 ತಿಂಗಳಲ್ಲಿ ಚುನಾವಣೆ ಬರಲಿದೆ. ಈ ಹೊತ್ತಿನಲ್ಲಿ ಸಂಪುಟ ವಿಸ್ತರಣೆ ಎಂಬ ಬೆಂಕಿಗೆ ಕೈ ಹಾಕಿ ಕೈ ಸುಟ್ಟುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತದೆಯೇ?
ಕಾದು ನೋಡೋಣ.
ಸಿದ್ದರಾಮಯ್ಯಗೆ ಸವಾಲು ಹಾಕಿದ ಸಿಎಂ ಬೊಮ್ಮಾಯಿ
https://pragati.taskdun.com/politics/cm-basavaraj-bommaibidarjanasankalpa-yatre/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ