ಪ್ರಗತಿವಾಹಿನಿ ಸುದ್ದಿ, ಮೈಸೂರು: ಫೋರ್ಚುಗೀಸರ ಆಗಮನಕ್ಕೂ ಮುನ್ನ ಪುರಾಣ ಕಾಲದಿಂದಲೂ ‘ಗೋಮಾಂತಕ’ ಎಂದೇ ಕರೆಯಲಾಗುತ್ತಿದ್ದ ಈಗಿನ ಗೋವಾ ಇತ್ತೀಚಿನ ದಿನಗಳಲ್ಲಿ ಕೇವಲ ಬೀಚ್ ಪ್ರವಾಸೋದ್ಯಮ, ಪಬ್ ಗಳು, ಬಾರ್ ಗಳು, ಕ್ಯಾಸಿನೋಗಳನ್ನು ಹೊಂದಿದ, ಹೊಸ ವರ್ಷಾಚರಣೆಯ ಮೋಜು ಮಸ್ತಿಯ ತಾಣವೆಂದೇ ಬಿಂಬಿಸಲ್ಪಡುತ್ತಿದೆ.
ಆದರೆ ವಾಸ್ತವದಲ್ಲಿ ಇದೊಂದು ಧಾರ್ಮಿಕ, ಸಾಂಸ್ಕೃತಿಕ, ಕಲಾ ಶ್ರೀಮಂತಿಕೆಯ ನೆಲೆ ಎಂಬುದು ಅನೇಕ ಜನರಿಗೆ ತಿಳಿದಿರದ ವಿಷಯ. ಗೋವಾದ ನೈಜತೆ ಸಾರುವ ನಿಟ್ಟಿನಲ್ಲಿ ಇದೀಗ ಅಲ್ಲಿನ ಕಲಾವಿದರು ಅಣಿಯಾಗಿದ್ದಾರೆ. ಅದರ ಭಾಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೋವಾ ಸಂಸ್ಕೃತಿಯ ಸೊಗಡಿನ ಅನಾವರಣಗೊಂಡಿದೆ.
ಗೋವಾ ರಾಜ್ಯ ಪೋರ್ಚಗೀಸರಿಂದ ಸ್ವಾತಂತ್ರ್ಯಗೊಂಡು 60 ವರ್ಷವಾಗಿದೆ Goa@60. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ದೇಶದಾದ್ಯಂತ ಸಂಭ್ರಮಾಚರಣೆ ಮಾಡುತ್ತಿದೆ. ಇದರ ಜೊತೆಗೆ ಗೋವಾದ ಪ್ರವಾಸೋದ್ಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಗೋವಾದಿಂದ 15 ಜನ ಕಲಾವಿದರು ಮೈಸೂರಿಗೆ ಆಗಮಿಸಿ ಇಲ್ಲಿನ ಪ್ರವಾಸಿ ತಾಣ ಬೃಹತ್ ವಾಣಿಜ್ಯ ಮಳಿಗೆಗಳು ಸೇರಿದಂತೆ ನಾನಾ ಕಡೆಗಳಲ್ಲಿ ಗೋವಾ ಸಂಸ್ಕೃತಿ, ಕಲೆಯ ಪರಿಚಯ ಮಾಡಿಕೊಡುತ್ತಿದ್ದಾರೆ.
ಆಕರ್ಷಕ ದೀಪದ ನೃತ್ಯ, ಗೋವಾ ಜನಪದ ಗೀತೆಗಳು, ನೃತ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಗೋವಾದ ಸಾಂಪ್ರದಾಯಿಕ ಆಹಾರ ಪದ್ಧತಿ, ಪ್ರವಾಸಿ ತಾಣಗಳ ಬಗ್ಗೆಯೂ ಪರಿಚಯ ಮಾಡಿಕೊಡುತ್ತಿದ್ದಾರೆ.
ಮೂರು ದಿನ ಗೋವಾ ಕಲಾವಿದರು ತಮ್ಮ ರಾಜ್ಯದ ಪರಿಚಯ ಮಾಡಿಕೊಡಲಿದ್ದಾರೆ. ‘ಗೋವಾಕ್ಕೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ’ ಎಂದು ಮನವಿ ಸಾರುತ್ತಿದ್ದಾರೆ. ನೈಜ ‘ಗೋಮಾಂತಕ’ದ ಚಿತ್ರಣಗಳ ಅನಾವರಣ ಮೈಸೂರಿಗರ ಮನ ತಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ