Kannada NewsLatest

ಜೂನ್ 9ರಂದು ರಾಜ್ಯರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ?

ಪ್ರಗತಿವಾಹಿನಿ, ಬೆಳಗಾವಿ:

ಕರ್ನಾಟಕದ ರಾಜಕಾರಣದಲ್ಲಿ ನಾಡಿದ್ದು ಭಾನುವಾರ (ಜೂ.9) ಅತ್ಯಂತ ಪ್ರಮುಖ ದಿನವಾಗಲಿದೆ ಎನ್ನುವ ದಟ್ಟ ವದಂತಿ ಬೆಂಗಳೂರಿನಲ್ಲಿ ಹರಡಿದೆ.

ಭಾನುವಾರ ಕಾಂಗ್ರೆಸ್ ನ ದೊಡ್ಡ ಸಂಖ್ಯೆಯ ಶಾಸಕರು ರಾಜಿನಾಮೆ ನೀಡಲಿದ್ದಾರೆ. ಸಮ್ಮಿಶ್ರ ಸರಕಾರಕ್ಕೆ ಆಪತ್ತು ಬರಲಿದೆ ಎನ್ನುವ ಸುದ್ದಿ ದಟ್ಟವಾಗಿದೆ.

ದೀಪಾವಳಿ, ಯುಗಾದಿ, ಸಂಕ್ರಾಂತಿ ಎಂದು ಹಲವು ಬಾರಿ ದಿನ ನಿಗದಿಯಾಗಿ ಟುಸ್ ಆಗಿದೆ. ಈ ಬಾರಿಯೂ ಅಂತದ್ದೇ ಆಗಲಿದೆಯೇ ಅಥವಾ ನಿಜವಾಗಲೂ ಏನಾದರೂ ಘಟಿಸಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಕಳೆದ ಕೆಲವು ದಿನದಿಂದ ಬಿಜೆಪಿ ಆಪರೇಶನ್ ಪ್ರಯತ್ನ ಕೈ ಬಿಟ್ಟಿದೆ. ಆದರೆ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಸುಮ್ಮನೆ ಕುಳಿತಿಲ್ಲ. ರಮೇಶ್ ಗೆ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಏನನ್ನಾದರೂ ಮಾಡಿ ತೋರಿಸಲೇಬೇಕು ಎದು ಪಟ್ಟು ಹಿಡಿದಿರುವ ಅವರು ತೀವ್ರ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ರಮೇಶ್ ಗೆ ರಾಜಕೀಯ ಅಸ್ಥಿತ್ವದ ಪ್ರಶ್ನೆಯೂ ಹೌದು. ಕಾಂಗ್ರೆಸ್ ನ ಒಂದಿಷ್ಟು ಶಾಸಕರನ್ನು ರಾಜಿನಾಮೆ ಕೊಡಿಸಿ, ಸರಕಾರಕ್ಕೆ ಆಪತ್ತು ತಂದಲ್ಲಿ ರಮೇಶ ಮತ್ತೆ ರಾಜ್ಯ ರಾಜಕಾರಣದಲ್ಲಿ ಮುಂಚೂಣಿೆ ಬರಬಹುದು. ಇಲ್ಲವಾದಲ್ಲಿ ಅವರು ತೀವ್ರ ಹಿನ್ನಡೆ ಅನುಭವಿಸಲಿದ್ದಾರೆ.

ಕಾಂಗ್ರೆಸ್ ನ ಹಲವು ಹಿರಿಯ ನಾಯಕರೂ ಕಳೆದ ಕೆಲವು ದಿನಗಳಿಂದ ಅತೃಪ್ತಿ ಹೊರಹಾಕುತ್ತಿದ್ದಾರೆ. ರೋಶನ್ ಬೇಗ್, ರಾಮಲಿಂಗಾ ರಡ್ಡಿ ಮತ್ತಿತರರು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಇವರ ಜೊತೆಗೆ ಈ ಹಿಂದೆಯೇ ಅಸಮಾಧಾನಿತರೆಂದು ಗುರುತಿಸಲ್ಪಟ್ಟಿರುವ ಮಹೇಶ ಕುಮಠಳ್ಳಿ, ಸುಧಾಕರ ಮೊದಲಾದವರು ರಮೇಶ ಜೊತೆ ಇದ್ದಾರೆ.

ಒಟ್ಟಾರೆ ಕಳೆದ ಕೆಲವು ದಿನಗಳಿಂದ ಮತ್ತೆ ತೀವ್ರ ರಾಜಕೀಯ ಭಿನ್ನಮತೀಯ ಚಟುವಟಿಕೆಗಳು ನಡೆಯುತ್ತಿದ್ದು, ಭಾನುವಾರದ ಮತ್ತೊಂದು ಗಡುವು ನಿಗದಿಯಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button