ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆನ್ನುವ ಹೋರಾಟ ಕುತೂಹಲ ಘಟ್ಟ ತಲುಪಿದ್ದು, ಡಿಸೆಂಬರ್ 12ರಂದು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ.
ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಈ ವಿಷಯ ಪ್ರಕಟಿಸಿದ್ದು, 25 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
2ಎ ಮೀಸಲಾತಿ ಹೋರಾಟ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ. ಲಿಂಗಾಯತರಲ್ಲಿ ಶೇ 82ರಷ್ಟು ಬಹುಸಂಖ್ಯಾತರು ಪಂಚಮಸಾಲಿ ಸಮಾಜದವರು. ಆದರೆ ನಾವು ಅಧಿಕಾರದಿಂದ ವಂಚಿತರಾಗಿದ್ದಾರೆ. ಹೃದಯವಂತ ಸಮಾಜ ನಮ್ಮದು. ನಾನು ಪೀಠಾಧ್ಯಕ್ಷನಾದ ಬಳಿಕ ಎಂದೆಂದಿಗೂ ಯಾರನ್ನೂ ಏನನ್ನೂ ಕೇಳಿಲ್ಲ. ಮೀಸಲಾತಿ ಸಿಗೋವರೆಗೂ ಏನೂ ಬೇಡ, ಹೋರಾಟಕ್ಕೆ ಬನ್ನಿ ಎಂದು ಕರೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
2ಎ ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದು ಹೋಗಿದೆ. ಸರ್ಕಾರ ನಾಲ್ಕು ಬಾರಿ ಮಾತು ಕೊಟ್ಟು ಮರಿದುಕೊಂಡಿದೆ. ಹೀಗಾಗಿ, ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಎಸ್ಸಿ ಎಸ್ಟಿ ಸಮಾಜಕ್ಕೆ ಮೀಸಲಾತಿ ಕೊಟ್ಟಂತೆ ನಮಗೂ ಮೀಸಲಾತಿ ಕೊಡಬೇಕು. ಚುನಾವಣೆ ಬರುವ ಮುಂಚೆ ಮೀಸಲಾತಿ ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳಿಗೆ ಕಳಕಳಿ ಇದ್ದರೆ ಮೀಸಲಾತಿಯನ್ನು ಕೂಡಲೇ ಘೋಷಿಸಲಿ ಎಂದು ಸವಾಲು ಹಾಕಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ